ದಾವಣಗೆರೆ: ರೈತರ ಹೋರಾಟ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ
ದಾವಣಗೆರೆ, ಡಿಸೆಂಬರ್ 4: ದೆಹಲಿಯಲ್ಲಿನ ರೈತರ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಸಿಯುಸಿ) ಜಿಲ್ಲಾ ಸಮಿತಿಯಿಂದ ದಾವಣಗೆರೆ ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮುಖಾಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಅವರ ಮುಖೇನ ರಾಷ್ಟ್ರಪತಿ ಅವರಿಗೆ ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಮನವಿ ಸಲ್ಲಿಸಿದರು.
ಕೂಡಲೇ ರೈತರ ಬೇಡಿಕೆಗಳಾದ ನೂತನ ಕೃಷಿ ಕಾಯ್ದೆ ಅಡಿಯಲ್ಲಿ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ, ವಿದೇಶಿ ಬೀಜ ಕಾಯ್ದೆ, ಭೂ ಸುಧಾರಣಾ ಹೆಸರಿನಲ್ಲಿ ರೈತಾಪಿ ಜನರನ್ನು ಬೀದಿಗೆ ತಳ್ಳುವ ಕಾಯ್ದೆ, ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಶೀಘ್ರವಾಗಿ ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ರೈತ ಪರ ಕಾಯ್ದೆಗಳನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ ಮೃತ್ಯುಂಜಯ, ರೇಣುಕಮ್ಮ, ಸಿ.ಬಿ. ಕಾಳಮ್ಮ, ಕೆ. ಸುಧಾ, ಅಂಬುಜ, ಜ್ಯೋತಿ, ರಾಧಾ, ಮಂಗಳ, ಭಾಗ್ಯಲಕ್ಷ್ಮಿ, ಅಂಜಿನಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.