ಕಬ್ಬು ಕಟಾವು; 15 ದಿನದಲ್ಲಿ ರೈತರಿಗೆ ಬಿಲ್ ಪಾವತಿ
ಬೆಳಗಾವಿ, ನವೆಂಬರ್ 13; ಕಬ್ಬು ಕಟಾವು ಮಾಡಿದ 15 ದಿನಗಳಲ್ಲಿ ರೈತರಿಗೆ ಹಣ ಪಾವತಿಸಬೇಕು. ಅಳತೆ ಮತ್ತು ತೂಕ ವ್ಯವಸ್ಥೆ ಪಾರದರ್ಶಕವಾಗಿರಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದ್ದಾರೆ.
ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅವರು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಕಾರ್ಖಾನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳು ಕೊಟ್ಟ ಸೂಚನೆಗಳು; ಜಿಲ್ಲೆಯ ಅನೇಕ ಕಾರ್ಖಾನೆಗಳು ದರ ಘೋಷಣೆ ಮಾಡದೇ ಕಬ್ಬು ನುರಿಸುವ ಹಂಗಾಮು ಆರಂಭಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಈಗಾಗಲೇ ಹಂಗಾಮು ಆರಂಭಿಸಿರುವ ಮತ್ತು ಇನ್ನು ಮುಂದೆ ಹಂಗಾಮು ಆರಂಭಿಸುವ ಕಾರ್ಖಾನೆಗಳು ತಕ್ಷಣವೇ ಕಡ್ಡಾಯವಾಗಿ ದರ ಘೋಷಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಕಬ್ಬು ಕಟಾವು ಮಾಡಿದ ಹದಿನೈದು ದಿನಗಳಲ್ಲಿ ರೈತರಿಗೆ ಹಣ ಪಾವತಿಸಬೇಕು. ತೂಕ ಮತ್ತು ಅಳತೆಯ ಬಗ್ಗೆ ಕಬ್ಬು ಪೂರೈಕೆದಾರ ರೈತರಿಗೆ ವಿಶ್ವಾಸ ಮೂಡಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅನೀರಿಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಬೇಕು. ಪ್ರತಿ ಕಾರ್ಖಾನೆಯ ತೂಕ ಮತ್ತು ಅಳತೆ ವ್ಯವಸ್ಥೆಯನ್ನು ಪರಿಶೀಲಿಸಲು ಅನುಕೂಲವಾಗುವಂತೆ ಕಂದಾಯ, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸರ್ಕಾರದ ಅನುಮತಿಯ ಪ್ರಕಾರ ಕೆಲವು ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸುವ ಹಂಗಾಮು ಆರಂಭಿಸಿವೆ. ಆದರೆ ಅನೇಕ ಕಾರ್ಖಾನೆಗಳು ಇದುವರೆಗೆ ಎಫ್‌ಆರ್‌ಪಿ ದರದಲ್ಲಿ ರೈತರಿಗೆ ನೀಡುವ ಮೊತ್ತ ಹಾಗೂ H&T ಮೊತ್ತವನ್ನು ಘೋಷಿಸಿರುವುದಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಕಾರ್ಖಾನೆಗಳು ಎಫ್.ಅರ್.ಪಿ. ಮೇಲೆ ಘೋಷಿಸಿರುವ ಹೆಚ್ಚುವರಿ ದರವನ್ನು ಕಡ್ಡಾಯವಾಗಿ ಪಾವತಿಸಬೇಕು. ಕೆಲ ಕಾರ್ಖಾನೆಗಳು ಕಳೆದ ವರ್ಷ ಪ್ರಕಟಿಸಿರುವ ಹೆಚ್ಚುವರಿ ಮೊತ್ತವನ್ನು ಇದುವರೆಗೆ ಪಾವತಿಸಿರುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹಂಗಾಮು ಆರಂಭಿಸುವ ಮೊದಲು ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಎಫ್.ಆರ್.ಪಿ. ದರ ಘೋಷಣೆಗೆ ಅನುಮೋದನೆ ಪಡೆದುಕೊಂಡು ಅದನ್ನು ರೈತರಿಗೆ ಮುಂಚಿತವಾಗಿಯೇ ತಿಳಿಸಿದ ಬಳಿಕವೇ ಹಂಗಾಮು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಎಫ್‌ಆರ್‌ಪಿ ದರದಲ್ಲಿ ರೈತರಿಗೆ ನೀಡುವ ಮೊತ್ತ ಹಾಗೂ H&T ಮೊತ್ತ ಕಾರ್ಖಾನೆ ನೋಟಿಸ್ ಬೋರ್ಡ್‌ಗೆ ಅಂಟಿಸಬೇಕು. ಈ ಬಗ್ಗೆ ಕಬ್ಬು ಪೂರೈಕೆದಾರ ರೈತರಿಗೆ ಮಾಹಿತಿ ನೀಡಬೇಕು ಕಬ್ಬಿನ ತೂಕದ ಮಷಿನ್‌ದಲ್ಲಿ ಕಡ್ಡಾಯವಾಗಿ ಪಾರದರ್ಶಕ ವ್ಯವಸ್ಥೆ ಅನುಷ್ಠಾನ ಮಾಡಬೇಕು. ರಿಕವರಿ ಸ್ಯಾಂಪಲ್ ಮಷಿನ್ ಅಳವಡಿಸಿ ರೈತರಿಗೆ ಅನ್ಯಾಯ ಆಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ರೈತ ಮುಖಂಡರ ಜೊತೆ ಚರ್ಚಿಸಿ ದರ ಘೋಷಣೆ ಮಾಡಿ ಸರ್ಕಾರದ FRP ಪ್ರಕಾರ ನಿಗದಿತ ಸಮಯದಲ್ಲಿ ಪಾವತಿ ಮಾಡಬೇಕು. ಶುಗರ್ ಕಂಟ್ರೋಲ್ ಆದೇಶಗಳನ್ನು ಕಡ್ಡಾಯವಾಗಿ ನಿಯಮಾನುಸಾರ ಪಾಲನೆ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ, ಇತ್ತೀಚೆಗೆ ನಡೆದ ಕಾರ್ಖಾನೆ ಮಾಲೀಕರ ಸಭೆಯಲ್ಲಿ ನಿರ್ಧರಿಸಿದಂತೆ ಹಂಗಾಮು ಆರಂಭಿಸುವ ಮುಂಚೆ ದರ ಘೋಷಣೆ ಮಾಡಬೇಕಿತ್ತು. ಆದರೆ ಕೆಲವರು ದರ ಘೋಷಿಸದೇ ಹಂಗಾಮು ಆರಂಭಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications