ಫುಡ್‌ಪಾರ್ಕ್ ಮಾಡಿದ ಮಾತ್ರಕ್ಕೆ ರೈತರ ಹೊಟ್ಟೆ ತುಂಬಲ್ಲ
ದೇಶದ ರೈತರ ಸಮೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸೋಪಾನವಾಗಲಿದೆ ಎಂದು ನಂಬಿ ತುಮಕೂರಿನಲ್ಲಿ ನಿರ್ಮಿಸಲಾಗಿರುವ ಮೆಗಾ ಫುಡ್ ಪಾರ್ಕನ್ನು ಸೆ.24ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ರೈತರ ಆದಾಯ ಮತ್ತು ಉದ್ಯೋಗಾವಕಾಶ ವೃದ್ಧಿಯಾಗಲಿದೆ ಎಂಬ ಕನಸನ್ನು ಫುಡ್ ಪಾರ್ಕ್ ರೈತರಲ್ಲಿ ಬಿತ್ತಿದೆ. ರೈತರು ದಲ್ಲಾಳಿಗಳಿಂದಾಗಿ ನಷ್ಟಕ್ಕೀಡಾಗುವುದಿಲ್ಲ ಎಂದ ಭರವಸೆಯನ್ನೂ ಫುಡ್ ಪಾರ್ಕ್ ನೀಡಿದೆ.
ಫುಡ್ ಪಾರ್ಕ್ ಉದ್ಘಾಟಿಸಿದ ನಂತರ ಮೋದಿ ಹೇಳಿದ ಒಂದು ಹೇಳಿಕೆ ಸ್ತುತ್ಯಾರ್ಹ "ಭಾರತದ ಎಲ್ಲ ರೈತರಿಗಾಗಿ ಫುಡ್ ಪಾರ್ಕನ್ನು ಅರ್ಪಿಸುತ್ತೇನೆ. ರೈತ ಕೊಳ್ಳುವ ಶಕ್ತಿ ಹೆಚ್ಚಿದಾಗ ಮಾತ್ರ ನಗರದ ಆರ್ಥಿಕ ಸ್ಥಿತಿ ಸಹಜವಾಗಿ ಹೆಚ್ಚುತ್ತದೆ. ಕೃಷಿ ಉತ್ಪನ್ನಗಳ ಪ್ರಮಾಣವನ್ನು ನಾವು ಹೆಚ್ಚಿಸಲೇಬೇಕು."
ರೈತ ಕ್ರಾಂತಿಯ ಹರಿಕಾರ : ಫುಡ್ ಪಾರ್ಕಿನಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ತಿಪಟೂರಿನಲ್ಲಿ, ಕೃಷಿಯಲ್ಲಿ ಮಹತ್ವದ ಸಾಧನೆ ಮಾಡುತ್ತಿರುವ ಸಣ್ಣದಾದ, ಆದರೆ ಬೆಳೆಯುತ್ತಿರುವ ಜೈವಿಕ ತೋಟ ತಲೆಯೆತ್ತಿದೆ. ರೈತರನ್ನು ಸ್ವಾವಲಂಬಿ ಉದ್ಯೋಗಿಯನ್ನಾಗಿ ಮಾಡುವ ಮತ್ತು ಕೃಷಿ ಲಾಭದಾಯಕ ವೃತ್ತಿಯನ್ನಾಗಿ ಮಾಡುವ ಗುರಿಯನ್ನು ಇದು ಹೊತ್ತಿದೆ. ಈ ಮಹತ್ವಾಕಾಂಕ್ಷೆಯ ಕೂಸಿನ ಹುಟ್ಟಿಗೆ ಕಾರಣರಾದವರು ಡಾ. ಜಿಎನ್ಎಸ್ ರೆಡ್ಡಿ. [ಏನಿದು ತುಮಕೂರಿನ ಮೆಗಾ ಫುಡ್ ಪಾರ್ಕ್?]

ಡಾ. ರೆಡ್ಡಿ ಅವರು ಕೂಡ ರೈತ ಕೊಳ್ಳುವ ಶಕ್ತಿಯನ್ನು ವೃದ್ದಿಸಬೇಕೆಂಬ ಪ್ರಧಾನಿಯವರ ಮಾತನ್ನೇ ಪ್ರತಿಧ್ವನಿಸುತ್ತಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರೈತರಿಗಾಗಿ ಒಂದು ದೊಡ್ಡ ನಿಧಿಯನ್ನು ಸ್ಥಾಪಿಸಬೇಕು ಎಂದು ವಾದ ಮಂಡಿಸುತ್ತಾರೆ. ಆದರೆ, 110 ಎಕರೆ ಜಮೀನಿನಲ್ಲಿ ವಿಸ್ತರಿಸಿಕೊಂಡಿರುವ, ಸಾವಿರ ಕೋಟಿ ಬಂಡವಾಳ ಹೂಡಿಸಿಕೊಂಡಿರುವ, 22 ಸಾವಿರ ಟನ್ ಉತ್ಸನ್ನ ಸಾಮರ್ಥ್ಯವಿರುವ ಫುಡ್ ಪಾರ್ಕ್‌ನಿಂದ ರೈತರಿಗೆ ನಿಜವಾಗಿಯೂ ಸಹಾಯವಾಗುತ್ತದಾ, ಅವರ ಹೊಟ್ಟೆ ತುಂಬುತ್ತದಾ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.
ದಶಕಗಳ ಪ್ರಯೋಗ ಮತ್ತು ವಿಫಲ ಪ್ರಯತ್ನಗಳು ಅವರಲ್ಲಿ ಫುಡ್ ಪಾರ್ಕಿನ ಯಶಸ್ಸಿನ ಬಗ್ಗೆ ಸಂದೇಹ ಹುಟ್ಟುವಂತೆ ಮಾಡಿದೆ. ಫುಡ್ ರಿಟೇಲಿಂಗ್ ಉದ್ಯಮಕ್ಕೆ ಕಾಲಿಟ್ಟ ಅನೇಕ ಉದ್ಯಮಿಗಳು ರೈತರಿಗೆ ಸರಿಯಾದ ಸಮಯದಲ್ಲಿ ಹಣ ನೀಡದೆ, ಒಪ್ಪಂದಗಳನ್ನು ಮುರಿದುಹಾಕಿ ಅನ್ಯಾಯ ಎಸಗಿರುವುದು ಫುಡ್ ಪಾರ್ಕಿನ ಯಶಸ್ಸಿನ ಬಗ್ಗೆ ಅವರಿಗಿರುವ ಸಂದೇಹವನ್ನು ಇನ್ನಷ್ಟು ಗಟ್ಟಿಯಾಗಿಸಿವೆ.
ರೈತರಿಗೆ ಸ್ವಾತಂತ್ರ್ಯ ಬೇಕು : ಭಾರತದ ಕೃಷಿ ಕ್ಷೇತ್ರದಲ್ಲಿರುವ ವಿರಳಾತಿವಿರಳ ಕೃಷಿ ತಂತ್ರಜ್ಞಾನಿಯಾಗಿರುವ ಡಾ. ರೆಡ್ಡಿ ಅವರು, ರೈತರು ಸಂಪದ್ಭರಿತರಾಗಬೇಕಾದರೆ ರೈತರನ್ನು ಕಾಡುತ್ತಿರುವ ದೋಷದಿಂದ ಕೂಡಿರುವ ಸಬ್ಸಿಡಿಗಳಿಂದ, ಉತ್ಪಾದನೆಗೆ ಮಾರಕವಾಗಿರುವ ಸರಕಾರದ ಬಿಗಿಮುಷ್ಠಿಯಿಂದ ರೈತರು ಮುಕ್ತರಾಗಬೇಕು ಎಂದು ಬಲವಾಗಿ ನಂಬಿದ್ದಾರೆ. ರೆಡ್ಡಿ ಅವರ ಆಶಯ, ಅವರ ಜಾಗತಿಕ ಆರ್ಥಿಕ ಚಿಂತನೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ಜೀವನಕಥೆಯನ್ನು ನಾವು ತಿಳಿಯಬೇಕು.

ಮಹಾತ್ಮಾ ಗಾಂಧೀಜಿಯ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಡಾ. ಮನಿಭಾಯ್ ದೇಸಾಯಿ ಅವರು, ಭಾರತದಲ್ಲಿ ಗ್ರಾಮೀಣ ಜೀವನ ಸಹನೀಯವಾಗಬೇಕು ಎಂಬ ನಿಟ್ಟಿನಲ್ಲಿ 1967ರಲ್ಲಿ ಸ್ಥಾಪಿಸಿದ ಭಾರತೀಯ ಆಗ್ರೋ ಇಂಡಸ್ಟ್ರೀಸ್ ಫೌಂಡೇಷನ್ (ಬಿಎಐಎಫ್) ನೊಂದಿಗೆ ಡಾ. ರೆಡ್ಡಿ ಅವರ ಜೀವನ ಆರಂಭವಾಗುತ್ತದೆ. ದಶಕಗಳ ಕಾಲ ಬೆವರು ಸುರಿಸಿರುವ ರೆಡ್ಡಿ ಅವರು ಕಂಡುಕೊಂಡಿದ್ದೇನೆಂದರೆ, ರೈತರು ನಿಜವಾಗಿಯೂ ಸ್ವತಂತ್ರರಾಗಬೇಕೆಂದರೆ, ಭಾರೀ ದೇಣಿಗೆಗಳ ಮೇಲೆ ನಂಬಿರುವ ಎನ್‌ಜಿಓ ಮಾದರಿಯಿಂದ ಪ್ರಯೋಜನವಾಗುವುದಿಲ್ಲ. ರೈತರು ತಾವೇ ಸ್ವತಃ ಉದ್ಯಮಿಗಳಂತೆ ವಿಚಾರ ಮಾಡಲು, ತಮ್ಮ ಉತ್ಪನ್ನಗಳನ್ನು ತಾವೇ ಸ್ವತಃ ಮಾರಲು ಶಕ್ತರಾದಾಗ ಮಾತ್ರ ಸ್ವತಂತ್ರರಾಗಲು ಸಾಧ್ಯ ಎಂಬುದನ್ನು ಮನಗಂಡರು.
ಡಾ. ರೆಡ್ಡಿ ಅವರ ಕನಸುಗಳು : ಡಾ. ರೆಡ್ಡಿ ಅವರ ಈ ವಿಭಿನ್ನ ರೀತಿಯ ಚಿಂತನೆ, ರೈತರು ಸ್ವಾವಲಂಬಿಗಳಾಗಿ ಸಮೃದ್ಧಿಯ ಕಡೆಗೆ ಸಾಗಬೇಕು ಎಂಬ ಅವರ ತುಡಿತ 'ಅಕ್ಷಯ ಕಲ್ಪ' ಎಂಬ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ರೈತರು ಸಂಪದ್ಭರಿತರಾಗಬೇಕಾದರೆ ವಿರಳವಾಗಿ ಸಿಗುವ ಬಂಡವಾಳ, ತಂತ್ರಜ್ಞಾನ, ಕಳೆದುಹೋಗಿರುವ ನೈಪುಣ್ಯತೆ, ಮಾರುಕಟ್ಟೆಯ ಬೆಂಬಲ ಬೇಕೇಬೇಕು ಎಂದು ಅವರು ಹೇಳುತ್ತಾರೆ. ಬ್ಯಾಂಕಿನಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಕೂಡ ಸವಾಲು ಒಡ್ಡಿದೆ ಎಂದಿರುವ ಅವರ ಕನಸುಗಳು ಏನು, ಎಂತೆಂಥ ಸವಾಲುಗಳನ್ನು ಅವರು ಎದುರಿಸಿದ್ದಾರೆ, ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಏನೇನು ಮಾಡಬೇಕು ಎಂಬ ವಿವರಗಳನ್ನು ಮುಂದೆ ಓದಿರಿ.












Click it and Unblock the Notifications