' ಬೆಳೆಗಳಿಗೆ ಬೆಂಬಲ ಬೆಲೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ'
ಹುಬ್ಬಳ್ಳಿ, ಜುಲೈ 11 : ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಡಾ. ಸ್ವಾಮಿನಾಥನ್ ವರದಿ ಶಿಪಾರಸ್ಸು ಮಾಡಿದ್ದರೂ, ವರದಿ ಜಾರಿ ಅಸಾಧ್ಯ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ ರೈತರ ಮೇಲೆ ಕಾಳಜಿ ಎಷ್ಟಿದೆ ಎಂಬುದು ತಿಳಿಯುತ್ತಿದೆ ಎಂದು ಜೆಡಿಎಸ್ ರೈತ ಘಟಕದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರೈತರ ಆರ್ಥಿಕ ಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನಂತರ ಡಾ.ಸ್ವಾಮಿನಾಥನ್ ಆಯೋಗ ವರದಿ ಸಲ್ಲಿಸಿದೆ.

ಒಂದು ವೇಳೆ ರೈತರ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಿದರೆ ಅದು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತದೆ ಎಂಬ ಕಾರಣ ನೀಡಿರುವ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ, ಬಹುತೇಕ ಬಿಜೆಪಿ ನಾಯಕರಿಗೆ ಈ ವಿಷಯ ಗೊತ್ತಿಲ್ಲದಿರುವುದು ನಾಚಿಗೇಡಿನ ಸಂಗತಿ' ಎಂದು ಅವರು ಅಸಮದಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ದುಡಿಯುವ ಜನರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ದೇಶಕ್ಕೆ ಅನ್ನ ಕೊಡುವ ರೈತರ ಪರವಾಗಿ ಕೆಲಸ ಮಾಡುವ ಬದಲು ಕೇವಲ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಿದೆ ಎಂದು ಅವರು ಕಿಡಿಕಾರಿದರು.
ಕೇಂದ್ರ ಸರ್ಕಾರದ ಈ ಮೋಸವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಪಕ್ಷದ ವತಿಯಿಂದ ಜಿಲ್ಲಾವಾರು ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಈ ಕುರಿತು ಹೋರಾಟಕ್ಕೆ ಮುಂದಾಗಲು ಚಿಂತನೆ ನಡೆಸಲಾಗಿದ್ದು, ಈ ಕುರಿತು ತಿರ್ಮಾನ ಕೈಗೊಳ್ಳಲು ಇದೇ 14 ರಂದು ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಜೆಡಿಎಸ್ ರೈತ ಘಟಕದ ಮುಖಂಡರನ್ನು ಸಭೆ ಕರೆಯಲಾಗಿದೆ ಎಂದು ಗಂಗಾಧರ ತಿಳಿಸಿದರು.
ಈ ಭಾಗದ ರೈತರ ಜೀವ ಉಳಿಯಬೇಕು ಎಂದರೆ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಯಾಗಬೇಕು. ಆದರೆ, ಕಳೆದ ಎರಡು ವರ್ಷಗಳಿಂದ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ ಎಂದು ಅವರು ಅಸಮದಾನ ವ್ಯಕ್ತಪಡಿಸಿದರು.












Click it and Unblock the Notifications