ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು!
ಬೆಳಗಾವಿ, ನವೆಂಬರ್ 18 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಗೆ ಬರಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರು ಸುವರ್ಣ ವಿಧಾನಸೌಧಕ್ಕೆ ಕಬ್ಬು ತುಂಬಿದ ಲಾರಿಯನ್ನು ನುಗ್ಗಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದ ರೈತ ಮುಖಂಡರು ಮುಂತ್ರಿಗಳು ಬೆಳಗಾವಿಗೆ ಭೇಟಿ ನೀಡುವ ಭರವಸೆ ಹಿನ್ನಲೆಯಲ್ಲಿ ಧರಣಿ ನಿಲ್ಲಿಸಿದ್ದರು. ನ.19ರಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು.
ಆದರೆ, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ನವೆಂಬರ್ 20ರಂದು ಬೆಂಗಳೂರಿನಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರ ಜೊತೆ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.

'ಮುಖ್ಯಮಂತ್ರಿಗಳು ಮಾತು ತಪ್ಪಿದ್ದಾರೆ. ಅವರು ಬರುವ ಬದಲು ನಮ್ಮನ್ನು ಬೆಂಗಳೂರಿಗೆ ಬರುವಂತೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ರೈತ ವಿರೋಧ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಬರುವ ತನಕ ಪ್ರತಿಭಟನೆ ನಡೆಸುತ್ತೇವೆ' ಎಂದು ರೈತರು ಘೋಷಣೆ ಹೇಳಿದ್ದಾರೆ.
ರೈತ ಮುಖಂಡ ಅಶೋಕ ಯಮಕನಮರಡಿ ನೇತೃತ್ವದಲ್ಲಿ ಕೆಲವು ರೈತರು 5 ಕಬ್ಬು ತುಂಬಿದ ಲಾರಿಗಳನ್ನು ಸುವರ್ಣವಿಧಾನಸೌಧಕ್ಕೆ ನುಗ್ಗಿಸಿದರು. ಇದನ್ನು ತಡೆಯಲು ಮುಂದಾದ ಪೊಲೀಸರು ಜೊತೆಯೂ ರೈತರು ಮಾತಿನ ಚಕಮಕಿ ನಡೆಸಿದರು.
ರೈತರ ಬಂಧನ : ಸುವರ್ಣ ವಿಧಾನಸೌಧಕ್ಕೆ ಕಬ್ಬು ತುಂಬಿದ ಲಾರಿಯನ್ನು ನುಗ್ಗಿಸಿದ ರೈತರನ್ನು ಪೊಲೀಸರು ಬಂಧಿಸಿದರು. ರೈತರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ.












Click it and Unblock the Notifications