ರಾಯಚೂರು ಜಿಲ್ಲೆಯಲ್ಲಿ ಬೆಳೆದ ಜೋಳದ ಸೊಪ್ಪೆಗೆ ಭಾರಿ ಬೇಡಿಕೆ, ಏಕೆ?, ಇಲ್ಲಿದೆ ವಿವರ
ರಾಯಚೂರು, ಮಾರ್ಚ್, 10: ಬೇಸಿಗೆ ಆರಂಭದೊಂದಿಗೆ ಮುಂದಿನ ಐದು ತಿಂಗಳಿಗೆ ಜಾನುವಾರುಗಳಿಗೆ ಮೇವು ಸಂಗ್ರಹ ಮಾಡುವ ಗುರಿಯನ್ನು ಜಿಲ್ಲೆಯ ಜನತೆ ಹೊಂದಿದ್ದಾರೆ. ಮಳೆಯಾಧರಿತ ಗ್ರಾಮೀಣ ಪ್ರದೇಶದಿಂದ ಅನ್ಯ ರಾಜ್ಯಕ್ಕೆ ಜೋಳದ ಮೇವು ಸಾಗಣೆ ಜೋರಾಗಿ ಸಾಗಿದೆ. ಇದೀಗ ಬೇಸಿಗೆ ಆರಂಭವಾಗಿದ್ದು, ಜಾನುವಾರು ಸಾಗಾಣಿಕೆದಾರರು ಮೇವು ಕೊಳ್ಳಲು ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹಾಗಾದರೆ ಜಿಲ್ಲೆಯಲ್ಲಿ ಮೇವಿಗೆ ಬೇಡಿಕೆ ಹೇಗಿದೆ ಅನ್ನುವ ವರದಿ ಇಲ್ಲಿದೆ ನೋಡಿ.
ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗದ ರೈತರು ಈ ಬಾರಿ ನೀರಿನ ಕೊರತೆಯಿಂದ ಸರಿಯಾಗಿ ಭತ್ತ, ಬಿಳಿ ಜೋಳ ಬೆಳೆ ಫಲವತ್ತಾಗಿ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಇಲ್ಲಿನ ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಭತ್ತದ ಮೇವಿನ ಬದಲು ಸದ್ಯಕ್ಕೆ ಜೋಳದ ಸೊಪ್ಪೆಗೆ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಬೆಳೆಯುವ ಬಿಳಿ ಜೋಳದ ಸೊಪ್ಪೆಯನ್ನು ಅಪಾರ ಪ್ರಮಾಣದಲ್ಲಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಕ್ಕೆ ನಿತ್ಯವೂ ರಫ್ತು ಮಾಡಲಾಗುತ್ತಿದೆ.
ರಾಯಚೂರು ಜೋಳ, ಹತ್ತಿ, ಭತ್ತ ಬೆಳೆಯುವ ನಾಡೆಂದೇ ಗುರುತಿಸಿಕೊಂಡಿದೆ. ಅದರಲ್ಲೂ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಅಷ್ಟಾಗಿ ಕಂಡುಬರುತ್ತಿರಲಿಲ್ಲ. ಆದರೆ ಈ ಬಾರಿ ಕೆಳಭಾಗದ ರೈತರಿಗೆ ಸರಿಯಾಗಿ ನೀರು ದೊರೆಯದೆ ಇರುವುದರಿಂದ ರಾಯಚೂರು ಗ್ರಾಮೀಣ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ರೈತರು ಇಲ್ಲಿಂದ ಮೇವನ್ನು ರಫ್ತು ಮಾಡಿಕೊಳ್ಳುತ್ತಿದ್ದಾರೆ.

ರಾಯಚೂರು ಜಿಲ್ಲೆಯಿಂದ ಮೇವು ರಫ್ತು
ಬೇಸಿಗೆ ಆರಂಭವಾದರೆ ಸಾಕು ಮುಂದೆ ಮೇವಿನ ಕೊರತೆ ಉಂಟಾಗಬಹುದೆಂಬ ಕಾರಣಕ್ಕೆ ಬೇಸಿಗೆ ಮುನ್ನವೇ ಜೋಳದ ಸೊಪ್ಪೆಯನ್ನು ಬೆಳೆದಿದ್ದಾರೆ. ಜೋಳದ ಸೊಪ್ಪೆ ಖರೀದಿಗೆಂದು ಹೊರರಾಜ್ಯದವರು ರಾಯಚೂರು ಜಿಲ್ಲೆಗೆ ಬರುವುದು ಈ ವರ್ಷವೂ ಸಹಜವಾಗಿದೆ. ತೆಲಂಗಾಣದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುವ ಭತ್ತವನ್ನು ಅಲ್ಲಿ ಯಂತ್ರಗಳಿಂದ ಕೊಯ್ಲು ಮಾಡುತ್ತದೆ. ಆದ್ದರಿಂದ ಜಾನುವಾರುಗಳಿಗೆ ಮೇವಿನ ಅಭಾವವಾಗಲಿದೆ ಎನ್ನಬಹುದಾಗಿದೆ.

ಜಿಲ್ಲೆಯಲ್ಲಿ ಳಜೋದ ಸೊಪ್ಪೆಗೆ ಭಾರಿ ಬೇಡಿಕೆ
ಹೀಗಾಗಿ ಬೇಸಿಗೆ ವೇಳೆ ಮೇವಿನ ಸಮಸ್ಯೆ ನಿವಾರಣೆಗೆ ಪಕ್ಕದ ರಾಜ್ಯದ ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ತೆರಳಿ ಜೋಳದ ಸೊಪ್ಪೆಯನ್ನು ತೆಗೆದುಕೊಂಡು ಬರುತ್ತಿದ್ದಾರೆ. ಪ್ರತಿದಿನ 10 ಟನ್‌ಗಿಂತ ಅಧಿಕ ಪ್ರಮಾಣದಲ್ಲಿ ಮೇವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಹಣದಾಸೆಗೆ ಜಿಲ್ಲೆಯಲ್ಲಿನ ಮೇವಿನ ಮಾರಾಟ
ಕಳೆದ ವರ್ಷಕ್ಕಿಂತ ಈ ವರ್ಷ ಜೋಳದ ಸೊಪ್ಪೆ, ಭತ್ತದ ಮೇವಿನ ಸಮಸ್ಯೆ ಎದುರಾಗಿದ್ದು, ಇದರಿಂದ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಜೋಳದ ಸೊಪ್ಪೆಯನ್ನು ಒಂದು ಲೋಡ್ ಗಾಡಿಗೆ 24 ಸಾವಿರ ಪಡೆದು ಅನ್ಯ ರಾಜ್ಯದ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಜೋಳದ ಸೊಪ್ಪೆ ಸೇವೆನೆಯಿಂದ ಜಾನುವಾರುಗಳು ಆರೋಗ್ಯಕರವಾಗಿರುತ್ತವೆ. ಈ ಸೊಪ್ಪೆ ಹೀಗೆ ಜಾನುವಾರುಗಳು ಆರೋಗ್ಯದಿಂದ ಇರಲು ಸಹಕಾರಿಯಾಗಿದೆ.
ಜೋಳದ ಸೊಪ್ಪೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಲು ಆನ್ಯ ರಾಜ್ಯಗಳ ರೈತರು ಮುಂದಾಗಿದ್ದಾರೆ. ರಾಯಚೂರು ಜಿಲ್ಲೆಯ ಫಲವತ್ತಾದ ಭೂಮಿಯಲ್ಲಿ ರೈತರು ಮಳೆ, ನೀರಾವರಿ ಆಧರಿಸಿ ಬೆಳೆಯುವ ಜೋಳ ಮತ್ತು ಅದರ ಸೊಪ್ಪೆಗೆ ಭಾರಿ ಬೇಡಿಕೆ ಇದೆ. ಇಲ್ಲಿನ ಜೋಳ ಇಡೀ ರಾಜ್ಯಕ್ಕೆ ರವಾನೆಯಾದರೆ ಸೊಪ್ಪೆಯನ್ನು ಹೆಚ್ಚಾಗಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದವರು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.

ತಾಲೂಕುವಾರು ಮೇವು ಬೆಳೆಯ ವಿವರ
ಜಿಲ್ಲೆಯ ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು, ಸಿರವಾರ, ಮಸ್ಕಿ ತಾಲೂಕುಗಳಲ್ಲಿ ಬಿಳಿ ಜೋಳ, ಭತ್ತವನ್ನು ಬೆಳೆಯಲಾಗುತ್ತದೆ. ಅದರಲ್ಲೂ ರಾಯಚೂರು ತಾಲೂಕಿನ ಹೊಸಪೇಟೆ, ಜಾಗೀರ್ ವೆಂಕಟಾಪುರ, ಅರಳಪ್ಪನ ಹುಡಾ ಗ್ರಾಮದಲ್ಲಿ ಹೆಚ್ಚಿನದಾಗಿ ಜೋಳ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಮಳೆ ಕೊರತೆ ಹಾಗೂ ನೀರಿನ ಸಮಸ್ಯೆಯಿಂದ ಹೆಚ್ಚಿನ ಇಳುವರಿ ಬಂದಿಲ್ಲ ಎಂದು ಇಲ್ಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮೇವಿನ ಅಭಾವ ಸಾಧ್ಯತೆ
ಹೀಗಾಗಿ ಜಿಲ್ಲೆಯಲ್ಲಿ ಭತ್ತದ ಮೇವು, ಬಿಳಿ ಜೋಳದ ಸೊಪ್ಪೆಗೆ ಭಾರಿ ಬೇಡಿಕೆ ಬಂದಿದೆ. ಜೋಳದ ಸೊಪ್ಪೆ ಸಾಗಣೆ ಮಾಡಲು ಅನ್ಯ ರಾಜ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ದುಪ್ಪಟ್ಟು ಹಣ ನೀಡಿ ಖರೀದಿ ಮಾಡುತ್ತಿದ್ದಾರೆ. ರೈತರು ಹಣದ ಆಸೆಗೆ ಮೇವು ಮಾರಾಟ ಮಾಡುತ್ತಿರುವುದರಿಂದ ಈ ಬಾರಿ ಜಿಲ್ಲೆಯ ರೈತರಿಗೆ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಾರಿ ನೀರಿನ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದ್ದು, ಬೇಸಿಗೆಯಲ್ಲಿ ಕೇವಲ ಜೋಳದ ಸೊಪ್ಪೆ ದೊರೆಯುವುದು ಕಷ್ಟವಾಗಿದೆ. ಕೂಡಲೇ ಸರ್ಕಾರ ಪಶು ಇಲಾಖೆ ಮೂಲಕ ಜಾನುವಾರುಗಳಿಗೆ ಹಸಿ ಮೇವು ಬೆಳೆಯಲು ಅನುದಾನ ನೀಡಬೇಕು ಎಂದು ರೈತ ಲಕ್ಷ್ಮಣಕಡಗಂದೊಡ್ಡಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವುದಿಲ್ಲ. ರೈತರು ಹೆಚ್ಚಿನದಾಗಿ ಬಿಳಿ ಜೋಳವನ್ನು ಬೆಳೆಯುತ್ತಿದ್ದಾರೆ. ಜಾನುವಾರುಗಳು ಸೊಪ್ಪೆ ಸೇವನೆ ಮಾಡಿದರೆ ಯಾವುದೇ ರೋಗ ಬರುವುದಿಲ್ಲ. ಹೀಗಾಗಿ ಜಿಲ್ಲೆಯ ರೈತರು ಅನ್ಯ ರಾಜ್ಯದವರಿಗೆ ಮೇವನ್ನು ಮಾರಾಟ ಮಾಡದೆ ಇಲ್ಲಿನ ರೈತರಿಗೆ ನೀಡಿ ಸಹಕರಿಸಬೇಕು ಎಂದು ಪಶು ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ್ ಕುಲಕರ್ ಅವರು ಮನವಿ ಮಾಡಿದರು.












Click it and Unblock the Notifications