ಹಿಂಗಾರು, ಬೇಸಿಗೆ ಬೆಳೆ ವಿಮೆಗೆ ಹೆಸರು ನೋಂದಾಯಿಸಲು ರೈತರಿಗೆ ಕರೆ
ಬಳ್ಳಾರಿ, ಅಕ್ಟೋಬರ್ 17: ನೈಋತ್ಯ ಮುಂಗಾರು ಮಳೆ ಕೈ ಕೊಟ್ಟು ರಾಜ್ಯದ ರೈತರು ನಷ್ಟ ಅನುಭವಿಸಿದ್ದಾರೆ. ಹಿಂಗಾರು ಹಾಗೂ ಬೇಸಿಗೆ ಹಂಗಾಮು ಆರಂಭವಾಗಿದೆ. ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಬೆಳೆ ವಿಮೆ ನೋಂದಣಿ ಮಾಡಿಸಬೇಕು ಎಂದು ಕರೆ ನೀಡಲಾಗಿದೆ.
ಬಳ್ಳಾರಿಯ ಕೃಷಿ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಈ ಕುರಿತು ರೈತರಿಗೆ ಮನವಿ ಮಾಡಿದ್ದಾರೆ. ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಹೇಳಿದ್ದಾರೆ.

ಯಾವ-ಯಾವ ಬೆಳೆಗಳು?: ಈ ಯೋಜನೆಯಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ (ನೀ), ಕಡಲೆ (ನೀ/ಮ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ (ಶೇಂಗಾ) (ನೀ), ಭತ್ತ (ನೀ), ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಮುಸುಕಿನ ಜೋಳ (ನೀ), ಜೋಳ (ಮ), ಹುರುಳಿ (ಮ), ಸೂರ್ಯಕಾಂತಿ (ನೀ/ಮ) ಕುಸುಮೆ (ಮ), ಈರುಳ್ಳಿ (ನೀ), ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ (ನೀ) ,ಈರುಳ್ಳಿ (ನೀ) ಬಳ್ಳಾರಿ ಜಿಲ್ಲೆಯ ಬೆಳೆಗಳಾಗಿವೆ.
ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕಗಳನ್ನು ಸಹ ನಿಗದಿ ಮಾಡಲಾಗಿದೆ. ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ (ನೀ) ಡಿಸೆಂಬರ್ 30, ಜೋಳ (ಮ) ನವೆಂಬರ್ 15, ಮುಸುಕಿನ ಜೋಳ (ನೀ) ಡಿಸೆಂಬರ್ 15, ಕಡಲೆ (ನೀ/ಮ) ಡಿಸೆಂಬರ್ 30, ಹುರುಳಿ (ಮ) ಡಿಸೆಂಬರ್ 1, ಸೂರ್ಯಕಾಂತಿ (ನೀ/ಮ) ಡಿಸೆಂಬರ್ 15 ಕೊನೆಯ ದಿನವಾಗಿದೆ.
ಕುಸುಮೆ (ಮ) ಡಿಸೆಂಬರ್ 15, ಈರುಳ್ಳಿ (ನೀ) ಡಿಸೆಂಬರ್ 1, ಬೇಸಿಗೆ ಬೆಳೆಗಳಾದ ಭತ್ತ (ನೀ) 2024 ಫೆಬ್ರವರಿ 28, ನೆಲಗಡಲೆ (ಶೇಂಗಾ) (ನೀ) 2024 ಫೆಬ್ರವರಿ 28, ಸೂರ್ಯಕಾಂತಿ (ನೀ) 2024 ಫೆಬ್ರವರಿ 28 ಮತ್ತು ಈರುಳ್ಳಿ (ನೀ) 2024 ಫೆಬ್ರವರಿ 28 ಕೊನೆಯ ದಿನವಾಗಿದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಸಹಾಯಧನಕ್ಕಾಗಿ ಅರ್ಜಿ ಆಹ್ವಾನ; ತೋಟಗಾರಿಕೆ ಇಲಾಖೆಯಿಂದ ಪ್ರಸ್ತಕ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯಕ್ಕಾಗಿ ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ತಿಳಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಹನಿ ನೀರಾವರಿ, ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳಡಿ ಸಹಾಯಧನವನ್ನು ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಶೇ.20, ಪರಿಶಿಷ್ಟ ಪಂಗಡ ಶೇ.07, ಅಲ್ಪಸಂಖ್ಯಾತರು ಶೇ.15, ವಿಶೇಷಚೇತನರು ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನ ಮೀಸಲಿರಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-278179 ಹಾಗೂ ಆಯಾ ತಾಲ್ಲೂಕುಗಳ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications