Tomato: ರೋಗ ನಿರೋಧಕ ಟೊಮೆಟೊ ತಳಿ ಅಭಿವೃದ್ಧಿ ಮಾಡುತ್ತಿರುವ ಕೃಷಿ ವಿಜ್ಞಾನಿಗಳು
ಜಾಗತಿಕ ತಾಪಮಾನ, ಶಾಖದ ಅಲೆಯಿಂದ ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ಬೆಳೆ ನಷ್ಟದಿಂದ ರೈತರು ಕೃಷಿಯನ್ನೇ ಬಿಡುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ ಕೆ.ಜಿ.ಗೆ 300 ರೂಪಾಯಿ ದಾಟಿದ್ದನ್ನು ನೋಡಿದ್ದೇವೆ, ಆದರೆ ಮುಂದಿನ ದಿನಗಳಲ್ಲಿ ಅಂತಹ ಸಾಧ್ಯತೆಯನ್ನು ಕಡಿಮೆ ಮಾಡಲು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR)-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಯ ವಿಜ್ಞಾನಿಗಳು ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವ ಟೊಮೆಟೊ ತಳಿ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಹೊಸ ತಳಿಯ ಟೊಮೊಟೊ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರಲಿದ್ದು, ಬಿಸಿಲು ಮತ್ತು ಚಳಿಯನ್ನು ಕೂಡ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಲಾಗಿದೆ.
ಬಿಸಿಲು, ಚಳಿ ತಾಳಿಕೊಳ್ಳುವ ಸಾಮರ್ಥ್ಯ
"ನಾವು ಹೊಸ ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕೀಟ-ನಿರೋಧಕ ವೈವಿಧ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು ಹೊಸ ಸಂಶೋಧನಾ ತಂತ್ರಗಳೊಂದಿಗೆ ರೈತರನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಗಳತ್ತ ಗಮನಹರಿಸುತ್ತಿದ್ದೇವೆ" ಎಂದು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರಪ್ಪ ಎಚ್.ಪಿ. ಹೇಳಿದ್ದಾರೆ.
ಜಿಕೆವಿಕೆ ಇತ್ತೀಚೆಗೆ ಆಯೋಜಿಸಿದ್ದ ಟೊಮೇಟೊ ಸಮ್ಮೇಳನದಲ್ಲಿ ರೈತರೊಂದಿಗೆ ಚರ್ಚಿಸಲಾಗಿದ್ದು, ಹೊಸ ಹೈಬ್ರಿಡ್ ಬೀಜಗಳನ್ನು ಕೃಷಿಗಾಗಿ ಖರೀದಿಸಲು ರೈತರು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ.
ಗುಣಮಟ್ಟದ ಮೇಲೆ ಪರಿಣಾಮ ಇಲ್ಲ
ಕೆಲವು ಬಾರಿ ಹಗಲಿನ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಮತ್ತು ರಾತ್ರಿಯಲ್ಲಿ 21 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ, ಹೂವಾಗುವ ಪ್ರಮಾಣ ಕಡಿಮೆಯಾಗುತ್ತದೆ. ಇದು ಒಟ್ಟಾರೆ ಟೊಮೆಟೊ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. "ಆದ್ದರಿಂದ ನಾವು 38 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನವನ್ನು ತಡೆದುಕೊಳ್ಳುವ ಹೊಸ ಪ್ರಭೇದವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳುವುದು ಮುಖ್ಯವಾಗಿದೆ, ಇದು ಟೊಮೆಟೊ ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಐಸಿಎಆರ್- ಐಐಹೆಚ್‌ಆರ್ ನ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಸಾಧಾರಣವಾಗಿ ಹೆಚ್ಚಾಗುತ್ತಿದೆ. ಬಿಸಿಲಿನ ದಿನಗಳು ಹೆಚ್ಚಾಗಿದ್ದು ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಕೃಷಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ರೈತರು ಹೈರಾಣಾಗುತ್ತಿದ್ದಾರೆ. ಪ್ರಸ್ತುತ ಹೈಬ್ರಿಡ್ ಬೀಜಗಳ ಬೆಲೆ 10 ಗ್ರಾಂಗೆ ಸುಮಾರು 300-400 ರೂ, ಒಂದು ಎಕರೆಗೆ, ರೈತನಿಗೆ ಸುಮಾರು 20 ಗ್ರಾಂ ಬೀಜಗಳು ಬೇಕಾಗುತ್ತವೆ.
ತರಕಾರಿ ಬೆಳೆಯುವ ರೈತರು ಹೈಬ್ರಿಡ್ ಬೀಜದ ಪ್ರಭೇದಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಕರ್ನಾಟಕವು ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿದ್ದರೆ, ಮಧ್ಯಪ್ರದೇಶದಲ್ಲಿ ಕೂಡ ಹೆಚ್ಚಾಗಿ ಟೊಮೆಟೋ ಬೆಳೆಯಲಾಗುತ್ತದೆ, ಆಂಧ್ರಪ್ರದೇಶ, ಗುಜರಾತ್, ಮತ್ತು ಮಹಾರಾಷ್ಟ್ರಗಳಲ್ಲಿ ಕೂಡ ಟೊಮೆಟೊ ಕೃಷಿ ಹೆಚ್ಚಿದ್ದು, ಹೊಸ ಹವಾಮಾನ-ನಿರೋಧಕ ತಳಿಯು ಭಾರತದಾದ್ಯಂತ ರೈತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.












Click it and Unblock the Notifications