ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತ; ರಾಯಚೂರಿನ ರೈತರು ಕಂಗಾಲು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್‌, 19: ತುಂಗಭದ್ರಾ ಎಡದಂಡೆ ಕಾಲುವೆಯನ್ನು ನಂಬಿಕೊಂಡು ಕೃಷಿಯಲ್ಲಿ ತೊಡಗಿರುವ ರೈತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ರೈತರು ನಾಟಿ ಭತ್ತವನ್ನು ನಾಟಿ ಮಾಡಿದ್ದು, ಇದೀಗ ನೀರಿಲ್ಲದೇ ಆತಂಕಕ್ಕೆ ಒಳಗಾಗಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ಕಾರಣ ಭತ್ತ ನಾಟಿ ಮಾಡಿದ ರೈತರು ಕಂಗಾಲಾಗಿದ್ದಾರೆ. ನೀರಾವರಿ ಇಲಾಖೆ ಬೇಸಿಗೆಯಲ್ಲಿ ಕಾಲುವೆಯ ನಿರ್ವಹಣೆ ಮಾಡದೇ ನಿರ್ಲಕ್ಷ್ಯದಿಂದ ರೈತರು ಪರದಾಡುವಂತಾಗಿದೆ. ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯ ಮುಂಚಿತವಾಗಿಯೇ ಭರ್ತಿ ಆದ್ದರೂ ಕಾಲುವೆಯ ಕಡೆಯ ಭಾಗಕ್ಕೆ ತಡವಾಗಿಯೇ ನೀರು ತಲುಪಿದೆ. ಅಕ್ರಮ ನೀರಾವರಿ, ನೀರಿನ ಕಬಳಿಕೆ, ವ್ಯರ್ಥವಾಗಿ ಹಳ್ಳದ ಮೂಲಕ ನದಿಗೆ ಹರಿಸುವುದು ಮತ್ತಿತರ ಕಾರಣಗಳಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ರೈತರಿಗೆ ನೀರು ತಡವಾಗಿಯೇ ದೊರೆತಿತ್ತು.

ಭತ್ತ ನಾಡಿ ಮಾಡಿದಾಗಲೇ ನೀರು ಸ್ಥಗಿತ:

ನಾಟಿ ಮಾಡಿದ ಭತ್ತಕ್ಕೆ ನೀರು ಬೇಕಾದ ಈ ಸಂದರ್ಭದಲ್ಲಿಯೇ ಕಾಲುವೆಯ ನೀರು ಸ್ಥಗಿತಗೊಂಡಿದ್ದು, ರೈತರು ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಮಸ್ಕಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯ ಅಕ್ವಡಕ್ಟ್ ಒಂದರ ಕೆಳಭಾಗದ ಕಂಬದ ಕಲ್ಲುಗಳು ಕಿತ್ತು ಕೆಳಗೆ ಬಿದ್ದಿವೆ. ಆದ್ದರಿಂದ ತುಂಗಭದ್ರಾ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯಲ್ಲಿ ಮೂರು ದಿನಗಳ ಮಟ್ಟಿಗೆ ನೀರಿನ ಹರಿವು ಸ್ಥಗಿತಗೊಳಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಈ ಬಾರಿ ಜಲಾಶಯವು ಭತ್ತ ನಾಟಿ ಮಾಡುವ ಮೊದಲೇ ಭರ್ತಿ ಆಗಿದ್ದರಿಂದ ರೈತರು ಸಂತೋಷ ವ್ಯಕ್ತಪಡಿಸಿದ್ದರು.

Tungabhadra left bank canal water stopped; Farmers paniked

ಭತ್ತ ನಾಟಿ ಮಾಡಿದ ಅನ್ನದಾತ ಕಂಗಾಲು:

ಜಲಾಶಯ ಭರ್ತಿಯಾದ ಹಿನ್ನೆಲೆ ಎರಡೂ ಹಂಗಾಮಿಗೆ ನೀರು ದೊರೆಯುವ ನಿರೀಕ್ಷೆಯಲ್ಲಿದ್ದರು. ಮೊದಲ ಹಂಗಾಮಿಗಾಗಿ ನೀರು ಜುಲೈ 10ಕ್ಕೆ ಕಾಲುವೆಗೆ ಹರಿಸಿದರೂ ರೈತರಿಗೆ ನೀರು ತಡವಾಗಿಯೇ ಲಭ್ಯವಾಗಿತ್ತು. ಅಧಿಕಾರಿಗಳು ನೀರಿನ ಮಟ್ಟ ಕಾಯ್ದುಕೊಳ್ಳಲು ಆಗದಿದ್ದರಿಂದ ಕಾಲುವೆಯ ಕಡೆಯಲ್ಲಿ ನೀರಿಲ್ಲದೇ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಮೂರು ತಾಲೂಕುಗಳಲ್ಲಿ ಬೆಳೆದ ಭತ್ತಕ್ಕೆ ನೀರಿನ ಅಭಾವ ಎದುರಾಗಿದೆ. ನೀರಾವರಿ ಇಲಾಖೆಯು ಮೂರು ದಿನಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದು, ಕಾಲುವೆಯಲ್ಲಿ ನಿರೀಕ್ಷೆಯಂತೆ ನೀರಿನ ಹರಿವಿನ ಮಟ್ಟ ಹೆಚ್ಚಳವಾಗಲು ಕನಿಷ್ಠ ಒಂದು ವಾರವಾದರೂ ಬೇಕಾಗಲಿದೆ.

ಪ್ರಭಾವಿಗಳ ಅಕ್ರಮ, ಅನ್ನದಾತರ ಪರದಾಟ

ಭತ್ತ, ಹತ್ತಿ ಸೇರಿದಂತೆ ಮತ್ತಿತರ ಬೆಳೆಗಳಿಗೆ ನೀರು ಒದಗಿಸುವ ಹೊಣೆ ನೀರಾವರಿ ಇಲಾಖೆ ಮೇಲೆ ಬೀಳಲಿದೆ. ಕಾಲುವೆಯಲ್ಲಿ ಅಗತ್ಯ ಪ್ರಮಾಣದ ನೀರಿನ ಮಟ್ಟ ಕಾಯ್ದುಕೊಳ್ಳದಿದ್ದರೆ ರೈತರು ಹೋರಾಟಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಲುವೆಯ ಕೊನೇ ಭಾಗದಲ್ಲಿ ಸಮಸ್ಯೆ ಆಗಿದ್ದರೂ ಕೊಪ್ಪಳ ಜಿಲ್ಲೆಯ ರೈತರಿಗೆ ನೀರಿನ ಯಾವುದೇ ರೀತಿಯ ಅಡಚಣೆ ಆಗಿಲ್ಲ. ಅಷ್ಟೇ ಅಲ್ಲ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಭಾವಿಗಳು ಕೈಗೊಂಡಿರುವ ಅಕ್ರಮ ನೀರಾವರಿಯಿಂದಾಗಿ ರಾಯಚೂರು ಜಿಲ್ಲೆಯ 104ನೇ ಮೈಲ್‌ ಕೆಳಭಾಗದಲ್ಲಿನ ರೈತರು ಪರದಾಡುವಂತಾಗಿದೆ.

ಕಳೆದ ವರ್ಷದ ಬೇಸಿಗೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯ ನಿರ್ವಹಣೆಗೆ ಗಮನ ಕೊಡಲಿಲ್ಲ. ಮಸ್ಕಿ ಬಳಿ ಆಗಿರುವ ಸಮಸ್ಯೆಯನ್ನು ಮೊದಲೇ ಗಮನಿಸಿದ್ದರೆ ಇಂದು ಕಾಲುವೆಯ ಕಡೆಯಲ್ಲಿನ ರೈತರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು ಚಾಮರಸ ಮಾಲಿ ಪಾಟೀಲ್‌ ಹೇಳಿದರು.

English summary
water stopped in Tungabhadra left bank canal, paddy planted farmers worried. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X