ತುಂಗಭದ್ರಾ ತುರ್ತು ನೀರಾವರಿ ಸಲಹಾ ಸಮಿತಿ ಸಭೆ; ನಿರ್ಣಯಗಳು
ಬೆಂಗಳೂರು, ಫೆಬ್ರವರಿ 25; ಕಳೆದ ವರ್ಷ ಮುಂಗಾರು ಮಳೆ ಕೈ ಕೊಟ್ಟಿದೆ. ಡ್ಯಾಂಗಳು ಖಾಲಿಯಾಗುತ್ತಿದ್ದು, ಬೇಸಿಗೆಗೆ ನೀರಿನ ಸಮಸ್ಯೆ ಎದುರಾಗುವ ಸೂಚನೆ ಸಿಕ್ಕಿದೆ. ತುಂಗಭದ್ರಾ ಯೋಜನೆಯ 121ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯಿತು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ತುಂಗಭದ್ರಾ ಯೋಜನೆಯ ವಿಜಯನಗರ ಕಾಲುವೆಗಳಿಗೆ ನಿಂತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರನ್ನು ಕಾಯ್ದಿರಿಸುವ ಕುರಿತಂತೆ ಸಭೆಯಲ್ಲಿದ್ದ ಸಚಿವರು, ಶಾಸಕರು, ಸಂಸದರು ಹಾಗೂ ಸದಸ್ಯರು ಮತ್ತು ನೀರಾವರಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ನೀರನ್ನು ಒದಗಿಸುವ ಕಾಲಾವಧಿಯ ಬಗ್ಗೆ ನಿರ್ಣಯಿಸಲಾಯಿತು.
ಸಭೆಯ ನಿರ್ಣಯ
* ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಗಣೇಕಲ್ ಜಲಾಶಯ ಹಾಗೂ ಇತರೆ ಕೆರೆ ಕಟ್ಟೆಗಳಿಗೆ ಮಾರ್ಚ್ 5ರಿಂದ ಮಾರ್ಚ್ 16ರವರೆಗೆ 1200 ಕ್ಯೂಸೆಕ್‌ನಂತೆ ಕುಡಿಯುವ ನೀರು ಹರಿಸಲಾಗುತ್ತದೆ.
* ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಬಳ್ಳಾರಿ ಜಿಲ್ಲೆಗೆ ಹಾಗೂ ಇತರೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಮಾರ್ಚ್ 10ರಿಂದ ಮಾರ್ಚ್ 20ರವರೆಗೆ 100 ಕ್ಯೂಸೆಕ್‌ನಂತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾ.21ರಿಂದ ಮಾ.31ರವರೆಗೆ 100 ಕ್ಯೂಸೆಕ್ ನಂತೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು.
* ರಾಯ ಬಸವಣ್ಣ ಕಾಲುವೆಯಿಂದ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.260 ಟಿಎಂಸಿ ನೀರಿನಲ್ಲಿ ಮಾ.1ರಿಂದ ಮೇ 30ರವರೆಗೆ 100 ಕ್ಯೂಸೆಕ್‌ನಂತೆ ಆನ್ ಆಫ್‌ನಂತೆ ಕುಡಿಯುವ ನೀರೋಳಗೊಂಡು ಹರಿಸಬಹುದಾಗಿದೆ.
ಕಾಲುವೆಗಳಿಗೆ ನೀರು ಹರಿಸುವ ಈ ಸಮಯದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕಲಂ 144ನ್ನು ಅಳವಡಿಸಿ ಸೂಕ್ತ ಪೊಲೀಸ್ ಬಂದೋಬಸ್ತ್‌ಅನ್ನು ಪಡೆದು ಕುಡಿಯುವ ನೀರಿನ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಸಭೆಯಲ್ಲಿ ಸೂಚನೆ ನೀಡಲಾಯಿತು.
ಸಭೆಯ ಬಳಿಕ ಮಾತನಾಡಿದ ಸಚಿವ ಶಿವರಾಜ ತಂಗಡಗಿ, "ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ಹೇಳಿದರು.
"ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ 4 ಜಿಲ್ಲೆಗಳಿಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ. ಕುಡಿಯುವ ನೀರಿಗೆ ಮಾತ್ರ ಆದ್ಯತೆ ಕೊಟ್ಟು ಜನರಿಗೆ ನೀರು ಒದಗಿಸಲು ತೀರ್ಮಾನ ಮಾಡಲಾಗಿದೆ" ಎಂದು ಸಚಿವರು ತಿಳಿಸಿದರು.
ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಿದಾಗ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಆಗ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ನಿಯೋಜಿಸಲ್ಪಟ್ಟ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಅನಧಿಕೃತವಾಗಿ ಪಂಪ್ ಸೆಟ್‍ಗಳ ಮೂಲಕ ನೀರನ್ನು ಎತ್ತುವುದನ್ನು ನಿಷೇಧಿಸಲಾಗುತ್ತದೆ.












Click it and Unblock the Notifications