ಬಯೋಕಾನ್‌ಗೆ ಮುಂದಿನ ಬಾಸ್ ಫಿಕ್ಸ್: ತಮ್ಮ ಉತ್ತರಾಧಿಕಾರಿಯಾಗಿ ಸೊಸೆ 'ಕ್ಲೇರ್ ಮಜುಂದಾರ್' ಹೆಸರಿಸಿದ ಕಿರಣ್ ಮಜುಂದಾರ್ ಶಾ

ಬೆಂಗಳೂರು: ಬಯೋಟೆಕ್ನಾಲಜಿ ಕ್ಷೇತ್ರದ ದೈತ್ಯ ಕಂಪನಿ ಬಯೋಕಾನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ತಮ್ಮ ಕಂಪನಿಗೆ ಅಧಿಕೃತ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ಫಾರ್ಚೂನ್ ಇಂಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ಸೊಸೆ (ಸಹೋದರನ ಪುತ್ರಿ) ಕ್ಲೇರ್ ಮಜುಂದಾರ್ ಅವರನ್ನು ಬಯೋಕಾನ್ ಸಂಸ್ಥೆಯ ಮುಂದಿನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಹಿಂದೆ ಬಯೋಕಾನ್ ಸಂಸ್ಥೆಯನ್ನು ಹುಟ್ಟುಹಾಕಿ, ಅದನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಕಿರಣ್ ಮಜುಂದಾರ್-ಶಾ ಅವರದ್ದಾಗಿದೆ. ಮಕ್ಕಳಿಲ್ಲದ ಕಿರಣ್ ಮಜುಂದಾರ್ ಅವರು, 37 ವರ್ಷದ ಕ್ಲೇರ್ ಮಜುಂದಾರ್ ಅವರನ್ನು ಕಂಪನಿಯ ಭವಿಷ್ಯದ ಬೆಳವಣಿಗೆಯ ಮುಂದಿನ ಹಂತವನ್ನು ಮುನ್ನಡೆಸಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.

Kiran Mazumdar Shaw

ಭವಿಷ್ಯದಲ್ಲಿ ಸುಧಾರಿತ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಹಾರಗಳನ್ನು ನಿಭಾಯಿಸುವ ಹಾಗೂ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯ ಕ್ಲೇರ್ ಅವರಿಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಬಯೋಕಾನ್ ಸಂಸ್ಥೆಯ ಏಕೈಕ ಮಾಲೀಕಳು ನಾನಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅತ್ಯುತ್ತಮರ ಕೈಗಳಿಗೆ ಒಪ್ಪಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಸೊಸೆ ಕ್ಲೇರ್ ಒಬ್ಬ ಸಮರ್ಥ ನಾಯಕಿ. ಆಕೆ ಈಗಾಗಲೇ ಒಂದು ಕಂಪನಿಯನ್ನು ಅದ್ಭುತವಾಗಿ ಮುನ್ನಡೆಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಳೆ. ಹೀಗಾಗಿ ಆಕೆಯನ್ನೇ ನನ್ನ ಉತ್ತರಾಧಿಕಾರಿಯಾಗಿ ನೋಡುತ್ತಿದ್ದೇನೆ" ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿಯೂ ಈ ಬಗ್ಗೆ ಬರೆದುಕೊಂಡಿರುವ ಅವರು, ತಕ್ಷಣವೇ ತಾವು ನಿವೃತ್ತಿಯಾಗುತ್ತಿಲ್ಲ. ಬದಲಾಗಿ, ಮುಂದಿನ ದಿನಗಳಲ್ಲಿ ಕ್ಲೇರ್ ಹಂತಹಂತವಾಗಿ ನನ್ನ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ, ಅಲ್ಲಿಯವರೆಗೂ ತಾವೇ ನಾಯಕತ್ವದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ಯಾರಿವರು ಕ್ಲೇರ್ ಮಜುಂದಾರ್?

ಕ್ಲೇರ್ ಮಜುಂದಾರ್ ಅವರ ಹಿನ್ನೆಲೆ ನೋಡುವುದಾದರೆ, ಅವರು ಪ್ರಸ್ತುತ 'ಬಿಕ್ಯಾರಾ ಥೆರಪ್ಯೂಟಿಕ್ಸ್' (Bicara Therapeutics) ಎಂಬ ಕಂಪನಿಯ ಸಂಸ್ಥಾಪಕಿ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಯೋಕಾನ್‌ನಿಂದಲೇ ಬೆಂಬಲಿತವಾದ ನಾಸ್‌ಡಾಕ್-ಪಟ್ಟಿ (NASDAQ-listed) ಮಾಡಲಾದ ಕಂಪನಿಯಾಗಿದೆ. ಕ್ಲೇರ್ ಅವರು ಪ್ರತಿಷ್ಠಿತ ಎಂಐಟಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದು, ಕ್ಯಾನ್ಸರ್ ಬಯಾಲಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. 2024ರಲ್ಲಿ ಪಟ್ಟಿಯಾದ ಬಿಕ್ಯಾರಾ ಕಂಪನಿಯು ಪ್ರಸ್ತುತ 1.6 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಕ್ಲೇರ್ ಅವರ ಸಹೋದರ ಎರಿಕ್ ಮಜುಂದಾರ್ ಕ್ಯಾಲ್ಟೆಕ್ ಪ್ರೊಫೆಸರ್ ಮತ್ತು ಎಐ ತಜ್ಞರಾಗಿದ್ದು, ಅವರ ಪತಿ ಥಾಮಸ್ ರಾಬರ್ಟ್ಸ್ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಆಂಕೊಲಾಜಿಸ್ಟ್ ಆಗಿದ್ದಾರೆ. ಇವರ ಬೆಂಬಲವೂ ಮುಂದಿನ ದಿನಗಳಲ್ಲಿ ಬಯೋಕಾನ್‌ಗೆ ಸಿಗಲಿದೆ.

ಇದೇ ವೇಳೆ ಬಯೋಕಾನ್ ತನ್ನ ವ್ಯವಹಾರವನ್ನು ಸರಳಗೊಳಿಸಲು ಜನರಿಕ್ಸ್ ಮತ್ತು ಬಯೋಲಾಜಿಕ್ಸ್ ವಿಭಾಗಗಳನ್ನು ವಿಲೀನಗೊಳಿಸಿದೆ. ಬಯೋಸಿಮಿಲರ್ ಉತ್ಪನ್ನಗಳ ಮೇಲೆ ಕಂಪನಿಯು ಹೆಚ್ಚು ಗಮನಹರಿಸುತ್ತಿದೆ. ಇನ್ನುಳಿದಂತೆ ಗುಂಪಿನ ಇತರ ಕಂಪನಿಗಳಲ್ಲಿಯೂ ನಾಯಕತ್ವ ಬದಲಾವಣೆಗಳಾಗುತ್ತಿವೆ.

ಶ್ರೀಹಾಸ್ ತಾಂಬೆ ಅವರು ಬಯೋಕಾನ್ ಬಯೋಲಾಜಿಕ್ಸ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರೆ, ಸಿದ್ಧಾರ್ಥ್ ಮಿತ್ತಲ್ ಅವರು ಜುಲೈ 1 ರಿಂದ ಸಿಂಜಿನ್ ಇಂಟರ್‌ನ್ಯಾಷನಲ್‌ನ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಜೈವಿಕ ಔಷಧಗಳು ಮತ್ತು ಕೃತಕ ಬುದ್ಧಿಮತ್ತೆಯ ಆಳವಾದ ಏಕೀಕರಣದ ಮೇಲೆ ಬಯೋಕಾನ್ ಮುಂದಿನ ಬೆಳವಣಿಗೆಯನ್ನು ಸಾಧಿಸಲಿದೆ ಎಂದು ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+