Raghu Sharma: 30 ಲಕ್ಷದ ಆಟಗಾರನ 15 ವರ್ಷಗಳ ನೋವು ಅಂತ್ಯ; ಮೈದಾನದಲ್ಲಿ ರಘು ಶರ್ಮಾ ಪ್ರದರ್ಶಿಸಿದ ಚೀಟಿ ಭಾರಿ ವೈರಲ್
Raghu Sharma: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 4ರ ಸೋಮವಾರ ನಡೆದ 47ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಈ ವೇಳೆ ಚೊಚ್ಚಲ ವಿಕೆಟ್ ಪಡೆದ ಬಳಿಕ ಎಂಐ ಬೌಲರ್ ರಘು ಶರ್ಮಾ ಅವರು ಪ್ರದರ್ಶಿಸಿದ ಚೀಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ರಘು ಶರ್ಮಾ ಪ್ರದರ್ಶಿಸಿದ ಚೀಟಿ ಭಾರಿ ವೈರಲ್
ಬಳಿಕ ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಎಲ್‌ಎಸ್‌ಜಿ ನೀಡಿದ 229 ರನ್‌ಗಳ ಗುರಿಯನ್ನು ಮುಟ್ಟಲು ಸುಲಭವಾಯಿತು. ಕೊನೆ ಗಳಿಗೆಯಲ್ಲಿ 8 ಎಸೆತ ಬಾಕಿ ಇರುವಂತೆಯೇ ನಮನ್ ಧೀರ್ ಅಜೇಯ 23 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದರೆ ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಮಾತ್ರ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿದ ರಘು ಶರ್ಮಾ ಅವರು ಒಂದು ವಿಕೆಟ್ ಪಡೆದ ಬಳಿಕ ಪ್ರದರ್ಶಿಸಿದ ಚೀಟಿ.
ಎಲ್‌ಎಸ್‌ಜಿ ರನ್ ವೇಗಕ್ಕೆ ಕಡಿವಾಣ ಹಾಕಿದ ರಘು
33 ವರ್ಷದ ಸ್ಪಿನ್ನರ್ ರಘು ಶರ್ಮಾ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಎಸೆದು 36 ರನ್ ನೀಡಿ 1 ವಿಕೆಟ್ ಪಡೆದರು. ಮಧ್ಯಮ ಓವರ್‌ಗಳಲ್ಲಿ ಎಲ್‌ಎಸ್‌ಜಿ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದುರು. ಜೊತೆಗೆ ಈ ಪಂದ್ಯದಲ್ಲಿ ತಮ್ಮ ಮೊದಲ ಐಪಿಎಲ್ ವಿಕೆಟ್ ಪಡೆದ ಅವರು ಅದನ್ನು ವಿಶೇಷ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದು, ಇದು ಸಖತ್ ಸದ್ದು ಮಾಡುತ್ತಿದೆ.
ಚೊಚ್ಚಲ ವಿಕೆಟ್ ಪಡೆದ ಬಳಿಕ ರಘು ಶರ್ಮಾ ತಮ್ಮ ಜೇಬಿನಿಂದ ಒಂದು ಚೀಟಿಯನ್ನು ತೆಗೆದು ಅದನ್ನು ಪ್ರದರ್ಶಿಸಿ ಗಮನ ಸೆಳೆದರು. ಅದರಲ್ಲಿ "ದೇವರ ಕೃಪೆಯಿಂದ 15 ವರ್ಷಗಳ ನೋವಿನ ಅವಧಿ ಇಂದು ಮುಕ್ತಾಯವಾಗಿದೆ. ಈ ಅವಕಾಶವನ್ನು ನೀಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಧನ್ಯವಾದಗಳು, ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಜೈ ಶ್ರೀ ರಾಮ್," ಎಂದು ಚೀಟಿಯಲ್ಲಿ ಬರೆದುಕೊಂಡಿದ್ದರು. ಈ ಚೀಟಿ ಕಂಡ ಮುಂಬೈ ಇಂಡಿಯನ್ಸ್‌ನ ಸಹ ಆಟಗಾರರು ಅಚ್ಚರಿಗೊಂಡ ಘಟನೆಯೂ ಜರುಗಿತು.
ಯಾರು ಈ ರಘು ಶರ್ಮಾ?
ರಘು ಶರ್ಮಾ ಜಲಂಧರ್‌ನಲ್ಲಿ ಜನಿಸಿದರು. ಅವರು ಲೆಗ್ ಸ್ಪಿನ್ನರ್ ಆಗಿದ್ದು, ಈವರೆಗೆ ತಮ್ಮ ದೇಶೀಯ ಮಟ್ಟದಲ್ಲಿ ಒಟ್ಟು 30 ಪಂದ್ಯಗಳನ್ನಾಡಿದ್ದಾರೆ. 12 ಪ್ರಥಮ ದರ್ಜೆ ಪಂದ್ಯಗಳು, 12 ಲಿಸ್ಟ್ ಎ ಪಂದ್ಯಗಳು ಮತ್ತು 6 ಟಿ 20 ಪಂದ್ಯಗಳನ್ನಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 57 ವಿಕೆಟ್‌ಗಳು, ಲಿಸ್ಟ್ ಎ ಪಂದ್ಯಗಳಲ್ಲಿ 18, ಟಿ 20 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಮತ್ತು ಪುದುಚೇರಿ ಪರ ಆಡಿದ್ದಾರೆ. 2017-18ನೇ ಆವೃತ್ತಿಯಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವು ರಘು ಶರ್ಮಾ ಅವರ ಎರಡನೇ ಐಪಿಎಲ್ ಪಂದ್ಯವಾಗಿತ್ತು. ಅವರು ಕಳೆದ ವರ್ಷ 2025ರಲ್ಲಿ ಬದಲಿ ಆಟಗಾರನಾಗಿ ತಂಡ ಸೇರ್ಪಡೆಯಾದರು. ಆದರೆ ಅವಕಾಶ ದೊರೆತಿರಲಿಲ್ಲ. ಐಪಿಎಲ್ 2026ರ ಹರಾಜಿನಲ್ಲಿ ರಘು ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಇದೀಗ ಅವರು ಮುಂಬೈ ಪರ ಕಣಕ್ಕಿಳಿದು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ಎಲ್‌ಎಸ್‌ಜಿ ವಿರುದ್ಧದ ಗೆಲುವಿನೊಂದಿಗೆ ತನ್ನ ಪ್ಲೇಆಫ್ ಆಸೆಯನ್ನು ಅಲ್ಪಸ್ವಲ್ಪ ಜೀವಂತವಾಗಿರಿಸಿಕೊಂಡಿದೆ. ಮುಂಬೈ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಏರಿದೆ. ಲಕ್ನೋ ಸೂಪರ್ ಜೈಂಟ್ಸ್ 9 ಪಂದ್ಯಗಳಲ್ಲಿ 7 ರಲ್ಲಿ ಸೋಲನುಭವಿಸಿ ಕೊನೆಯ 10ನೇ ಸ್ಥಾನ ಅಲಂಕರಿಸಿದೆ. ಒಟ್ಟಿನಲ್ಲಿ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಗಮನ ಸೆಳೆದಿದ್ದು ಮಾತ್ರ ರಘು ಶರ್ಮಾ ಅವರು ತೋರಿಸಿದ ಈ ವಿಶೇಷ ಚೀಟಿ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.












Click it and Unblock the Notifications