ಬರಗಾಲ; ಮುಂಗಾರು ಹಂಗಾಮು ಬೆಳೆ ನಷ್ಟದ ಮಾಹಿತಿ
ಕೊಪ್ಪಳ, ನವೆಂಬರ್ 16: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಬೆಳೆ ನಷ್ಟವಾಗಿದೆ. ಮತ್ತೊಂದು ಕಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಆದೇಶಿದೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ತಾಲೂಕು ಮಟ್ಟದ ಬೆಳೆಹಾನಿ ಮತ್ತು ಬರ ಪರಿಹಾರ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸಚಿವರು ಮುಂದಿನ ಜೂನ್‌ವರೆಗೂ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮುಖ್ಯಮಂತ್ರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಬರ ಪರಿಸ್ಥಿತಿ ಮಾಹಿತಿ; ಸಭೆಯಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ರುದ್ರೇಶ ಜಿಲ್ಲೆಯ ಬರ, ಬೆಳೆ ನಷ್ಟದ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಮುಂಗಾರು ಹಂಗಾಮಿನ ವಾಡಿಕೆ ಮಳೆ 383 ಮೀ.ಮೀ. ಇದ್ದು, 269 ಮೀ.ಮೀ. ಮಳೆಯಾಗಿದೆ. ಶೇ.30 ಮಳೆ ಕೊರತೆಯಾಗಿರುತ್ತದೆ. ಕೃಷಿ ಬೆಳೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ 313795 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆ ಹಾಗೂ ತೇವಾಂಶದ ಕೊರತೆಯಿಂದ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ನೀರಾವರಿ ಬೆಳೆಗಳು ಹೊರತುಪಡಿಸಿ 250061 ಹೆಕ್ಟರ್ ಪ್ರದೇಶ ಹಾನಿಯಾಗಿರುತ್ತದೆ ಎಂದರು.
ರೂ. 216.41 ಕೋಟಿ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 75058 ರೈತರು ಬೆಳೆವಿಮೆಗೆ ನೋಂದಾಯಿಸಿರುತ್ತಾರೆ. ತೀವ್ರ ತೇವಾಂಶದ ಕೊರತೆಯಿಂದ ಮುಖ್ಯ ಬೆಳೆಗಳಾದ ಮೆಕ್ಕೆಜೋಳ ಮಳೆಯಾಶ್ರಿತ, ಹತ್ತಿ ಮಳೆಯಾಶ್ರಿತ, ತೊಗರಿ ಮಳೆಯಾಶ್ರಿತ ಮತ್ತು ಶೇಂಗಾ ಮಳೆಯಾಶ್ರಿತ ಬೆಳೆಯಲ್ಲಿ ಶೇ.50 ಕ್ಕಿಂತ ಹೆಚ್ಚು ಬೆಳೆನಷ್ಟವಾಗಿದ್ದು, ಮಧ್ಯಂತರ ಪರಿಹಾರವಾಗಿ ಒಟ್ಟು 33375 ಫಲಾನುಭವಿಗಳಿಗೆ ರೂ.26. 17 ಕೋಟಿ ಬೆಳೆವಿಮೆ ಮಂಜೂರಾಗಿದ್ದು, ರೈತರ ಖಾತೆಗೆ ಜಮೆ ಆಗುತ್ತಿದೆ ಎಂದು ವಿವರಣೆ ನೀಡಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಿಲ್ಲೆಯಲ್ಲಿ 4601 ರೈತರಿಗೆ ರೂ. 776.95 ಲಕ್ಷ ತುಂತುರು ನೀರಾವರಿ ಘಟಕ ವಿತರಣೆ ಮಾಡಲು ಗುರಿಯನ್ನು ಹೊಂದಲಾಗಿದೆ, ತೋಟಗಾರಿಕೆ ಇಲಾಖೆಯಿಂದ 1362 ರೈತರಿಗೆ ರೂ. 2130.00 ಲಕ್ಷ ಹನಿ ನೀರಾವರಿ ಘಟಕ ವಿತರಣೆ ಮಾಡಲು ಗುರಿಯನ್ನು ಹೊಂದಲಾಗಿದೆ. 1.42 ಲಕ್ಷ ಬಿ.ಪಿ.ಎಲ್ ಕಾರ್ಡ್ ಹೊಂದಿದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ನರೇಗಾ ಹಾಗೂ ಇತರೆ ಯೋಜನೆಗಳಲ್ಲಿ ವಿವಿಧ ಸವಲತ್ತುಗಳನ್ನು ನೀಡಲಾಗಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 74543 ಕೃಷಿ ಬೆಳೆಸಾಲ ಹೊಂದಿದ ರೈತರ ಖಾತೆಗಳನ್ನು ಪುನರ್ ರಚನೆ ಮಾಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿ, "ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಸರ್ಕಾರದಿಂದ ದಿನಾಂಕ 31/10/2023ರಂದು ಜಿಲ್ಲೆಗೆ ರೂ. 10.50 ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಮುಂಚೆ ರೂ. 9.50 ಕೋಟಿ ಅನುದಾನ ಲಭ್ಯವಿದ್ದು, ಒಟ್ಟಾರೆಯಾಗಿ ರೂ. 20.00 ಕೋಟಿ ಅನುದಾನ ಲಭ್ಯವಿರುತ್ತದೆ" ಎಂದರು.
"ಜಿಲ್ಲೆಯ ಪ್ರತಿ ತಾಲೂಕಿಗೆ ರೂ. 50.00 ಲಕ್ಷ ರಂತೆ ಒಟ್ಟು 350.00 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ತಹಶೀಲ್ದಾರರಿಗೆ ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ರಡಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಉಧ್ಭವಿಸಿದರೆ ತಕ್ಷಣ ಸ್ಪಂದಿಸಲು ಗ್ರಾಮ ಮಟ್ಟದ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್‌ನಲ್ಲಿ ಸಮಿತಿಯನ್ನು ರಚನೆ ಮಾಡಿಕೊಳ್ಳಲಾಗಿದೆ. ಯಾವುದೇ ಸಮಸ್ಯೆ ಉದ್ಭವಿಸಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಸಚಿವರು ನೀಡಿದ ಸೂಚನೆಗಳು
* ಕುಷ್ಟಗಿ, ಯಲಬುರ್ಗಾ, ಕುಕನೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರ್, ನೀರಾವರಿ ಇಲಾಖೆ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರನ್ನು ಒದಗಿಸಲು ಪರ್ಯಾಯ ವ್ಯವಸ್ಥೆಗಳಾದ ಕೊಳವೆಬಾವಿ ದುರಸ್ಥಿ, ಟ್ಯಾಂಕರ್ ಮೂಲಕ ನೀರಿನ ಪೂರೈಕೆ, ಖಾಸಗಿ ಬೋರ್‌ವೆಲ್‌ಗಳ ಬಾಡಿಗೆ ಪಡೆಯುವುದು ಮುಂತಾದವುಗಳನ್ನು ಬೇಡಿಕೆ ಹಾಗೂ ಲಭ್ಯತೆಗನುಸಾರ ಕ್ರಮ ಕೈಗೊಂಡು ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರ ವಹಿಸಿ.
* ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಿ. ಜಿಲ್ಲೆಯ ರೈತರ ಬೇಡಿಕೆಗನುಸಾರ ಬರುವ ಜೂನ್‌ವರೆಗೂ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಸೂಕ್ತ ರೀತಿಯಲ್ಲಿ ಮೇವಿನ ದಾಸ್ತಾನು ಇರುವಂತೆ ನೋಡಿಕೊಳ್ಳಿ. ಗಂಗಾವತಿ ಮತ್ತು ಕಾರಟಗಿ ಭಾಗದ ರೈತರಿಗೆ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದ್ದು, ರೈತರು ಕಟಾವಿನ ನಂತರ ಮೇವು ಸುಟ್ಟು ಹಾಕದೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿ.
* ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನಿಧಿಯಿಂದ ಎಲ್ಲ ತಹಶೀಲ್ದಾರರ ಖಾತೆಗೆ ರೂ. 50 ಲಕ್ಷಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತಂತೆ ತಹಶೀಲ್ದಾರ್ ಸಂಬಂಧಿಸಿದ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕ್ರಿಯಾ ಯೋಜನೆ ಸಿದ್ದಪಡಿಸಿ, ಅಚ್ಚುಕಟ್ಟು ಬರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.
* ಬರದ ಸಮರ್ಪಕ ನಿರ್ವಹಣೆಯ ಉದ್ದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಯಾವುದೇ ಇಲಾಖೆಯ ಅಧಿಕಾರಿಗಳು ತುರ್ತು ಪರಿಸ್ಥಿತಿ ಹೊರತು ಪಡಿಸಿ ರಜೆಯ ಮೇಲೆ ತೆರಳುವಂತಿಲ್ಲ. ಹಾಗೂ ರಜೆಯ ಮೇಲೆ ತೆರಳುವಾಗ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮಾಹಿತಿ ನೀಡಬೇಕು.
* ಬರ ನಿರ್ವಹಣೆ ಕುರಿತು ಯಾವುದೇ ಸಂದರ್ಭದಲ್ಲಿ ಸಭೆ ನಡೆಸುವ ಅನಿವಾರ್ಯತೆ ಬರಬಹುದು. ಆದ್ದರಿಂದ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಖುದ್ದಾಗಿ ಸಭೆಗೆ ಹಾಜರಾಗಿ, ಬರ ನಿರ್ವಹಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು.












Click it and Unblock the Notifications