ಮಳೆ ಕೊರತೆಯಿಂದ ಬಾರದ ಫಸಲು: ಮೇ, ಜೂನ್ ತಿಂಗಳಲ್ಲಿ ಹಾವೇರಿ ಜಿಲ್ಲೆಯ 18 ರೈತರ ಆತ್ಮಹತ್ಯೆ
ಹಾವೇರಿ, ಜುಲೈ, 19: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾತ್ರ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇನ್ನೂ ಕೆಲವೆಡೆ ಮಳೆಯಿಲ್ಲದೆ ಅನ್ನದಾತ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಅದೇ ರೀತಿ ಹಾವೇರಿ ಜಿಲ್ಲೆ ಒಂದರಲ್ಲಿಯೇ ಮೇ, ಜೂನ್ ತಿಂಗಳಲ್ಲಿಯೇ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಸಾಲ ತೀರಿಸಲಾಗದೇ ಹತಾಶೆಗೊಂಡು ಅನ್ನದಾತ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮುಂಗಾರು ಮಳೆಯಿಲ್ಲದೇ ಜಲಮೂಲಗಳು ಬತ್ತಿ ಬಿತ್ತನೆ ವಿಫಲವಾದ ಬೆನ್ನಲ್ಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 9 ಹಾಗೂ ಜೂನ್ ತಿಂಗಳಲ್ಲಿ 9 ಒಟ್ಟು 18 ರೈತರು ಆತ್ಮಹತ್ಯೆ ಮಾಡಿಕೊಂಡದ್ದಾರೆ. ಹೀಗೆ ಕೇವಲ 2 ತಿಂಗಳಲ್ಲಿ 18 ಆತ್ಮಹತ್ಯೆ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಇನ್ನೂ ಬಹುತೇಕ ಸಣ್ಣ, ಅತಿಸಣ್ಣ ರೈತರು ಸಾಲ ಶೂಲ ಮಾಡಿಕೊಂಡು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಗಾರು ಹಂಗಾಮು ಸಮರ್ಪಕವಾಗದೆ ಸಾಲ ಮಾಡಿದ ರೈತರು ಇಂತಹ ನಿರ್ಧಾರಕ್ಕೆ ಮುಂದಾಗಿದ್ದು, ಕೆಲವು ಕಡೆ 2 ಬಾರಿ ಬಿತ್ತನೆ ಮಾಡಿದರೂ ವಿಫಲವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಗೊಬ್ಬರ ತಂದು ಕೊನೆಗೆ ಇದರಿಂದ ಯಾವುದೇ ಪ್ರತಿಫಲ ಸಿಗದ ಕಾರಣ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಯಿತು. ಅದರಲ್ಲೂ ಕಳೆದ 3 ವರ್ಷಗಳ ಪೈಕಿ ಈ ವರ್ಷ ರೈತರ ಆತ್ಮಹತ್ಯೆ ಇಳಿಕೆಯಾಗಿದೆ. 2020ರಲ್ಲಿ 84, 2021ರಲ್ಲಿ 111 ಮತ್ತು 2022ರಲ್ಲಿ 113 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ರೈತರ ಆತ್ಮಹತ್ಯೆಗಳನ್ನು ತಡೆಯುವ ಜವಾಬ್ದಾರಿ ಸರ್ಕಾರದ ಕೈಯಲ್ಲಿದೆ. ಸರ್ಕಾರ ರೈತರಿಗೆ ಬೆಳೆ ಪರಿಹಾರ ಮತ್ತು ಸಾಲ ಮನ್ನಾ ಮಾಡಿ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಬೇಕಿದೆ.
ನಗರ ಶುಚಿಗೊಳಿಸುವವರಿಗೆ ಕಳಪೆ ಆಹಾರ
ಹಾಗೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಂದಿಲ್ಲೊಂದು ಸಮಸ್ಯೆ ತಲೆದೂರುತ್ತಲೇ ಇದೆ. ಇಲ್ಲಿ ಶ್ರಮ ಜೀವಿಗಳ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯೇ ಇಲ್ಲವಾಗಿದೆ. ಖಾಸಗಿ ಕಂಪನಿಯ ಬೇಜವಾಬ್ದಾರಿಯೋ ಅಥವಾ ಕಮೀಷನ್ ದಂಧೆಯ ಕೈವಾಡವೋ ಗೊತ್ತಿಲ್ಲ. ಆದರೆ ಅವ್ಯವಸ್ಥೆ ಮಾತ್ರ ದೊಡ್ಡಮಟ್ಟದಲ್ಲಿ ಬೇರು ಬಿಟ್ಟಿದೆ. ಎಷ್ಟೇ ಹೇಳಿದರೂ ತಮ್ಮ ಹಳೆಯ ಚಾಳಿ ಬಿಡದಂತೆ ಮತ್ತೆ ಅದನ್ನೇ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ-ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಒದಗಿಸಲು ಪಾಲಿಕೆಯು ತಲಾ ಒಬ್ಬ ಪೌರಕಾರ್ಮಿಕರಿಗೆ ಮೊಟ್ಟೆ ಸೇರಿದಂತೆ ಉಪಹಾರ ಒದಗಿಸಲು 35 ರೂಪಾಯಿ ವ್ಯಯಿಸುತ್ತಿದೆ. ಆದರೆ ಕಳಪೆ ಆಹಾರ ಹಾಗೂ ಅರೆ ಬರೆ ಬೆಂದಿರುವ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ.
ಈಗಾಗಲೇ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಆದರೆ ಇಲ್ಲಿನ ಪೌರಕಾರ್ಮಿಕರಿಗೆ ಮಾತ್ರ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪೌರಕಾರ್ಮಿಕರು ಆಹಾರವನ್ನು ಚೆಲ್ಲುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅವಳಿನಗರದಲ್ಲಿ ಎರಡು ಸಾವಿರ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪೌರಕಾರ್ಮಿಕರಿಗೆ ನೀಡುವ ಆಹಾರದಲ್ಲಿಯೂ ಅಧಿಕಾರಿಗಳ ಕಮಿಷನ್ ದಂಧೆಯಿಂದ ಇಂತಹದೊಂದು ದೊಡ್ಡಮಟ್ಟದ ಅವ್ಯವಸ್ಥೆ ತಲೆದೂರಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹೀಗೆ ಪೌರಕಾರ್ಮಿಕರ ಆಹಾರದಲ್ಲಿ ಕಮಿಷನ್ ಕರಾಳ ದಂಧೆ ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.
ಒಟ್ಟಿನಲ್ಲಿ ಅವಳಿನಗರದ ಸ್ವಚ್ಚತೆಗಾಗಿ ಶ್ರಮಿಸುವ ಶ್ರಮಜೀವಿಗಳ ಬಗ್ಗೆ ಯಾಕಿಷ್ಟು ಬೇಜವಾಬ್ದಾರಿ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications