ಕೃಷಿ ಭೂಮಿ ಆಧಾರಿತ ಸಂಶೋಧನೆಗೆ ಆದ್ಯತೆ ನೀಡಲು ಸಿಎಂ ಬೊಮ್ಮಾಯಿ ಕರೆ
ಬೆಂಗಳೂರು, ಮೇ 8: ಕೃಷಿ ವಿಶ್ವವಿದ್ಯಾಲಯದ ತಜ್ಞರು ಕ್ಯಾಂಪಸ್ ಆಧಾರಿತ ಸಂಶೋಧನೆಯನ್ನು ಮಾಡುವುದನ್ನು ಬಿಟ್ಟು ಕೃಷಿ ಭೂಮಿ ಆಧಾರಿತ ಸಂಶೋಧನೆಗಳು ಹಾಗೂ ರೈತರಿಗೆ ಪ್ರಯೋಜನವಾಗಲು ಸಂಶೋಧನೆಗಳು ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಅವರು ಇಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ವಿಶ್ವಬ್ಯಾಂಕ್ ನೆರವಿನ ರಾಷ್ಟ್ರಮಟ್ಟದ "ರಿವಾರ್ಡ್"ಯೋಜನೆ, ಜಲಾನಯನ ಉತ್ಕೃಷ್ಟತಾ (CoE) ಉದ್ಘಾಟನೆ ಮತ್ತು ಎಫ್ಪಿಎಂಗಳ ಏಕರೂಪ ಬ್ರಾಂಡಿಂಗ್ ಸ್ಪರ್ಧೆಯ ಅನಾವರಣ ಹಾಗೂ ಅತ್ಯುತ್ತಮ ರೈತ ಉತ್ಪಾದಕರ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೀಜದ ಉತ್ಪಾದನೆಯಲ್ಲಿ ಗಂಭೀರ ಚಿಂತನೆ ಆಗತ್ಯ. ನಕಲಿ ಬೀಜದ ಹಾವಳಿಯ ಬಗ್ಗೆ ಇನಷ್ಟು ಜಾಗೃತವಾಗಿ ಕೆಲಸ ಮಾಡುವ ತೀರ್ಮಾನವನ್ನು ಸರ್ಕಾರ ಮಾಡಿದೆ. ಬೀಜಗಳ ಪ್ರಮಾಣೀಕರಣ, ಬೀಜಗಳ ಉತ್ಪಾದನಾ ಖಾಸಗಿ ಕಂಪನಿ, ಉತ್ಪಾದಿಸಿದ ದಿನಾಂಕ, ಮದರ್ ಸೀಡ್ ಗಳು, ಬೀಜಗಳ ಗುಣಮಟ್ಟದ ಸಂಪೂರ್ಣ ಟ್ರ್ಯಾಕಿಂಗ್ ಮಾಡಿ ನಿಗಾ ವಹಿಸಲಾಗುತ್ತಿದೆ ಎಂದರು.

ಕೃಷಿ ವಲಯಗಳಿಗೆ ಅನುಕೂಲವಾಗುವಂತಹ ಕೆಲಸ
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ವಲಯಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು. ವಿಶ್ವವಿದ್ಯಾಲಯದ ಕೃಷಿ ತಜ್ಞರು ಮಾಡುವ ಸಂಶೋಧನೆಗಳು ರೈತನ ಭೂಮಿಯಲ್ಲಿ ಯಶಸ್ವಿಯಾಗುತ್ತಿದ್ದೆಯೇ ಎಂಬುದನ್ನು ತಿಳಿಯಲು ಕೃಷಿ ತಜ್ಞರು ರೈತರ ಹೊಲಗಳಿಗೆ ತೆರಳಬೇಕು. ನಿರಂತರ ರೈತರ ಸಂಪರ್ಕದಲ್ಲಿರಬೇಕು. ಬೆಳೆಗಳಿಗೆ ಬರುವ ರೋಗ, ಕೀಟಬಾಧೆಗಳು,ಗೊಬ್ಬರ ವಿವಿಧ ತಳಿಗಳ ಬಗ್ಗೆ ರೈತರು ಎದುರಿಸುವ ತೊಂದರೆಗಳಿಗೆ ನೀವೇ ಹೋಗಿ ಪರಿಹಾರವನ್ನು ನೀಡಬೇಕು.
ಈ ಎಲ್ಲ ವಿಷಯಗಳ ಬಗ್ಗೆ ಕೃಷಿ ವಲಯವಾರು ಡಾಕ್ಯುಮೆಂಟರಿ ಮಾಡಬೇಕು. ಬೆಳೆ ಆಧಾರಿತ, ಜಿಲ್ಲೆಯಾಧಾರಿತ ಮಾಡಿದರೆ ಪ್ರಯೋಜನವಿಲ್ಲ. ಇದರಲ್ಲಿ ಕೃಷಿ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದಾಗಿದೆ. ನಿಮಗೆ ಪ್ರಾಯೋಜಕರು ಸಿಗುತ್ತಾರೆ ಎಂದು ಸಂಶೋಧನೆ ಮಾಡುವುದಲ್ಲ. ರೈತರಿಗೆ ಪ್ರಯೋಜನವಾಗಲು ಸಂಶೋಧನಾ ಕಾರ್ಯಗಳು ನಡೆಯಬೇಕು ಎಂದು ತಿಳಿಸಿದರು.

ಕೃಷಿ ಅರಣ್ಯೀಕರಣಕ್ಕೆ ಪ್ರಾಶಸ್ತ್ಯ:
ಕರ್ನಾಟಕದಲ್ಲಿ 10 ಕೃಷಿ ಹವಾಮಾನ ವಲಯಗಳಿದ್ದು ವಿಸ್ತೃತವಾಗಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜೋಳ, ರಾಗಿ, ಎಣ್ಣೆಕಾಳು, ತೋಟಗಾರಿಕೆ, ವಾಣಿಜ್ಯ ಬೆಳೆ, ಮೆಣಸು,ಕಾಫಿ ನಿಸರ್ಗದತ್ತವಾಗಿ ಕರ್ನಾಟಕಕ್ಕೆ ಬಂದಿದೆ. ಕೃಷಿ ಇಲಾಖೆ ವೈಜ್ಞಾನಿಕವಾದ ಕಾರ್ಯಕ್ರಮಗಳನ್ನುಮಾಡಬೇಕು. ಸಮಗ್ರ ಕೃಷಿಯಲ್ಲಿ ಆಗ್ರೋ ಫಾರೆಸ್ಟ್ರೀ, ತೋಟಗಾರಿಕೆ, ಹೈನುಗಾರಿಕೆಯನ್ನು ಭೂಮಿಯೊಂದಿಗೆ ಜೋಡಿಸಬೇಕು. ಆಗ ಮಾತ್ರ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಅರಣ್ಯಗಳಿಗೆ ಹತ್ತಿರವಿರುವ ಪ್ರದೇಶಗಳನ್ನು ಕೃಷಿ ಅರಣ್ಯೀಕರಣಕ್ಕೆ ಬಳಸಿಕೊಂಡರೆ ರೈತ ಸಮುದಾಯಕ್ಕೆ ಆದಾಯವೂ ಬರುವ ಜೊತೆಗೆ ಮಣ್ಣಿನ ಸಾರವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ. ಹೀಗೆ ವೈಜ್ಞಾನಿಕ ಚಿಂತನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕು. ಸುಜಲಾ ಯೋಜನೆಯ ಎಲ್ಲ ಹಂತಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಅದರ ನಿರ್ವಹಣೆ, ಅನುಷ್ಠಾನ ಸಮರ್ಪಕವಾಗಿ ಆಗುತ್ತಿದೆಯೇ ಇಲ್ಲವೇ ಎಂದು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜಲಾನಯನ ಕಾರ್ಯಕ್ರಮ
ಗ್ರಾಮೀಣಾಭಿವೃದ್ಧಿ, ನರೇಗಾ ಮತ್ತು ಕೃಷಿಯನ್ನು ಜೋಡಿಸಲು ಕೇಂದ್ರ ಕೃಷಿ ಸಚಿವರು ಸಲಹೆಯನ್ನು ನೀಡಿದ್ದರು. ಅವರು ಡಿಗ್ರೇಡಬಲ್ ಮಣ್ಣು ಅಂದರೆ ಬಂಜರು ಭೂಮಿ ಅಂದರೆ ಚಿಕ್ಕಬಳ್ಳಾಪುರ, ಕೋಲಾರದಂತಹ ಪ್ರದೇಶಗಳು, ನೀರಾವರಿ ಹೆಚ್ಚಾಗಿ ಭೂಮಿಯಲ್ಲೇ ನೀರು ಸಿಲುಕಿಕೊಂಡಿರುವ ಪ್ರದೇಶಗಳು ಕೃಷಿಗೆ ಯೋಗ್ಯವಾಗಿರುವುದಿಲ್ಲ. ಈ ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ, ಇಂತಹ ಭೂಮಿ 4 ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ರಾಜ್ಯದಲ್ಲಿತ್ತು. ಇದರಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶವನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಲಾಗಿತ್ತು. ಹಳ್ಳಗಳನ್ನು ಕ್ಲಿಯರ್ ಮಾಡುವ ಮೂಲಕ ಇನ್ನೂ ಹೆಚ್ಚಿನ ಪ್ರದೇಶದಿಂದ ಜವಳು ಮುಕ್ತವಾಗಿಸಬಹುದು. ಗುಲ್ಬರ್ಗ, ರಾಯಚೂರು, ಬೀದರ್ ನಂತಹ ಪ್ರದೇಶಗಳಲ್ಲಿನ ಬಂಜರು ಭೂಮಿಯಲ್ಲಿ ಜಲಾನಯನ ಕಾರ್ಯಕ್ರಮದ ಮೂಲಕ ಫಲವತ್ತಾಗಿಸಬಹುದಾಗಿದೆ ಎಂದರು.

ಅಮೃತ ಸರೋವರ ಮಿಷನ್
ಪ್ರಧಾನಿ ನರೇಂದ್ರ ಮೋದಿಯವರು ಜಲಾನಯನ ಕ್ಕಾಗಿ ಒಂದು ಜಿಲ್ಲೆಯಲ್ಲಿ 75 ಕರೆಗಳನ್ನು ಪುನಶ್ಚೇತನ ಮಾಡುವ ಅಮೃತ ಸರೋವರ ಮಿಷನ್ ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು.ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ರಿವಾರ್ಡ್ ಕಾರ್ಯಕ್ರಮಕ್ಕೆ ಇನ್ನಷ್ಟು ಸಹಕಾರ ನೀಡಲು ಒಪ್ಪಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ ಅತ್ಯಧಿಕ ಮನೆಗಳನ್ನು ನೀಡಿದ್ದಾರೆ.ಈ ಕಾರ್ಯಕ್ರಮವನ್ನು ಇನ್ನಷ್ಟು ಜಿಲ್ಲೆಗಳಲ್ಲಿ ಮಾಡಲಾಗುವುದು ಎಂದರು.

ರೈತ ಸಶಕ್ತನಾದರೆ ದೇಶ ಸಶಕ್ತ
ಭೂಮಿಯ ಮೇಲೆ ಅವಲಂಬಿತರ ಸಂಖ್ಯೆ ಹೆಚ್ಚಾಗಿದೆ. ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುವ 100 ಕ್ಕೂ ಮೊಬೈಲ್ ಲ್ಯಾಬೊರೇಟರಿಗಳು ಕಾರ್ಯನಿರ್ವಹಿಸುತ್ತಿವೆ. ಮಣ್ಣಿನ ಕೊರತೆಯನ್ನು ತುಂಬಿಸುವ ಕೆಲಸ ಇದರಿಂದ ಆಗಬೇಕು. ರೈತವಿದ್ಯಾನಿಧಿ ಯೋಜನೆ, 600 ಕೋಟಿ ರೂ. ವೆಚ್ಚದಲ್ಲಿ ರೈತ ಶಕ್ತಿ ಯೋಜನೆ ಪ್ರಾರಂಭಿಸಲಾಗಿದೆ. ರೈತರ ಆರೋಗ್ಯಕ್ಕಾಗಿ 300 ಕೋಟಿ ರೂ. ವೆಚ್ಚದಲ್ಲಿ ಯಶಸ್ವಿನಿ ಯೋಜನೆ ಯನ್ನು ಅಕ್ಟೋಬರ್ 2 ರಿಂದ ಪ್ರಾರಂಭಿಸಲಾಗುವುದು. 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.
ಹಾಲು ಉತ್ಪಾದಕರ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ 360 ಕೋಟಿ ಬಂಡವಾಳ ಹಾಕಿ ಪ್ರಾರಂಭಿಸಲಾಗುತ್ತಿದೆ. ಮಹಿಳೆಯರಿಗೆ ಈ ಯೋಜನೆಯಿಂದ ಸಹಾಯವಾಗುತ್ತದೆ. ಬೆಳೆಗಳನ್ನು ರಫ್ತು ಮಾಡಲು ವಿಶೇಷ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯದಲ್ಲಿ ರೈತ ಉತ್ಪಾದಕರ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಇನ್ನಷ್ಟು ಪ್ರೋತ್ಸಾಹಕಗಳನ್ನು ನೀಡಲಾಗುವುದು. ರೈತ ಸಶಕ್ತನಾದರೆ ದೇಶ ಸಶಕ್ತವಾಗುತ್ತದೆ. ಕೃಷಿ ವಲಯದ ಬೆಳವಣಿಗೆ, ಕೈಗಾರಿಕೆ ಹಾಗೂ ಸೇವಾ ವಲಯಗಳ ಬೆಳವಣಿಗೆಗೆ ಪೂರಕವಾಗಿದೆ. ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಇಲಾಖೆ ಹಾಗೂ ರೈತರು ಒಟ್ಟುಗೂಡಿ ಕೃಷಿಯೋಜನೆಗಳನ್ನು ಅನುಷ್ಠಾನಗೊಳಿಸೋಣ ಎಂದು ತಿಳಿಸಿದರು.












Click it and Unblock the Notifications