ಬೆಂಗಳೂರಿನಲ್ಲಿ ತರಕಾರಿ ದುಬಾರಿ, ಜೇಬಿಗೆ ಕತ್ತರಿ
ಬೆಂಗಳೂರು, ಮೇ 20 : ಬೆಂಗಳೂರಿನಲ್ಲಿ ತರಕಾರಿ ದರ ಮತ್ತೊಮ್ಮೆ ಹೆಚ್ಚಾಗಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ನಗರಕ್ಕೆ ತರಕಾರಿ ಪೂರೈಕೆಯಾಗುವ ಪ್ರದೇಶಗಳಲ್ಲಿ ನೀರಿನ ಕೊರತೆಯಿಂದ ಬೆಳೆ ಕಡಿಮೆಯಾಗಿದ್ದು ತರಕಾರಿ ದರ ಶೇ 20ರಷ್ಟು ಹೆಚ್ಚಾಗಿದೆ. ಮಳೆ ಬರುವವರೆಗೂ ಬೆಲೆ ಕಡಿಮೆ ಆಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ತರಕಾರಿ ಬೆಲೆ ಶೇ 20ರಷ್ಟು ಹೆಚ್ಚಾಗಿದ್ದು, ಬೆಂಗಳೂರಿನ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕಡಿಮೆ ಬೆಲೆಗೆ ದೊರೆಯುತ್ತಿದ್ದ ಮೂಲಂಗಿಯಂತಹ ತಕರಾರಿಗಳು ಕೆಜಿಗೆ 39ರೂ.ಗಳಾಗಿದ್ದು, ಮಾರುಕಟ್ಟೆಗೆ ಹೋದ ಗ್ರಾಹಕರನ್ನು ಕಂಗೆಡಿಸಿದೆ.

ಬೆಂಗಳೂರು ನಗರಕ್ಕೆ ಆನೇಕಲ್, ಹೊಸಕೋಟೆ, ಕೋಲಾರ, ಮಾಲೂರು, ನಂದಗುಡಿ, ಹಿಂಡಿಗನಾಳ ಕ್ರಾಸ್ ಮುಂತಾದ ಪ್ರದೇಶಗಳಿಂದ ತರಕಾರಿ ಸರಬರಾಜು ಆಗುತ್ತಿತ್ತು. ಆದರೆ, ಈ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದ ಕಾರಣ ತರಕಾರಿ ಬೆಳೆ ಕಡಿಮೆಯಾಗಿದೆ. ಆದ್ದರಿಂದ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.
ತರಕಾರಿ ಬೆಳೆಯುವ ಜನರು ಮಳೆಗಾಗಿ ಕಾದು ಕುಳಿತಿದ್ದಾರೆ. ಅತ್ತ ಮಳೆಯೂ ಇಲ್ಲ, ಇತ್ತ ಕೊಳವೆ ಬಾವಿಗಳಲ್ಲೂ ನೀರಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ. ಜಯಗನರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ತರಕಾರಿ ಮಾರಾಟ ಮಾಡುವ ಸುಬ್ಬಣ್ಣ. ಸರಿಯಾಗಿ ಮಳೆ ಬೀಳುವ ತನಕ ಬೆಲೆ ಕಡಿಮೆಯಾಗುವುದಿಲ್ಲ ಎಂದು ಸುಬ್ಬಣ್ಣ ಹೇಳುತ್ತಾರೆ.
ಯಾವ ಬೆಲೆ ಎಷ್ಟಾಗಿದೆ : ಈರುಳ್ಳಿ, ಟೊಮೆಟೋ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ 30ರ ಗಡಿದಾಟುವತ್ತ ಸಾಗಿದೆ. ಹೂಕೋಸು ಕೆಜಿಗೆ 59ರೂ., ಡಬ್ಬಲ್ ಬೀನ್ಸ್ 138, ಈರುಳ್ಳಿ 29, ಮೂಲಂಗಿ 39, ಟೊಮೆಟೋ 24, ಹುರಳಿಕಾಯಿ 80, ಕ್ಯಾಪ್ಸಿಕಂ 42 ರೂಗೆ ಏರಿಕೆಯಾಗಿದೆ. [ತರಕಾರಿ ಬೆಲೆ ನೋಡಿ]












Click it and Unblock the Notifications