ಸಂಯುಕ್ತ ಕಿಸಾನ್ ಮೋರ್ಚಾ: ಬೆಂಗಳೂರಲ್ಲಿ 2ದಿನ ಬೃಹತ್ ರ್‍ಯಾಲಿ
ಬೆಂಗಳೂರು ಸೆಪ್ಟಂಬರ್ 07: ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ವತಿಯಿಂದ ಇದೇ 25 ಮತ್ತು 26 ರಂದು ಎರಡು ದಿನ ಬೆಂಗಳೂರಿನಲ್ಲಿ 'ರಾಷ್ಟ್ರೀಯ ರೈತ ಮುಖಂಡರ ಕಿಸಾನ್ ಮಹಾ ಪಂಚಾಯತ್' ರೈತರ ಬೃಹತ್ ರ್‍ಯಾಲಿ ನಡೆಯಲಿದೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಅವರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗ್ಯಾರೆಂಟಿ ಕಾನೂನು ಜಾರಿ ಮಾಡುತ್ತೇವೆ. ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ 2021ರ ನವಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ನೀಡಿದ್ದ ಭರವಸೆಗಳು ಹುಸಿಗೊಂಡಿವೆ ಎಂದು ಅವರು ದೂರಿದರು.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾತರಿ ನೀಡಲು ಸಮಿತಿ ರಚಿಸಿದ್ದೇವೆ ಎಂದು ಒಂದು ವರ್ಷ ಕಾಲ ಹೋರಾಟ ಮಾಡಿದ ರೈತ ಮುಖಂಡರ ಹೊರಗಿಟ್ಟು ಸಮಿತಿ ರಚಿಸಿ ಪ್ರಧಾನಿಗಳು ನಾಟವಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದೇಶಾದ್ಯಂತ ರೈತ ಚಳುವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ನಿರ್ಧರಿಸಲಾಗಿದೆ. ದಕ್ಷಿಣ ಭಾರತದ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ 'ರಾಷ್ಟ್ರೀಯ ಮುಖಂಡರ ಕಿಸಾನ್ ಮಹಾ ಪಂಚಾಯತ್' ಹೆಸರಿನಲ್ಲಿ ರೈತರ ಬೃಹತ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಅವರು ತಿಳಿಸಿದರು.

ರೈತರ ಬೃಹತ್ ರ್‍ಯಾಲಿ
ಬೃಹತ್ ರ್‍ಯಾಲಿ ಮುನ್ನ ರೈತರು ಮುಖಂಡರು ಸಭೆ ನಡೆಸಲಿದ್ದು, ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗುವುದು. ಅದರಲ್ಲಿ ಎಲ್ಲಾ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾತರಿ ಕಾನೂನು ಜಾರಿಗೆ ತರಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. 2022ರ ವಿದ್ಯುತ್ ಕಾಯ್ದೆ ಖಾಸಗಿಕರಣ ತಿದ್ದುಪಡಿಯನ್ನು ಸರ್ಕಾರ ಕೈಬಿಡಬೇಕು. ಕಬ್ಬಿನ ಎಫ್ಆರ್‌ಪಿ ದರ ಪುನರ್ ಪರಿಶೀಲಿಸಿ ವೈಜ್ಞಾನಿಕವಾಗಿ ನ್ಯಾಯಯುತ ಕಬ್ಬಿನ ದರ ನಿಗದಿ ಮಾಡಬೇಕು. ಕೃಷಿ ಉತ್ಪನ್ನಗಳು ಹಾಗೂ ಉಪಕರಣಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರದ್ದುಪಡಿಸುವ ಕುರಿತು ಚರ್ಚಿಸಲಾಗುವುದು.

ಉದ್ಯಮಿಗಳಂತೆ ರೈತರ ಸಾಲ ಮನ್ನಾಮಾಡಿ
ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಕೊರೊನಾ ಲಾಕ್‌ಡೌನ್ ಸಂಕಷ್ಟದಿಂದ ನಲುಗಿದ್ದಾರೆ. ಇದನ್ನು ಮನಗಂಡು ಉದ್ಯಮಿಗಳ 10 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಫಸಲ್ ಭೀಮಾ ಬೆಳೆವಿಮೆ ಯೋಜನೆ ಮಾನದಂಡ ಬದಲಾಯಿಸುವ ಜತೆಗ ವಿಶ್ವವ್ಯಾಪಾರ ಒಪ್ಪಂದ ಡಬ್ಲ್ಯುಟಿಒ ನಿಂದ ಭಾರತ ಸರ್ಕಾರ ಹೊರಬರಬೇಕು. ಲಕ್ಷ್ಮಿಪುರಕೇರಿ ಪ್ರಕರಣದಲ್ಲಿ ಭಾಗಿಯಾಗಿರುವ ಕೇಂದ್ರದ ರಾಜ್ಯ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾರವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಲಾಗುವುದು.

ಹೋರಾಟದಲ್ಲಿ ಮಡಿದ ರೈತರಿಗೆ ಪರಿಹಾರ ನೀಡಿ
ದೆಹಲಿ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ನೀಡಿದ ಭರವಸೆಯಂತೆ ಪರಿಹಾರ ಒದಗಿಸಬೇಕು. ರಾಜ್ಯದಲ್ಲಿ ಅಂದಾಜು10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಳೆ ಹಾನಿಯಿಂದ ರೈತರ ಬೆಳೆ ನಷ್ಟ ಆಗಿದೆ. ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಬೆಳೆ ನಷ್ಟ ಬಗ್ಗೆ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ ನೈಜ ನಷ್ಟ ಲೆಕ್ಕಹಾಕಿ ಪರಿಹಾರ ನೀಡಲು ಮುಂದಾಗಬೇಕಿದೆ.

ತಾಲೂಕು ಭೇಟಿ ಸಿಎಂ ಸೂಚಿಸಲಿ
ಜಿಲ್ಲಾ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ತಾಲೂಕಿಗೂ ಭೇಟಿ ನೀಡಿ ಪರಿಶೀಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡುವುದು ಸೇರಿದಂತೆ ಹತ್ತು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು. ಈ ಸಂಬಂಧ ಚರ್ಚಿಸಿ ದೇಶಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ರಾಷ್ಟ್ರೀಯ ಕಿಸಾನ್ ಸಂಘಟನೆಯ ಭೀಮಯ್ಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಕರ್ನಾಟಕ ನವನಿರ್ಮಾಣ ಸೇನೆ ಮುಖ್ಯಸ್ಥ ಯತಿರಾಜ್ ನಾಯ್ಡು, ಕನಕಪುರ ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications