Bengaluru Road: ಬೆಂಗಳೂರಲ್ಲಿ ಅಭಿವೃದ್ಧಿಪಡಿಸಿದ ರಸ್ತೆ ಅಗೆಯುವುದಕ್ಕೆ ಬ್ರೇಕ್ ಹಾಕಿದ ಜಿಬಿಎ


Bengaluru Road: ಬೆಂಗಳೂರು ನಗರದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿರುವ ರಸ್ತೆಗಳನ್ನು ಅಗೆಯುವುದಕ್ಕೆ ಬ್ರೇಕ್ ಹಾಕುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಿಎಂಐಡಿಪಿ ಹಾಗೂ ಸಿಎಸ್ಎಸ್‌ಐಪಿ ಅನುದಾನದಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಅನುಷ್ಠಾನ ಕುರಿತು ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ವಿಭಾಗದ ಅಧಿಕಾರಿಗಳು, ಯೋಜನಾ ನಿರ್ವಹಣಾ ಸಲಹೆಗಾರರು ಹಾಗೂ ಕಾಮಗಾರಿ ವಿಭಾಗದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

Advertisement

ಸಭೆಯಲ್ಲಿ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಿಎಂಸಿ ವತಿಯಿಂದ ಸಲ್ಲಿಸಲಾದ ಗುಣಮಟ್ಟ ಪರಿಶೀಲನಾ ವರದಿಯನ್ನು ಸವಿಸ್ತಾರವಾಗಿ ಪರಿಶೀಲಿಸಲಾಯಿತು. ಪಿಎಂಸಿ ವತಿಯಿಂದ ಸಲ್ಲಿಸಲಾದ ಪರಿಶೀಲನಾ ವರದಿಯಲ್ಲಿನ ಪ್ರತಿಯೊಂದು ಅಂಶವನ್ನು ಗಂಭೀರವಾಗಿ ಪರಿಗಣಿಸಿ, ಕಾಮಗಾರಿಗಳಲ್ಲಿ ಕಂಡುಬರುವ ಯಾವುದೇ ತಾಂತ್ರಿಕ ಕೊರತೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಹೆಚ್ಚುವರಿ ಆಯುಕ್ತರು ಸೂಚಿಸಿದ್ದಾರೆ.

Advertisement

ಸಿಎಂಐಡಿಪಿ ಹಾಗೂ ಸಿಎಸ್ಎಸ್‌ಐಪಿ ಅನುದಾನದಡಿ ನಡೆಯುತ್ತಿರುವ ರಸ್ತೆ ಹಾಗೂ ಸಿವಿಲ್ ಕಾಮಗಾರಿಗಳ ಗುಣಮಟ್ಟವನ್ನು ಗುಣನಿಯಂತ್ರಣ ವಿಭಾಗದ ಮೂಲಕ ಕಡ್ಡಾಯವಾಗಿ ಪರಿಶೀಲಿಸಬೇಕು. ಪ್ರತಿಯೊಂದು ಕಾಮಗಾರಿಯೂ ನಿಗದಿತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣಗೊಂಡಿರುವುದನ್ನು ಗುಣಮಟ್ಟ ನಿಯಂತ್ರಣ ವಿಭಾಗ ಹಾಗೂ ಪಿಎಂಸಿ ತಂಡಗಳು ಜಂಟಿಯಾಗಿ ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಇನ್ನು ಬೆಂಗಳೂರಿನ ಈ ಭಾಗದಲ್ಲಿ ಕಾಮಗಾರಿ ಕೈಗೊಂಡಿರುವ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಬದಿ ಚರಂಡಿಗಳಲ್ಲಿ ಶೇಕಡಾ 100ರಷ್ಟು ಹೂಳೆತ್ತುವಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕು. ರಸ್ತೆ ಬದಿಗಳ ಸಮತೋಲನವನ್ನು ಸರಿಪಡಿಸಿ, ಕಾಮಗಾರಿ ಪ್ರದೇಶದಲ್ಲಿ ನಿರ್ಮಾಣ ತ್ಯಾಜ್ಯ ಯಾವುದೇ ಕಾರಣಕ್ಕೂ ಉಳಿಯದಂತೆ ಸಂಪೂರ್ಣವಾಗಿ ತೆರವುಗೊಳಿಸಿ ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Advertisement

ಅಭಿವೃದ್ಧಿಪಡಿಸಿರುವ ರಸ್ತೆ ಅಗೆಯದಂತೆ ಮುನ್ನೆಚ್ಚರಿಕೆ

ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಮರುಕಳಿಸುವ ರಸ್ತೆ ಅಗೆತಗಳನ್ನು ತಪ್ಪಿಸಲು ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಎಲ್ಲಾ ಸೇವಾ ಪೂರೈಕೆ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಒಂದು ವೇಳೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಇಲಾಖೆ ಯುಟಿಲಿಟಿ ಕಾಮಗಾರಿಗಾಗಿ ರಸ್ತೆ ಅಗೆದರೆ, ಸಂಬಂಧಪಟ್ಟ ಇಲಾಖೆಗೆ ತಕ್ಷಣವೇ ನೋಟಿಸ್ ನೀಡಿ ರಸ್ತೆಗಳನ್ನು ಮೂಲ ಸ್ಥಿತಿಗೆ ಮರುಸ್ಥಾಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

SIR: ಕರ್ನಾಟಕದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಭಾರತೀಯ ಚುನಾವಣಾ ಆಯೋಗದಿಂದ ಗುಡ್‌ನ್ಯೂಸ್!, ಅವಧಿ ವಿಸ್ತರಣೆ
Advertisement

ಗುಣಮಟ್ಟ ಖಚಿತಪಡಿಸಿಕೊಂಡ ಬಳಿಕವೇ ಡಾಂಬರೀಕರಣ ಕಾಮಗಾರಿ

ಚರಂಡಿ ಮತ್ತು ಇತರೆ ಸಿವಿಲ್ ಕಾಮಗಾರಿಗಳ ಗುಣಮಟ್ಟವನ್ನು ಸಂಪೂರ್ಣವಾಗಿ ಪರಿಶೀಲಿಸಿ ಪ್ರಮಾಣೀಕರಿಸಿದ ನಂತರವೇ ಆಸ್ಫಾಲ್ಟಿಂಗ್ ಹಾಗೂ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಪರ ಆಯುಕ್ತರು ಸ್ಪಷ್ಟ ನಿರ್ದೇಶನ ನೀಡಿದರು. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಎಲ್ಲಾ ಕಾಮಗಾರಿಗಳನ್ನು ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.

ಬಾಕಿ ಕಾಮಗಾರಿಗಳಿಗೆ ಕಾಲಮಿತಿಯ ಕಾರ್ಯಯೋಜನೆ

ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿ, ಪ್ರತಿಯೊಂದು ಕಾಮಗಾರಿಗೂ ಸ್ಪಷ್ಟ ಕಾಲಮಿತಿಯೊಂದಿಗೆ ಕಾರ್ಯಯೋಜನೆ ರೂಪಿಸಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವಂತೆ ನಿರಂತರ ಪ್ರಗತಿ ಪರಿಶೀಲನೆ ನಡೆಸಿ, ವಿಳಂಬವಾಗುವ ಕಾಮಗಾರಿಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಂಜಿನಿಯರಿಂಗ್ ಅಧಿಕಾರಿಗಳು, ಗುತ್ತಿಗೆದಾರರು, ಪಿಎಂಸಿ ತಂಡ ಹಾಗೂ ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳ ಗುಣಮಟ್ಟ, ಪ್ರಗತಿ ಹಾಗೂ ಸುರಕ್ಷತಾ ಕ್ರಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಕಾಮಗಾರಿಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ನಿರ್ದೇಶಿಸಲಾಗಿದೆ.

Advertisement

ಗುಣಮಟ್ಟ, ಕಾಲಮಿತಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಮೊದಲ ಆದ್ಯತೆ

ಕಾಮಗಾರಿಗಳ ಅನುಷ್ಠಾನದಲ್ಲಿ ಗುಣಮಟ್ಟ, ಕಾಲಮಿತಿ ಹಾಗೂ ಸಾರ್ವಜನಿಕ ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಪಿಎಂಸಿ ತಂಡಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಗುಣಮಟ್ಟದ ಮೂಲಸೌಕರ್ಯವನ್ನು ಒದಗಿಸುವಂತೆ ತಿಳಿಸಿದರು.

English Summary

Bengaluru Road: GBA puts brakes on digging of road developed in City