Alastair Cook: ಈಗಲೂ ಕಾಲ ಮಿಂಚಿಲ್ಲ ಆರ್‌ಸಿಬಿ ತೊರೆದು ಇಂಗ್ಲೆಂಡ್‌ಗೆ ಬಂದ್ಬಿಡು: ಬೆಥೆಲ್‌ಗೆ ಮಾಜಿ ಕ್ರಿಕೆಟರ್‌ ಸಲಹೆ

Alastair Cook: ಇತ್ತೀಚೆಗಷ್ಟೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಜೇಕಬ್ ಬೆಥೆಲ್ ಅವರನ್ನು ಐಪಿಎಲ್‌ ಟೂರ್ನಿ ಬಿಟ್ಟು ಇಂಗ್ಲೆಂಡ್‌ಗೆ ಮರಳುವುದು ಒಳ್ಳೆಯದು ಎಂದು ಅಲಸ್ಟೇರ್ ಕುಕ್ ಹೇಳಿದ್ದರು. ಬಳಿಕ ಇದಕ್ಕೆ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿ ಐಪಿಎಲ್‌ ಬಗ್ಗೆ ನಿಮಗೇನು ಗೊತ್ತು ಅಂತಾ ತಿರುಗೇಟು ಕೊಟ್ಟಿದ್ದರು. ಇದೀಗ ಕುಕ್‌ ಪೀಟರ್ಸನ್‌ ಹೇಳಿಕೆಗೆ ಟಾಂಟ್‌ ಕೊಟ್ಟಿದ್ದು, ಇದು ಕ್ರಿಕೆಟ್‌ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟೈರ್ ಕುಕ್ ಅವರು ಯುವ ಸ್ಟಾರ್ ಬ್ಯಾಟರ್ ಜೇಕಬ್ ಬೆಥೆಲ್ ಮತ್ತು ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಅಭಿಯಾನದ ಕುರಿತ ಚರ್ಚೆಯಲ್ಲಿ ತಮ್ಮ ಮಾಜಿ ಸಹ ಆಟಗಾರ ಕೆವಿನ್ ಪೀಟರ್ಸನ್ ವಿರುದ್ಧ ಮತ್ತೊಮ್ಮೆ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

Alastair Cook Takes Fresh Dig at Kevin Pietersen Over RCB star Batter Jacob Bethell s IPL 2026 Stay

ಪೀಟರ್ಸನ್‌ಗೆ ಕುಕ್‌ ಟಾಂಟ್‌

ಆರ್‌ಸಿಬಿ ತಂಡದಲ್ಲಿರುವ ಬೆಥೆಲ್ ಅವರು ಪಂದ್ಯಗಳನ್ನು ಆಡದೆ ಬೆಂಚ್ ಮೇಲೆ ಕುಳಿತು ಸಮಯ ಕಳೆಯುವ ಬದಲು, ಇಂಗ್ಲೆಂಡ್‌ಗೆ ಮರಳಿ ದೇಶೀಯ ಕ್ರಿಕೆಟ್ ಆಡುವುದು ಉತ್ತಮ ಎಂಬುದು ಕುಕ್ ಅವರ ವಾದವಾಗಿತ್ತು. ಇದಕ್ಕೆ ಪೀಟರ್ಸನ್ ಐಪಿಎಲ್ ಬಗ್ಗೆ ನಿಮಗೇನು ಗೊತ್ತು, ಈ ಟೂರ್ನಿಯ ಅನುಭವ ಶ್ರೇಷ್ಠವಾದುದು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. ಇದೀಗ ಇದಕ್ಕೆ ಪರೋಕ್ಷವಾಗಿ ಟೀಕಿಸಿದ ಕುಕ್ "ಕೇವಲ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಕಲಿಯುವುದಕ್ಕಿಂತ ಮೈದಾನದಲ್ಲಿ ಪ್ರಾಯೋಗಿಕವಾಗಿ ಆಡುವುದು ಮುಖ್ಯ," ಎಂದು ಪೀಟರ್ಸನ್‌ಗೆ ಟಾಂಟ್‌ ನೀಡಿದ್ದಾರೆ.

ಕುಕ್ ಮತ್ತು ಪೀಟರ್ಸನ್ ನಡುವಿನ ಈ ವಾಕ್ಸಮರವು ಈಗ ಬೆಥೆಲ್ ಅವರ ವೃತ್ತಿಜೀವನದ ಬೆಳವಣಿಗೆಯ ವಿಚಾರದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಜೇಕಬ್ ಬೆಥೆಲ್ ಅವರು ಇತ್ತೀಚೆಗಷ್ಟೇ ನಡೆದ ವಿಶ್ವಕಪ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ನಂತರ ಇಂತಹ ದಿಗ್ಗಜರ ನಡುವೆ ಅವರ ಮುಂದಿನ ಹಾದಿಯ ಬಗ್ಗೆ ನಡೆಯುತ್ತಿರುವ ಈ ಚರ್ಚೆ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಜೇಕಬ್ ಬೆಥೆಲ್ ಅವರು ಐಪಿಎಲ್ 2026ರ ಅಭಿಯಾನವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ಗೆ ಮರಳುವುದು ಉತ್ತಮ. ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುತ್ತಿರುವ ಈ ಯುವ ಆಟಗಾರನ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಸಹಕಾರಿ ಆಗುತ್ತಿಲ್ಲ. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಬೆಥೆಲ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅವರಿಗೆ ನಿರಂತರವಾಗಿ ಪಂದ್ಯಗಳನ್ನು ಆಡುವ ಅವಕಾಶ ಸಿಗುವುದು ಮುಖ್ಯ ಎಂದು ಕುಕ್ ಹೇಳಿದ್ದರು.

ಅಲೆಸ್ಟೈರ್ ಕುಕ್ ಹೇಳಿದ್ದೇನು?

ಸ್ಟಿಕ್ ಟು ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಲೆಸ್ಟೈರ್ ಕುಕ್, ಬೆಥೆಲ್ ಅವರ ಪ್ರತಿಭೆಯನ್ನು ಕೊಂಡಾಡಿದ್ದು, ಅವರು ಇಂಗ್ಲೆಂಡ್ ತಂಡದ ಭವಿಷ್ಯದ ಅಗ್ರ ಕ್ರಮಾಂಕದ ಆಟಗಾರ ಎಂದು ಹೇಳಿದ್ದರು. "ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ ಅವರು ಸಿಡ್ನಿಯಲ್ಲಿ ಆ ಬಲಿಷ್ಠ ಬೌಲಿಂಗ್ ದಾಳಿಯ ವಿರುದ್ಧ ಆ ಪರಿಸ್ಥಿತಿಯಲ್ಲಿ ಆಡಿದ ರೀತಿ ಅದ್ಭುತವಾಗಿತ್ತು. ಆ ಆಟವನ್ನು ನೋಡಿದ ಮೇಲೆ ನನಗೆ ಈತ ಖಂಡಿತವಾಗಿಯೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬಲ್ಲ ಎಂಬ ಭರವಸೆ ಮೂಡಿದೆ. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲರು ಎಂದಾದರೆ ಆರಂಭಿಕರಾಗಿಯೂ ಆಡಬಲ್ಲರು," ಎಂದು ಕುಕ್ ಹೇಳಿದ್ದರು.

ಐಪಿಎಲ್‌ನಲ್ಲಿ ಬೆಥೆಲ್‌ ಬೆಂಚ್ ಕಾಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದು ಸರಿಯಾದ ಪರಿಸ್ಥಿತಿಯಲ್ಲ ಅಲ್ಲವೇ? ಬೆಥೆಲ್ ಅಲ್ಲಿ ಇಬಾರದಿತ್ತು. ಏಕೆಂದರೆ ಅಲ್ಲಿ ಅವರಿಗೆ ಆರಂಭಿಕ ಆಟಗಾರನಾಗಿ ಆಡುವ ಅವಕಾಶ ಸಿಗುತ್ತಿಲ್ಲ. ಅವರು ಐಪಿಎಲ್‌ನಲ್ಲಿ ಏನೂ ಮಾಡದೆ ಸುಮ್ಮನೆ ಕುಳಿತಿದ್ದಾರೆ. ಅದರ ಬದಲಾಗಿ ಅವರು ಮರಳಿ ಬಂದು ವಾರ್ವಿಕ್‌ಶೈರ್ ತಂಡದ ಪರ ಆರಂಭಿಕ ಆಟಗಾರನಾಗಿ ಆಡಿದರೆ ಇಂಗ್ಲೆಂಡ್ ತಂಡಕ್ಕೂ ಸಹಾಯವಾಗುತ್ತದೆ," ಎಂದು ಹೇಳಿದ್ದರು.

ಆದರೆ ಕೆವಿನ್ ಪೀಟರ್ಸನ್ ಈ ಮಾತನ್ನು ವಿರೋಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು "ಐಪಿಎಲ್ ವಾತಾವರಣ ಹೇಗಿರುತ್ತದೆ ಎಂಬ ಬಗ್ಗೆ ಅಲೆಸ್ಟೈರ್ ಕುಕ್ ಅವರಿಗೆ ಯಾವುದೇ ಕಲ್ಪನೆಯಿಲ್ಲ. ಈ ಟೂರ್ನಿ ಬಗ್ಗೆ ಗೊತ್ತಿಲ್ಲದೆ ಅವರು ಮಾತನಾಡುತ್ತಿದ್ದಾರೆ," ಎಂದು ಕುಟುಕಿದ್ದರು.

ಪೀಟರ್‌ಸನ್‌ಗೆ ಮತ್ತೆ ಟಾಂಟ್‌ ಕೊಟ್ಟ ಕುಕ್

ಇದಾದ ಕೆಲವು ವಾರಗಳ ನಂತರ ಅಲೆಸ್ಟೈರ್ ಕುಕ್ ಅವರು ಮತ್ತೆ ಸ್ಟಿಕ್ ಟು ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಬಾರಿ ಅವರು ಐಪಿಎಲ್‌ನ ಹಣಕಾಸಿನ ಬಗ್ಗೆ ಮಾತನಾಡುವ ಮೂಲಕ ಪೀಟರ್‌ಸನ್‌ಗೆ ಟಾಂಟ್‌ ಕೊಟ್ಟಿದ್ದಾರೆ. "ನಾನು ಕೇವಲ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ ಮತ್ತು ಅದನ್ನು ಸಮರ್ಥಿಸಿಕೊಳ್ಳಬಲ್ಲೆ. ಏಕೆಂದರೆ ನಾನು ಆ ಮಾತನ್ನು ಹೇಳಿದಾಗ ಬೆಥೆಲ್ ಅವರಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕಳೆದ ವರ್ಷವೂ ಅವರು ಐಪಿಎಲ್‌ಗೆ ಹೋಗಿದ್ದರು. ಆದರೆ ಆಗಲೂ ಪಂದ್ಯಗಳನ್ನು ಆಡಿರಲಿಲ್ಲ. ಅಂತಹ ವಾತಾವರಣದಲ್ಲಿ ಇರುವ ಲಾಭವನ್ನು ಅವರು ಈಗಾಗಲೇ ಒಂದೆರಡು ಬಾರಿ ಪಡೆದಿದ್ದಾರೆ. ನನ್ನ ಪ್ರಕಾರ ಅವರು ಇಂಗ್ಲೆಂಡ್‌ಗೆ ಮರಳಿ ಬಂದು ಇಲ್ಲಿ ಕ್ರಿಕೆಟ್ ಆಡಬೇಕಿತ್ತು. ಈ ಎಲ್ಲಾ ಚರ್ಚೆಗಳು ನಡೆದ ನಂತರ ಈಗ ಅವರಿಗೆ ಆಡಲು ಸ್ವಲ್ಪ ಅವಕಾಶ ಸಿಗುತ್ತಿದೆ," ಎಂದು ಕುಕ್ ಹೇಳಿದರು.

ಅಲೆಸ್ಟೈರ್ ಕುಕ್ ಅವರು ಆಟಗಾರನ ಬೆಳವಣಿಗೆಯು ಕೇವಲ ಪಕ್ಕದಲ್ಲಿ ಕುಳಿತು ನೋಡುವುದಕ್ಕಿಂತ, ಮೈದಾನಕ್ಕಿಳಿದು ಪಂದ್ಯಗಳನ್ನು ಆಡುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಒತ್ತಿ ಹೇಳಿದರು. "ಅಲ್ಲಿನ ವಾತಾವರಣದಿಂದ ಕಲಿಯಬಹುದು ಎಂಬ ವಾದವನ್ನು ನಾನು ಒಪ್ಪುತ್ತೇನೆ. ಆದರೆ ಕೇವಲ ಕಲಿಕೆಯಿಂದಲೇ ಎಲ್ಲವೂ ಸಾಧ್ಯವಿಲ್ಲ, ಒಂದು ಹಂತದಲ್ಲಿ ನೀವು ಮೈದಾನಕ್ಕಿಳಿದು ಆಡಲೇಬೇಕು," ಎಂದು ಹೇಳಿದರು.

"ಐಪಿಎಲ್ ಒಂದು ಶ್ರೇಷ್ಠ ಟೂರ್ನಿ ಎಂಬುದು ನನಗೂ ಗೊತ್ತು. ಆದರೆ, ಐಪಿಎಲ್ ಸರಿಯಾದ ಟೂರ್ನಿ ಅಲ್ಲ ಎಂದು ಯಾರೂ ಬಹಿರಂಗವಾಗಿ ಹೇಳುವುದಿಲ್ಲ. ಏಕೆಂದರೆ ಅದು ಎಲ್ಲರ ಹಣಕಾಸಿನ ಲಾಭ ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ," ಎಂದು ಅವರು ಹೇಳಿದರು. ಒಟ್ಟಿನಲ್ಲಿ ಈ ಮೂಲಕ ಪೀಟರ್‌ಸನ್‌ ಹೇಳಿಕೆಗೆ ಟಾಂಟ್‌ ನೀಡುವುದಲ್ಲದೆ, ಮತ್ತೆ ಬೆಥೆಲ್‌ ಐಪಿಎಲ್‌ ತೊರೆದು ಇಂಗ್ಲೆಂಟ್‌ಗೆ ಮರಳಿದರೆ ಉತ್ತಮ ಎಂಬ ಅರ್ಥದಲ್ಲೇ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+