Mysuru Rain: ಮೈಸೂರಿನಲ್ಲಿ ತಂಬಾಕು ಬೆಳೆಗಾರರಿಗೆ ಸಂಕಷ್ಟ ತಂದ ಮಳೆ; ರೈತರ ಗತಿಯೇನು..?
ಮೈಸೂರು, ಮೇ 21: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮಳೆ ಬಾರದೆ ಸಕಾಲದಲ್ಲಿ ತಂಬಾಕು ಕೃಷಿ ಆರಂಭಿಸಲು ಅಡಚಣೆ ಮಾಡಿದ ಮಳೆ ಇದೀಗ ಕಷ್ಟಪಟ್ಟು ಬೋರ್ ವೆಲ್ ನೀರಿನ ಮೂಲಕ ಬೆಳೆ ಬೆಳೆದ ಬೆಳೆಗಾರರಿಗೂ ಸಂಕಷ್ಟ ತಂದಿದೆ. ಕಾರಣ ಪೂರ್ವ ಮುಂಗಾರು ಮಳೆಯ ಅಬ್ಬರಕ್ಕೆ ಬಹುತೇಕ ಕಡೆ ಜಮೀನಿಗೆ ನೀರು ನುಗ್ಗಿ ಕೃಷಿ ನೆಲಕಚ್ಚಿವೆ.
ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ತಂಬಾಕು ಕೃಷಿಗೆ ಮುಂದಾಗಿದ್ದ ಬೆಳೆಗಾರರು ಈಗ ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಹತ್ತು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆ ಕೃಷಿಗೆ ತೊಂದರೆ ನೀಡುತ್ತಿದೆ. ಕೆಲವು ಬೆಳೆಗಾರರು ಮಳೆ ಆರಂಭವಾದ ನಂತರ ತಂಬಾಕು ಗಿಡಗಳನ್ನು ನೆಡಲು ಆರಂಭಿಸಿದ್ದು ಇವು ಮಳೆಗೆ ಬಲಿಯಾಗುತ್ತಿವೆ.

ಇನ್ನು ಕೆಲವೆಡೆ ಈಗಾಗಲೇ ನೆಟ್ಟ ಗಿಡಗಳು ಬೆಳವಣಿಗೆ ಆರಂಭಿಸಿದ್ದು, ಮಳೆಯ ಆರ್ಭಟಕ್ಕೆ ನೀರು ತಗ್ಗು ಪ್ರದೇಶಕ್ಕೆ ನುಗ್ಗಿದ ಕಾರಣ ಕೃಷಿ ನೀರು ಪಾಲಾಗಿದೆ. ಹೀಗಾಗಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಸಾಮಾನ್ಯವಾಗಿ ಮಳೆಗಾಲದ ಆರಂಭದ ಹೊತ್ತಿಗೆ ತಂಬಾಕು ಗಿಡಗಳನ್ನು ನಾಟಿ ಮಾಡಿ ಮಳೆಗಾಲ ಕಳೆಯುತ್ತಿದ್ದಂತೆಯೇ ಸೊಪ್ಪನ್ನು ಹದಗೊಳಿಸಿ ಒಂದಷ್ಟು ಆದಾಯವನ್ನು ಕಂಡುಕೊಳ್ಳುತ್ತಿದ್ದ ಬೆಳೆಗಾರರು ಈಗ ತಲೆಕೆಡಿಸಿಕೊಳ್ಳುವಂತಾಗಿದೆ.
ಬಂಡವಾಳ ಹಾಕಿ ಆದಾಯ ತೆಗೆಯುವ ಬೆಳೆ
ಹಾಗೆನೋಡಿದರೆ ತಂಬಾಕು ಕೃಷಿ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ಬೆಳೆಗಾರರಿಗೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವರ್ಷಕ್ಕೊಮ್ಮೆ ಬೆಳೆಗಾರರಿಗೆ ಆದಾಯ ತಂದು ಕೊಡುವ ಬೆಳೆಯಾಗಿದೆ. ಅದರಲ್ಲೂ ಈಗ ತಂಬಾಕಿಗೆ ಉತ್ತಮ ದರ ದೊರೆಯುತ್ತಿರುವುದರಿಂದ ಬಂಡವಾಳ ಹಾಕಿ ಆದಾಯ ತೆಗೆಯುವ ಬೆಳೆಯಾಗಿದೆ. ಹೀಗಾಗಿ ಕೆಲವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ನಿಜವಾಗಿ ಹೇಳಬೇಕೆಂದರೆ ತಂಬಾಕು ಬೆಳೆಯುವುದು ಸುಲಭದ ಕೆಲಸವಲ್ಲ. ಏಕೆಂದರೆ ಮೇ ತಿಂಗಳ ವೇಳೆಗೆ ಬೀಳುವ ಮಳೆಯನ್ನು ನಂಬಿ ಇದನ್ನು ನಾಟಿ ಮಾಡಿ ಬಳಿಕ ಮಳೆಗಾಲದಲ್ಲಿ ಸುರಿಯುವ ಮಳೆಗೆ ಗೊಬ್ಬರ ಹಾಕಿ ಹುಲುಸಾಗಿ ಬೆಳೆಸಬೇಕು. ಇದರ ಸೊಪ್ಪೇ ಆದಾಯದ ಮೂಲವಾಗಿರುವುದರಿಂದ ಅದನ್ನು ಜತನದಿಂದ ನೋಡಿಕೊಳ್ಳಬೇಕಾಗುತ್ತದೆ.
ಸಾಲ ಮಾಡಿ ಕೃಷಿ ಮಾಡುವ ಬೆಳೆಗಾರರು
ತಂಬಾಕು ಕೃಷಿಯ ಬಗ್ಗೆ ನೋಡುವುದಾದರೆ ಇದು ಹಲವರನ್ನು ಶ್ರೀಮಂತರನ್ನಾಗಿ ಮಾಡಿದೆ. ಜತೆಗೆ ಹಲವರು ಕೃಷಿ ಮಾಡಿ ನಷ್ಟ ಹೊಂದಿ ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳು ಇವೆ. ಆರಂಭದಿಂದಲೇ ಬ್ಯಾಂಕ್ ನಿಂದ ಅಥವಾ ಕೈಸಾಲ ಮಾಡಿ ಬಂಡವಾಳ ಸುರಿದು ಕೃಷಿ ಮಾಡುವ ಬೆಳೆಗಾರರು ಬೆಳೆ ಹುಲುಸಾಗಿ ಬೆಳೆದು, ಉತ್ತಮ ಬೆಲೆ ಸಿಕ್ಕರೆ ಮಾತ್ರ ಬೆಳೆಗಾರರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತದೆ.

ಇಲ್ಲದೆ ಹೋದರೆ ಬೆಳೆಗಾರರ ಬದುಕು ಮೂರಾಬಟ್ಟೆ ಆಗುವುದರಲ್ಲಿ ಎರಡು ಮಾತಿಲ್ಲ. ಒಂದರ್ಥದಲ್ಲಿ ಹೇಳಬೇಕೆಂದರೆ ತಂಬಾಕು ಬೆಳೆಯುವುದು ಬೆಳೆಗಾರರ ಪಾಲಿಗೆ ಜೂಜಾಟವೇ.. ಇಲ್ಲಿ ಹಣ ಬಂದರೆ ಕೈತುಂಬಾ ಬರುತ್ತದೆ. ಇಲ್ಲದೆ ಹೋದರೆ ನಷ್ಟ ಹೊಂದಿ ಸಾಲಗಾರ ಆಗಬೇಕಾಗುತ್ತದೆ. ಇವತ್ತಿನ ದುಬಾರಿ ಪರಿಸ್ಥಿತಿಯಲ್ಲಿ ಉಳುಮೆ, ನಾಟಿ, ಗೊಬ್ಬರ, ಕ್ರಿಮಿನಾಶಕ, ಸೌದೆ ಹೀಗೆ ಎಲ್ಲವನ್ನು ಖರೀದಿಸುವುದು ಮತ್ತು ಕೂಲಿ ಕಾರ್ಮಿಕರ ಕೊರತೆ ಎಲ್ಲವನ್ನು ನಿಭಾಯಿಸಿ ಬೆಳೆಯುವುದು ಸುಲಭವಾಗಿ ಉಳಿದಿಲ್ಲ.
ಮಳೆಯಿಂದಾಗಿ ತಂಬಾಕು ಬೆಳೆ ನಾಶ
ಮಳೆಯಿಲ್ಲದ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಮೇ ತಿಂಗಳ ಆರಂಭದಲ್ಲಿಯೇ ತಂಬಾಕು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದರು. ಬಹಳಷ್ಟು ಕಡೆಗಳಲ್ಲಿ ನಾಟಿ ಮಾಡಿ ಬೆಳವಣಿಗೆಯ ಹಂತವೂ ತಲುಪಿತ್ತು. ಗೊಬ್ಬರ ಹಾಕಿ ನಿರ್ವಹಣೆ ಮಾಡಿಕೊಂಡರೆ ಹುಲುಸಾಗಿ ಬೆಳೆದು ನಮ್ಮ ಕೈಹಿಡಿಯಬಹುದೆಂದು ಖುಷಿಯಾಗಿದ್ದರು.
ಈಗ ಆಗಿದ್ದೇ ಬೇರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ತಂಬಾಕು ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದ್ದು, ಹಲವು ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಮೊದಲೆಲ್ಲ ಫಸಲು ಬಂದು ದರ ಕಡಿಮೆಯಾದಾಗ ಜನ ಸಂಕಷ್ಟಕ್ಕೀಡಾಗುತ್ತಿದ್ದರು. ಆದರೀಗ ಆರಂಭದಲ್ಲಿಯೇ ಸಂಕಷ್ಟ ಅನುಭವಿಸುವಂತಾಗಿದೆ.
ಬಿಡುವು ನೀಡಲು ಕಾಯುತ್ತಿರುವ ಬೆಳೆಗಾರರು
ಹುಣಸೂರು ವ್ಯಾಪ್ತಿಯಲ್ಲಿ ತಂಬಾಕು ಬೆಳೆ ಕೊಚ್ಚಿಹೋಗುವಂತೆ ಮಳೆ ಸುರಿದಿದ್ದರೆ, ಹಳ್ಳಕೊಳ್ಳದ ಪ್ರದೇಶದ ಜಮೀನಿನಲ್ಲಿ ನಾಟಿ ಮಾಡಿದ ತಂಬಾಕು ಸಂಪೂರ್ಣ ಜಲಾವೃತವಾಗಿ ಗಿಡಗಳು ಹೋಗುತ್ತಿವೆ. ಸದ್ಯಕ್ಕೆ ಸ್ವಲ್ಪ ವರುಣ ಬಿಡುವು ನೀಡಿದರೆ ತಂಬಾಕು ಮತ್ತು ಶುಂಠಿ ಬೆಳೆಯನ್ನು ಕಾಪಾಡಿಕೊಳ್ಳಬಹುದು ಎಂದು ರೈತರು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಇದುವರೆಗೆ ಮಳೆಯಿಲ್ಲ ಎಂದು ಪರದಾಡುತ್ತಿದ್ದವರು ಇದೀಗ ಮಳೆ ಸುರಿದ ಪರಿಣಾಮ ಪರದಾಡುವಂತಾಗಿದೆ. ಒಟ್ಟಾರೆ ಸ್ವಲ್ಪ ಮಳೆ ಬಿಡುವು ನೀಡಿದರೆ ರೈತರಿಗೆ ಬೆಳೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಬಹುದೇನೋ?.












Click it and Unblock the Notifications