ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು
ಶಿವಮೊಗ್ಗ, ನವೆಂಬರ್ 29 : ಶಿವಮೊಗ್ಗ ಜಿಲ್ಲೆಯ ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ಜಿಲ್ಲೆಯಲ್ಲಿನ ಮಾವು ಬೆಳೆಗೆ ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಹತೋಟಿ ಕ್ರಮಗಳ ವಿವರಣೆಯನ್ನು ನೀಡಿದೆ.
ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆ ಇದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಮಾವು ಬೆಳೆ ಕೃಷಿಕರು ಇಲಾಖೆ ಸೂಚಿಸಿರುವ ಔಷಧಿಗಳನ್ನು ಸಿಂಪಡಣೆ ಮಾಡುವುದರಿಂದ ಹತೋಟಿ ಮಾಡಬಹುದು ಎಂದು ಇಲಾಖೆ ಹೇಳಿದೆ.
ಬೂದಿ ರೋಗಕ್ಕೆ ತುತ್ತಾದ ಗಿಡದ ಎಲೆಗಳು, ಹೂಗೊಂಚಲುಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳು ಉದುರುತ್ತವೆ ಹಾಗೂ ಎಲೆಗಳು ಮುರುಟಿ ನಂತರದ ದಿನಗಳಲ್ಲಿ ಎಳೆಯ ಕಾಯಿಗಳು ಉದುರುತ್ತವೆ.

ಬೂದಿ ರೋಗದ ನಿರ್ವಹಣೆಗೆ ರೈತರು ರೋಗಕ್ಕೆ ತುತ್ತದಾದ ಮರದ ಭಾಗಗಳನ್ನು ತೆಗೆದು ನಾಶಪಡಿಸಬೇಕು. ಮರಗಳ ತಳ ಭಾಗದಲ್ಲಿ ಉದುರಿದ ಒಣಗಿದ ಎಲೆ, ಹೂ ಗೊಂಚಲುಗಳು ಹಾಗೂ ಬಟಾಣಿ ಹೀಚುಗಳನ್ನು ಆರಿಸಿ ಸುಡಬೇಕು.
ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಅಥವಾ 400 ಮಿ.ಲೀ. ಹೆಕ್ಸಾಕೋನಜೋಲ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವುದು. 15 ರಿಂದ 20 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸುವುದು ಸೂಕ್ತ.

ಜಿಗಿ ಹುಳುಗಳು ಸಹ ಬೆಳೆಗೆ ಹಾನಿ ಮಾಡುತ್ತವೆ. ಜಿಗಿಹುಳು ಅಂಟು ಪದಾರ್ಥವನ್ನು ಸ್ರವಿಸುವುದರಿಂದ ಹೂ ಗೊಂಚಲಿನಲ್ಲಿ ಕಪ್ಪು ಬೂಸ್ಟ್ ಬೆಳವಣಿಗೆ ಕಂಡುಬರುತ್ತದೆ. ಕೀಟದ ನಿರ್ವಹಣೆಗೆ ಅಝಾಡಿರೆಕ್ಟಿನ್ 7 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಜೊತೆಗೆ ಪ್ರತಿ 200 ಲೀಟರ್ ನೀರಿಗೆ 400 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 100 ಮಿ.ಲೀ. ಇಮಿಡಾಕ್ಲೋಪಿಡ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವಂತೆ ರೈತರಿಗೆ ಸೂಚಿಸಲಾಗಿದೆ.












Click it and Unblock the Notifications