RCB ಕಾಲ್ತುಳಿತ ದುರಂತ: ದಯಾನಂದ್‌ ಸೇರಿ ಮೂವರು ಐಪಿಎಸ್ ಅಧಿಕಾರಿಗಳಿಗೆ ಬಿಗ್‌ ರಿಲೀಫ್‌


ಬೆಂಗಳೂರು: ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಎದುರಿಸುತ್ತಿದ್ದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅಧಿಕಾರಿಗಳು ಸಲ್ಲಿಸಿದ್ದ ಸಮರ್ಥನಾ ಹೇಳಿಕೆಗಳು ಮತ್ತು ಇಲಾಖೆಯ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಂದಿನ ಬೆಂಗಳೂರು ಪೊಲೀಸ್‌ ಕಮೀಷನರ್‌ ಆಗಿದ್ದ ಬಿ.ದಯಾನಂದ್‌ ಸೇರಿ ಮೂವರು ಪೊಲೀಸ್‌ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.

Advertisement

ಏನಿದು ಆರ್‌ಸಿಬಿ ದುರಂತ?

ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಆರ್‌ಸಿಬಿ ಕಪ್‌ ಗೆದ್ದು ಇತಿಹಾಸ ಬರೆದಿತ್ತು. 2025ರ ಜೂನ್ 4ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಆರ್‌ಸಿಬಿ ಅಭಿಮಾನಿಗಳು ಜಮಾಯಿಸಿ ಭಾರಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ವೇಳೆ ಉಂಟಾದ ತೀವ್ರ ಜನದಟ್ಟಣೆ ಹತೋಟಿ ತಪ್ಪಿ ಭೀಕರ ಕಾಲ್ತುಳಿತಕ್ಕೆ ಕಾರಣವಾಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡು, ಹತ್ತಾರು ಮಂದಿ ಸಾವನ್ನಪ್ಪಿದ್ದರು. ಈ ಭದ್ರತಾ ಲೋಪಕ್ಕೆ ಬೆಂಗಳೂರು ನಗರ ಪೊಲೀಸ್ ಪಡೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಮೂವರು ಹಿರಿಯ ಅಧಿಕಾರಿಗಳನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು.

Advertisement

ಆ ಬಳಿಕ ಜುಲೈ 2025ರಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿತ್ತಾದರೂ, ಆಲ್ ಇಂಡಿಯಾ ಸರ್ವಿಸಸ್ ರೂಲ್ಸ್ ಪ್ರಕಾರ ಅವರ ವಿರುದ್ಧ ಇಲಾಖಾ ತನಿಖೆ ಮುಂದುವರಿದಿತ್ತು. ಇದೀಗ ಸುದೀರ್ಘ ಒಂದು ವರ್ಷದ ತನಿಖೆಯ ನಂತರ ಈ ಅಧಿಕಾರಿಗಳ ಮೇಲೆ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಸರ್ಕಾರ ತನಿಖೆಯನ್ನ ಕ್ಲೋಸ್ ಮಾಡಿದೆ.

ಆರ್‌ಸಿಬಿ ಸಂಭ್ರಮಾಚರಣೆ ದುರಂತ: ಕಾಲ್ತುಳಿತ 20ಕ್ಕೂ ಹೆಚ್ಚು ಜನರಿಗೆ ಗಾಯ, 8ಕ್ಕೂ ಹೆಚ್ಚು ಜನ ಸಾವು!

ಯಾರಿಗೆ ಕ್ಲೀನ್‌ಚಿಟ್‌

ದುರಂತ ನಡೆದ ಸಮಯದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಅವರಿಗೆ ಸರ್ಕಾರ ಕ್ಲೀನ್ ಚೀಟ್ ನೀಡಿದೆ. ಪ್ರಸ್ತುತ ಇವರು ಬೆಂಗಳೂರಿನ ಕಾರ್ಲ್ಟನ್ ಹೌಸ್‌ನಲ್ಲಿ ತರಬೇತಿ ವಿಭಾಗದ ಎಡಿಜಿಪಿ (ADGP) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಘಟನೆ ವೇಳೆ ಬೆಂಗಳೂರು ನಗರದ (ಪಶ್ಚಿಮ ವಲಯ) ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್‌ ಕುಮಾರ್ ಅವರನ್ನು ದೋಷಮುಕ್ತಗೊಳಿಸಲಾಗಿದೆ. ಸದ್ಯ ಇವರು ಆಂತರಿಕ ಭದ್ರತಾ ವಿಭಾಗದ (ISD) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ವ್ಯಾಪ್ತಿಯನ್ನು ಒಳಗೊಂಡಿದ್ದ ಕೇಂದ್ರ ವಿಭಾಗದ ಡಿಸಿಪಿ ಆಗಿದ್ದ ಶೇಖರ್ ತೆಕ್ಕಣ್ಣವರ್ ಅವರಿಗೂ ಇಲಾಖಾ ತನಿಖೆಯಿಂದ ಮುಕ್ತಿ ಸಿಕ್ಕಿದೆ. ಇವರು ಸದ್ಯ ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

2025ರ ಜುಲೈನಲ್ಲಿ ನೋಟಿಸ್ ಜಾರಿ ಮಾಡಿ, ಸೆಪ್ಟೆಂಬರ್‌ನಲ್ಲಿ ಅಧಿಕಾರಿಗಳು ನೀಡಿದ್ದ ಲಿಖಿತ ವಿವರಣೆಯನ್ನು ಪರಿಶೀಲಿಸಿದ ಸರ್ಕಾರ, ಆರ್‌ಸಿಬಿ ಅಭಿಮಾನಿಗಳ ಅನಿರೀಕ್ಷಿತ ಅತಿಹೆಚ್ಚಿನ ಜನಸ್ತೋಮದ ನಿಯಂತ್ರಣದಲ್ಲಾಗಲಿ ಅಥವಾ ದುರಂತ ತಡೆಯುವುದರಲ್ಲಾಗಲಿ ಈ ಅಧಿಕಾರಿಗಳ ಕಡೆಯಿಂದ ಯಾವುದೇ ಉದ್ದೇಶಪೂರ್ವಕ ನಿರ್ಲಕ್ಷ್ಯ ನಡೆದಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಒಂದು ವರ್ಷದಿಂದ ಈ ಹಿರಿಯ ಅಧಿಕಾರಿಗಳ ಮೇಲಿದ್ದ ಶಿಸ್ತುಕ್ರಮದ ತೂಗುಗತ್ತಿ ಈಗ ಅಧಿಕೃತವಾಗಿ ನಿವಾರಣೆಯಾಗಿದೆ.

English Summary

The Karnataka government has exonerated former Bengaluru Police Commissioner B. Dayananda and two other IPS officers in the departmental inquiry