ಸ್ವಾತಂತ್ರೋತ್ಸವ ಉಡುಗೊರೆ: ಈ ರಾಜ್ಯಗಳಲ್ಲಿ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ


ಸ್ವಾತಂತ್ರೋತ್ಸವದ ಉಡುಗೊರೆಯಾಗಿ ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ರಾಜ್ಯದ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿವೆ. ಹಲವು ದಿನಗಳಿಂದ ವೇತನ ಹೆಚ್ಚಳಕ್ಕಾಗಿ ನೌಕರರ ಒತ್ತಾಯಕ್ಕೆ ಎರಡೂ ರಾಜ್ಯಗಳ ಸರ್ಕಾರ ಸ್ಪಂದಿಸಿವೆ.

Advertisement

ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ರಾಜ್ಯ ಮಟ್ಟದ ಸಮಾರಂಭದಲ್ಲಿ ಅರಾವಳಿ ಜಿಲ್ಲೆಯ ಮೊಡಸಾದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, 7ನೇ ವೇತನ ಆಯೋಗದ ಅಡಿಯಲ್ಲಿ ಗುಜರಾತ್ ಸರ್ಕಾರಿ ನೌಕರರಿಗೆ ಶೇಕಡಾ 3ರಷ್ಟು ಡಿಎ ಹೆಚ್ಚಳ ಮಾಡುವುದಾಗಿ ಘೋಷಿಣೆ ಮಾಡಿದರು. ನೂತನ ತುಟ್ಟಿಭತ್ಯೆ ಜನವರಿ 1, 2022 ರಿಂದಲೇ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

Advertisement

ಆರನೇ ವೇತನ ಆಯೋಗದ ಅವಧಿ ಅಂತ್ಯ: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಯಾವಾಗ?

ರಾಜ್ಯ ಸರ್ಕಾರದ ಸುಮಾರು 9.38 ಲಕ್ಷ ನೌಕರರು, ಪಂಚಾಯತ್ ಸೇವೆ ಮತ್ತು ಪಿಂಚಣಿದಾರರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಿಎಂ ಭೂಪೇಂದ್ರ ಪಟೇಲ್ ಹೇಳಿದರು. ಶೇಕಡಾ 3 ರಷ್ಟು ಡಿಎ ಹೆಚ್ಚಳದಿಂದ ಗುಜರಾತ್ ರಾಜ್ಯ ಸರ್ಕಾರದ ಮೇಲೆ ವಾರ್ಷಿಕವಾಗಿ ಸುಮಾರು 1400 ಕೋಟಿ ರುಪಾಯಿ ಹೊರೆ ಬೀಳಲಿದೆ.

ಪ್ರತಿ ಕುಟುಂಬಕ್ಕೆ ಒಂದು ಕೆಜಿ ಧಾನ್ಯ ವಿತರಣೆ

ಎನ್‌ಎಫ್‌ಎಸ್‌ಎ ಕಾರ್ಡ್ ಹೊಂದಿರುವವರಿಗೆ ಪ್ರತಿ ಕುಟುಂಬ ಯೋಜನೆಗೆ ಪ್ರತಿ ಕಾರ್ಡ್‌ಗೆ ಒಂದು ಕೆಜಿ ದ್ವಿದಳ ಧಾನ್ಯಗಳನ್ನು ವಿತರಿಸುವ ಯೋಜನೆಯನ್ನು ವಿಸ್ತರಿಸುವುದಾಗಿ ಸಿಎಂ ಭೂಪೇಂದ್ರ ಪಟೇಲ್ ಘೋಷಿಸಿದರು. ಫಲಾನುಭವಿಗಳನ್ನು ಸೇರಿಸಲು ಆದಾಯ ಮಿತಿ ಅರ್ಹತೆಯ ಮಾನದಂಡಗಳನ್ನು ವಿಸ್ತರಿಸಿದ್ದು ಹಲವು ಕುಟುಂಬಗಳು ಯೋಜನೆ ಲಾಭ ಪಡೆಯಲಿವೆ.

ರಾಜ್ಯದ ಎಲ್ಲಾ 250 ತಾಲೂಕುಗಳಿಂದ 71 ಲಕ್ಷ ಎನ್‌ಎಫ್‌ಎಸ್‌ಎ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ಪ್ರತಿ ಕಾರ್ಡ್‌ಗೆ ಒಂದು ಕೆಜಿ ದ್ವಿದಳ ಧಾನ್ಯಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಪ್ರಸ್ತುತ 50 ಅಭಿವೃದ್ಧಿ ಹೊಂದುತ್ತಿರುವ ತಾಲೂಕುಗಳ ಜನರು ಮಾತ್ರ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ತಮಿಳುನಾಡು ಸರ್ಕಾರಿ ನೌಕರರಿಗೆ ಸ್ಟಾಲಿನ್ ಕೊಡುಗೆ

ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಶೇಕಡ 3 ಹೆಚ್ಚಳ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ವಂಶಸ್ಥರಿಗೆ ಮಾಸಿಕ ಪಿಂಚಣಿ ಹೆಚ್ಚಳ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಘೋಷಿಸಿದ್ದಾರೆ.

ಚೆನ್ನೈನ ಸೇಂಟ್ ಜಾರ್ಜ್ ಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿದ ಸ್ಟಾಲಿನ್, ಈ ವರ್ಷ ಜುಲೈ 1 ರಿಂದ ಜಾರಿಗೆ ಬರುವಂತೆ ಶೇಕಡ 3 ಡಿಎ ಹೆಚ್ಚಳವನ್ನು ನೀಡಲಾಗುವುದು ಎಂದು ಹೇಳಿದರು.
ಸರ್ಕಾರದ ಬೊಕ್ಕಸಕ್ಕೆ ಹೊರೆ

ಈ ಹೆಚ್ಚಳದಿಂದ ಬೊಕ್ಕಸಕ್ಕೆ 1,947.60 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು 16 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಲಾಭವಾಗಲಿದೆ.

ರಾಜ್ಯ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು 18,000 ರುಪಾಯಿಗಳಿಂದ 20,000 ರುಪಾಯಿಗಳಿಗೆ ಹೆಚ್ಚಿಸಲಾಗುವುದು ಮತ್ತು ಆಗಸ್ಟ್ 15 ರಿಂದ ಕುಟುಂಬ ಪಿಂಚಣಿಯನ್ನು 9,000 ರುಪಾಯಿಗಳಿಂದ 10,000 ರುಪಾಯಿಗಳಿಗೆ ಪರಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.
ಕರ್ನಾಟಕ ಸರ್ಕಾರಿ ನೌಕರರ ಬೇಡಿಕೆಗೆ ಮನ್ನಣೆ ಇಲ್ಲವಾ?

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಕೂಡ ಹಲವು ದಿನಗಳಿಂದ ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಆರನೇ ವೇತನ ಆಯೋಗದ ಅವಧಿ ಜುಲೈ 31ಕ್ಕೆ ಮುಗಿದಿದ್ದು ಡಿಎ ಹೆಚ್ಚಳ ಮಾಡಲು ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ 20 ರಿಂದ 30 ರಷ್ಟು ಹೆಚ್ಚಳಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಇನ್ನೂ ನೌಕರರ ಬೇಡಿಕೆಯನ್ನು ಈಡೇರಿಸಲು ಮೀನಾ ಮೇಷ ಎಣಿಸುತ್ತಿದೆ.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಸರ್ಕಾರಿ ನೌಕರರ ವೇತನ ಸಾಕಷ್ಟು ಕಡಿಮೆ ಇದೆ. ಸರ್ಕಾರಿ ನೌಕರರ ಬೇಡಿಕೆಗೆ ಒಪ್ಪಿಕೊಂಡರೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ 12,000 ಕೋಟಿ ಹೊರೆಯಾಗಲಿದೆ. 2023ಕ್ಕೆ ವಿಧಾನಸಭೆ ಚುನಾವಣೆ ಇರುವುದರಿಂದ ಬಿಜೆಪಿಗೆ ಸರ್ಕಾರಿ ನೌಕರರ ಬೇಡಿಕೆ ಸವಾಲಾಗಿದೆ.

English Summary

Gujarat and Tamil Nadu governments announced a hike in the dearness allowance for government employees as 75th Independence Day gift, Gujarat Chief Minister Bhupendra Patel announced a three per cent increase in the DA for Gujarat government employees under the 7th Pay Commission, with retrospective effect from January 1, 2022. Tamil Nadu Chief Minister M.K. Stalin said the 3% hike in DA would be granted with effect from July 1 this year.