ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ರಾಮನಗರ ಜಿಲ್ಲೆಯ 2,500 ಕೆರೆಗಳಿಗೆ ನೀರು ತುಂಬಿಸಲಿದ್ದೇವೆ: ಅಶ್ವತ್ಥ್‌ ನಾರಾಯಣ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ, 27: ಜಿಲ್ಲೆಯಲ್ಲಿರುವ 2,500 ಕೆರೆಗಳಿಗೆ ನೀರು ತುಂಬಿಸುವ ಗುರಿಯೊಂದಿಗೆ ಹಲವಾರು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಒತ್ತುಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್ ಅಶ್ವತ್ಥ್‌ ನಾರಾಯಣ್ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ಕುಡಿಯಲು ಮತ್ತು ವ್ಯವಸಾಯಕ್ಕೆ ನೀರು ಒದಗಿಸಬೇಕೆಂಬುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಬಹುವರ್ಷಗಳ ಬೇಡಿಕೆಯಾದ ಸತ್ತೇಗಾಲ ನೀರಾವರಿ ಯೋಜನೆಯನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲು ಕಾಮಾಗಾರಿ ವೇಗ ಹೆಚ್ಚಿಸಿದ್ದೇವೆ‌ ಎಂದರು.

 ಶ್ರೀರಾಮ ದೇವರ ಬೆಟ್ಟ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಶ್ವತ್ಥ್‌ ನಾರಾಯಣ್ ಶ್ರೀರಾಮ ದೇವರ ಬೆಟ್ಟ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಶ್ವತ್ಥ್‌ ನಾರಾಯಣ್

‌‌‌ಸತ್ತೇಗಾಲ ಯೋಜನೆಯ ಮೂಲಕ ಕುಡಿಯುವ ನೀರು ಒದಗಿಸುವುದು ಹಾಗೂ ಜಿಲ್ಲೆಯ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಆಗಲಿದೆ. ಇದರ ಜೊತೆಗೆ ಶ್ರೀರಂಗ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೂ ಒತ್ತು ಕೊಡಲಾಗಿದೆ. ವೈಜಿ ಗುಡ್ಡ ಮತ್ತು ಮಂಚನಬೆಲೆ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಇನ್ನು ‌ಜಲಜೀವನ್ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಡಿ ಮನೆ ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ 2023ರ ವರ್ಷ ಮುಗಿಯುವುದರೊಳಗೆ ಮುಗಿಸಲಾಗುವುದು. ಪೂರ್ತಿ ಕಾರ್ಯಗತವಾದ ಬಳಿಕ ಜಿಲ್ಲೆಯಲ್ಲಿ ಎಲ್ಲಾ ಕುಟುಂಬಗಳಿಗೂ ಶುದ್ಧ ಕುಡಿಯುವ ನೀರು ಸಿಗುತ್ತದೆ ಎಂದರು.

 ಇ- ಪೇಮೆಂಟ್ಸ್ ವ್ಯವಹಾರಕ್ಕೆ ವ್ಯವಸ್ಥೆ

ಇ- ಪೇಮೆಂಟ್ಸ್ ವ್ಯವಹಾರಕ್ಕೆ ವ್ಯವಸ್ಥೆ

ಹಾಗೆಯೇ ‌ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಕೆಲಸ ಆಗುತ್ತಿದೆ. ಇಲ್ಲಿ ಇ- ಪೇಮೆಂಟ್ಸ್ ಮೂಲಕ ವ್ಯವಹಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಮಾವು ಮತ್ತು ತೆಂಗು ಸಂಸ್ಕರಣೆ ಘಟಕಗಳ ಸ್ಥಾಪನೆಗೂ ಚಾಲನೆ ಕೊಡಲಾಗಿದೆ ಎಂದರು.

 ಸದ್ಯದಲ್ಲೇ ಸುಸಜ್ಜಿತ ಜಿಲ್ಲಾಸ್ಪತ್ರೆ ಉದ್ಘಾಟನೆ

ಸದ್ಯದಲ್ಲೇ ಸುಸಜ್ಜಿತ ಜಿಲ್ಲಾಸ್ಪತ್ರೆ ಉದ್ಘಾಟನೆ

ಜೊತೆಗೆ ರೈತ ಸಂತೆಗಳನ್ನು ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. 550 ಹಾಸಿಗೆಗಳ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಸದ್ಯದಲ್ಲೇ ಉದ್ಘಾಟನೆ ಆಗಲಿದೆ. ಪಶುಸಂಗೋಪನೆಗೆ ಪೂರಕವಾಗಿ ಮೊಬೈಲ್ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ‌ಸರ್ಕಾರವು ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟಿದೆ. ಕಲಿಕೆಯ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೌಶಲ್ಯ ಕೊಡಲಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 15 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಡಿಜಿ ಶಕ್ತಿ ಕಾರ್ಯಕ್ರಮದ ಮೂಲಕ ಕಂಪ್ಯೂಟರೀಕರಣ ಮಾಡಲಾಗಿದೆ ಎಂದು ಹೇಳಿದರು.

"ಅಮೃತ ಸರೋವರ" ಯೋಜನೆಯ ಉದ್ದೇಶ

ಹಾಗೆಯೇ ನರೇಗಾ ಯೋಜನೆಯಲ್ಲಿ 51 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನ ಗುರಿ ಇದೆ. ಜಿಲ್ಲೆಗೆಂದು ನಿಗದಿಗೊಳಿಸಲಾಗಿದ್ದ 262 ಕೋಟಿ ರೂಪಾಯಿ ಆರ್ಥಿಕ ಗುರಿಯನ್ನು ಈಗಾಗಲೇ ತಲುಪಲಾಗಿದೆ. ಇನ್ನು "ಅಮೃತ ಸರೋವರ" ಯೋಜನೆಯಲ್ಲಿ 200 ಕೆರೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ರೀಡೆಗೆ ಒತ್ತು ಕೊಟ್ಟು ಯುವಕರ ಸಬಲೀಕರಣ ಮಾಡಲಾಗುತ್ತಿದೆ. ಕೃಷಿಕರಿಗೆ ಬೇಕಾದ ಸಾಮಗ್ರಿಗಳ ಸಮರ್ಪಕ ಪೂರೈಕೆಗೆ ಆದ್ಯತೆ ಕೊಡಲಾಗಿದೆ. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 84,000 ಕಟ್ಟಡ ಕಾರ್ಮಿಕರನ್ನು ನೋಂದಾಯಿಸಲಾಗಿದ್ದು, ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಅದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.

 ಮನೆ ಬಾಗಿಲಿಗೆ ಬರಲಿವೆ ನಾಗರಿಕ ಸೇವೆಗಳು

ಮನೆ ಬಾಗಿಲಿಗೆ ಬರಲಿವೆ ನಾಗರಿಕ ಸೇವೆಗಳು

ಅಂಬೇಡ್ಕರ್ ಅವರ ಆಶಯದಂತೆ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದವನ್ನು ಸಂರಕ್ಷಿಸುವ ಉದ್ದೇಶ ಸರ್ಕಾರದ್ದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ಇದರಿಂದ ದೃಢವಾಗುತ್ತವೆ ಎಂಬ ನಂಬಿಕೆ ನಮ್ಮದಾಗಿದೆ. "ರೈತ ವಿದ್ಯಾಸಿರಿ" ಯೋಜನೆ, 58ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ "ಜನಸೇವಕ" ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

‌‌‌ಇದೇ ಸಂದರ್ಭದಲ್ಲಿ ಸಚಿವರು ಕಟ್ಟಡ ಕಾರ್ಮಿಕರ 8 ಮಕ್ಕಳಿಗೆ ಟ್ಯಾಬ್‌ಗಳನ್ನು ವಿತರಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಗಮನ ಸೆಳೆದರು. ದೇಶಭಕ್ತಿ ಗೀತೆಗಳಿಗೆ ಶಾಲಾ ಮಕ್ಕಳ ನೃತ್ಯ ಪ್ರದರ್ಶನ ಎಲ್ಲರ ಗಮನಸೆಳೆಯಿತು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದಿಗ್ವಿಜಯ್ ಬೋಡ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Will be water filled soon to Ramnagar district 2,500 lakes says Minister C.N. Ashwath Narayan, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X