ದಾವಣಗೆರೆಯ ಈ ರೈತನಿಗೆ ಸಿಹಿಯಾಯಿತು "ಮಗಧೀರ ಮೆಣಸಿನಕಾಯಿ"
ದಾವಣಗೆರೆ, ಜುಲೈ 29: ಮುಂಗಾರು ಮಳೆ ಅಲ್ಲಲ್ಲಿ ಕೈಕೊಟ್ಟಿದೆ. ಮಳೆಯನ್ನೇ ನಂಬಿ ಕೃಷಿ ಕೈಗೊಂಡ ಹಲವರು ಕೈಸುಟ್ಟುಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ, ಬುದ್ಧಿವಂತಿಕೆ ಉಪಯೋಗಿಸಿ, ಹೆಚ್ಚು ನೀರು ಬೇಡದ, ರೋಗನಿರೋಧಕ ಶಕ್ತಿ ಹೆಚ್ಚಿರುವ ಮೆಣಸಿನ ಕಾಯಿ ತಳಿಯನ್ನು ಹಾಕಿ ಲಾಭ ಪಡೆದುಕೊಂಡಿದ್ದಾರೆ ದಾವಣಗೆರೆಯ ಈ ರೈತ. ಖಾರದ ಮೆಣಸಿನಕಾಯಿ ಈ ರೈತನ ಬಾಳಲ್ಲಿ ಈಗ ಸಿಹಿ ತಂದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಬಸವಪುರದ ಗ್ರಾಮದ ಉದಯ್ ಕುಮಾರ್ ಎಂಬ ರೈತ ಹಸಿರು ಮೆಣಸಿನಕಾಯಿ ಬೆಳೆದು ಯಶಸ್ಸನ್ನು ಕಂಡವರು.
ಬೇಸಿಗೆ ಕಾಲದಲ್ಲಿ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ನಂತರ ಮಳೆಗಾಲದಲ್ಲಿ ಮಳೆ ಸರಿಯಾಗಿ ಬಂದರೆ ನೀರು ದೊರೆಯುತ್ತದೆ. ನದಿ ತೊರೆಗಳು ಹರಿದು ಕೃಷಿ ಸರಾಗವಾಗಿ ಸಾಗುತ್ತದೆ. ಆದರೆ ಮಳೆ ಕೈಕೊಟ್ಟರೆ ಎಲ್ಲವೂ ಎಡವಟ್ಟು. ನೀರಿಲ್ಲದೇ ಗಿಡಗಳು ಒಣಗುವುದು ಶತಸಿದ್ಧ. ಹೀಗಿದ್ದಾಗ ಲಾಭದ ಮಾತೆಲ್ಲಿ? ಹೀಗೆಯೇ ಯೋಚಿಸಿದ ಉದಯ್ ಅವರು, ಇರುವ ಅಲ್ಪ ನೀರನ್ನೇ ಸದುಪಯೋಗಪಡಿಸಿಕೊಂಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು, ಹಸಿರು ಮೆಣಸಿನಕಾಯಿ ಬೆಳೆದಿದ್ದಾರೆ.

ಒಂದು ಹೆಕ್ಟೇರ್ ಜಮೀನಿನಲ್ಲಿ ಆಧುನಿಕ "ಮಗಧೀರ' ತಳಿಯ ಹಸಿರು ಮೆಣಸಿನಕಾಯಿಯನ್ನು ನಾಟಿ ಮಾಡಿದ್ದಾರೆ. ಅರವತ್ತೇ ದಿನದಲ್ಲಿ ಉತ್ತಮ ಇಳುವರಿಯನ್ನೂ ಪಡೆದಿದ್ದಾರೆ.
"ಮಗಧೀರ ಮೆಣಸಿನ ಕಾಯಿ ಹತ್ತು ಸೆಂಟಿ ಮೀಟರ್ ಗಳಷ್ಟು ಉದ್ದ ಬೆಳೆಯುತ್ತದೆ. ಹಳದಿ ಮಿಶ್ರಿತ ಹಸಿರು ಬಣ್ಣ ಇರುವ ಈ ಮೆಣಸಿನ ಕಾಯಿ ಗಿಡಕ್ಕೆ ರೋಗ ನಿರೋಧಕ ಶಕ್ತಿ ಜಾಸ್ತಿ. ಮಾತ್ರವಲ್ಲದೆ ಕಡಿಮೆ ತೇವದಲ್ಲಿ ಹೆಚ್ಚು ತಾಪಮಾನವಿದ್ದರೂ ಉತ್ಕೃಷ್ಟವಾಗಿ ಬೆಳೆಯುತ್ತದೆ" ಎಂದು ಮಾಹಿತಿ ನೀಡುತ್ತಾರೆ ಉದಯ್ ಕುಮಾರ್.
ಸದ್ಯಕ್ಕೆ ಎರಡು ಬಾರಿ ಮೆಣಸಿನಕಾಯಿ ಕಟಾವು ಆಗಿದ್ದು, ಒಂದೂವರೆ ಲಕ್ಷ ಲಾಭಾಂಶ ಪಡೆದುಕೊಂಡು, ಇನ್ನೂ ಹತ್ತು ಕಟಾವುಗಳ ನಿರೀಕ್ಷೆಯಲ್ಲಿದ್ದಾರೆ. ಕಡಿಮೆ ಖರ್ಚು, ಕಡಿಮೆ ನೀರಿನಲ್ಲಿ ಹೆಚ್ಚು ಆದಾಯ ಗಳಿಸಿರುವ ಉದಯ್ ಅವರು ಗೆಲುವಿನ ನಗೆ ಬೀರಿದ್ದಾನೆ.












Click it and Unblock the Notifications