Advertisement

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಬಿಜೆಪಿ ಚುನಾವಣೆ ಗೆದ್ದಿದ್ದು ಹೇಗೆ?


ಬೆಂಗಳೂರು, ಸೆ. 06: ಬಿ.ಎಸ್. ಯಡಿಯೂರಪ್ಪ ಬಳಿಕ ಕರ್ನಾಟಕದಲ್ಲಿ ಬಿಜೆಪಿಯನ್ನು ಮುನ್ನಡೆಸುವವರು ಯಾರು? ಈ ಪ್ರಶ್ನೆ ಕೇವಲ ಬಿಜೆಪಿ ನಾಯಕರು ಅಥವಾ ಬಿಜೆಪಿ ಹೈಕಮಾಂಡ್‌ಗೆ ಮಾತ್ರ ದೊಡ್ಡ ಸವಾಲಾಗಿರಲಿಲ್ಲ. ಜೊತೆಗೆ ವಿರೋಧ ಪಕ್ಷಗಳ ನಾಯಕರೂ ಕೂಡ ಈ ಬಗ್ಗೆ ತಮ್ಮ ತಮ್ಮಲ್ಲಿಯೇ ಚರ್ಚೆ ಮಾಡಿಕೊಂಡಿದ್ದೂ ಇದೆ. ಆದರೆ ಬಹುದೊಡ್ಡ ಸವಾಲವನ್ನು ಎಳೆದುಕೊಂಡು ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿಯೇ ಬಿಟ್ಟಿತು. ಅದರೊಂದಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿದ್ದ ಒಂದೇ ಒಂದು ರಾಜ್ಯದಲ್ಲಿ ಅಪಾಯವನ್ನೂ ಮೈಮೇಲೆ ಎಳೆದುಕೊಂಡಿತು.

ಮುಂದೆ ಚುನಾವಣೆ ಬರಲಿ ಆಗ ಯಡಿಯೂರಪ್ಪನವರ ಅಗತ್ಯ ಗೊತ್ತಾಗುತ್ತದೆ ಎಂದು ಅವರ ಬೆಂಬಲಿಗರು ಮಾತನಾಡಿಕೊಂಡಿದ್ದೂ ಇದೆ. ಇದೀಗ ರಾಜ್ಯ ಬಿಜೆಪಿ ನಾಯಕತ್ವದಿಂದ ಪಕ್ಷದ ಆಗಿರುವ ಪರಿಣಾಮಗಳಿಗೆ ಉತ್ತರ ಸಿಕ್ಕಿದೆ. ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಈ ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿ ರಾಷ್ಟ್ರೀಯ ಪಕ್ಷ ಎಂಬುದು ಸಾಬೀತಾಗಿದೆ.

ಬಿಜೆಪಿಗೆ ಭರ್ಜರಿ ಜಯ!

ಮೂರು ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಎರಡು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಸಂಖ್ಯಾಬಲದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೂ ಅಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೇರಲು ಸಿದ್ಧವಾಗಿದೆ.

ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಪರಿಣಾಮ!

ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶದ ಮೂಲಕ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯಿಂದ ಬಿಜೆಪಿ ಮೇಲೆ ಅಷ್ಟೇನೂ ಪರಿಣಾಮವಾಗಿಲ್ಲ ಎಂಬುದು ಕಂಡು ಬಂದಿದೆ. ಈ ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಸ, ಪ್ರಚಾರ ಮಾಡಿರಲಿಲ್ಲ. ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದ್ದರೂ ಈ ಚುನಾವಣೆಗೆ ಗಮನ ಕೊಟ್ಟಿರಲಿಲ್ಲ. ಆ ಮೂಲಕ ತಮ್ಮ ಅಸ್ತಿತ್ವವನ್ನು ಚುನಾವಣೆ ಫಲಿತಾಂಶದ ಮೂಲಕ ತೀರಿಸಲು ಅವರು ಸಜ್ಜಾಗಿದ್ದರು ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿದೆ. ಆದರೆ ಅದಾಗಿಲ್ಲ ಎನ್ನುತ್ತಿವೆ ರಾಜ್ಯ ಬಿಜೆಪಿ ಮೂಲಗಳು.

Advertisement
Advertisement
Advertisement
ಮತದಾನದ ಮೂಲಕ ಹೈಕಮಾಂಡ್‌ಗೆ ಬೆಂಬಲ?

ಕಳೆದ ಸುಮಾರು ಐದು ದಶಕಗಳಿಂದ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಕಟ್ಟಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿ ತಾನೇ ಮಾಡಿಕೊಂಡಿರುವ ನಿಯಮದಂತೆ 75 ವರ್ಷಗಳ ಬಳಿಕ ಸಕ್ರಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಬೇಕು. ಹಾಗೆ ಬಿಜೆಪಿ ಹೈಕಮಾಂಡ್ ಮಾಡಿದ್ದ ನಿಯಮದಂತೆ ಯಡಿಯೂರಪ್ಪ ಅವರ ಬದಲಾವಣೆ ಆಗಿದೆ ಎಂಬುದನ್ನು ಬಿಜೆಪಿ ಮತದಾರರು ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತ ಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ ಎಂಬ ರಾಜಕೀಯ ವಿಶ್ಲೇಷಣೆ ಆರಂಭವಾಗಿದೆ.

ಜನವರಿಯಲ್ಲಿದೆ ಮಹತ್ವದ ಚುನಾವಣೆ!

ಇದು ಕೇವಲ ಮೂರು ಮಹಾನಗರಗಳಲ್ಲಿ ನಡೆದಿರುವ ಚುನಾವಣಾ ಫಲಿತಾಂಶ. ಇಡೀ ರಾಜ್ಯದಲ್ಲಿ ಚುನಾವಣೆ ನಡದಾಗ ಮಾಜಿ ಸಿಎಂ ಯಡಿಯೂರಪ್ಪ ಅವರ ಅಗತ್ಯ ಬಿಜೆಪಿಗಿದೆ ಎಂಬ ಮಾತುಗಳು ಇದೇ ಸಂದರ್ಭದಲ್ಲಿ ವ್ಯಕ್ತವಾಗುತ್ತಿವೆ. ಬರುವ ಜನವರಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಆಡಳಿತ ಪಕ್ಷವೂ ಆಗಿರುವ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಪಡೆಬೇಕಾಗಿದೆ. ಜೊತೆಗೆ ಆಗಲೇ ವಿಧಾನ ಪರಿಷತ್‌ನಲ್ಲೂ ಬಿಜೆಪಿ ಬಹುಮತ ಪಡೆಯುವ ಸಾಧ್ಯತೆಗಳಿವೆ. ಹೀಗಾಗಿ ಆ ಚುನಾವಣೆಯ ಫಲಿತಾಂಶ ಬಿಜೆಪಿ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಅಷ್ಟರೋಳಗೆ ಮತ್ತೆ ಏನೇನು ರಾಜಕೀಯ ಬೆಳವಣಿಗೆಳಗಾಬಹುದು ಎಂಬುದು ಕುತೂಹಲ ಮೂಡಿಸಿದೆ. ಒಟ್ಟಾರೆ ಈ ಮೂರು ಮಹಾನಗರಪಾಲಿಕೆಗಳ ಚುನಾವಣೆ ಫಲಿತಾಂಶದ ಮೇಲೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿರುವುದರ ಪರಿಣಾಮ ಕಂಡು ಬಂದಿಲ್ಲ ಎಂಬುದಂತೂ ಬಹಿರಂಗವಾಗಿದೆ.

English Summary

3 Municipal Corporation Elections 2021: How BJP Won without Former CM BS Yediyurappa Presence. Know more.
Read more...