ಕೊಡಗಿನ ಕೃಷಿಕರಲ್ಲಿ ಸಂತಸ ತಂದ ಪೂರ್ವ ಮುಂಗಾರು ಮಳೆ
ಮಡಿಕೇರಿ, ಮೇ 22: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಜನರಿಗೆ ನೆಮ್ಮದಿ ತಂದಿದೆ. ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿಯುವ ಭರವಸೆಯಲ್ಲಿಯೂ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಈ ವರ್ಷದ ಬರಗಾಲ ಕೊಡಗು ಜಿಲ್ಲೆಯ ಜನರನ್ನು ಸಹ ಕಂಗೆಡಿಸಿತ್ತು. ಕನ್ನಡ ನಾಡಿನ ಜೀವನದಿ ಕಾವೇರಿ ಬತ್ತಿ ಹೋಗಿತ್ತು. ಮಡಿಕೇರಿಯಲ್ಲಿ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಲು ಸಹ ತೊಂದರೆ ಉಂಟಾಗಿತ್ತು.

ಆದರೆ ಪೂರ್ವ ಮುಂಗಾರು ಮಳೆ ಕೊಡಗು ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ. ಜೂನ್ ಮೊದಲ ವಾರದಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದ್ದು, ಪೂರ್ವ ಮುಂಗಾರು ಮಳೆಯ ಬಳಿಕ ಕೃಷಿಕರು ಸಂತಸಗೊಂಡಿದ್ದಾರೆ.
ಮುಖ್ಯ ಬೆಳೆ ಯಾವುದು?: ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಮತ್ತು ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದೆ. ಕೃಷಿ ಚಟುವಟಿಕೆಗೆ ಭೂಮಿ ಹದ ಮಾಡುವ ಕಾರ್ಯ ನಡೆದಿದೆ. ಜೂನ್ 15ರ ನಂತರ ಭತ್ತ ಸಸಿಮಡಿ ಕಾರ್ಯ ಆರಂಭವಾಗಲಿದೆ. ಹಾಗೆಯೇ ಮುಂಗಾರು ಆರಂಭದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ಶುರುವಾಗಲಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 252 ಮಿ. ಮೀ. ಆಗಿದ್ದು, ಈಗಾಗಲೇ ಈ ಬಾರಿ ಸರಾಸರಿ 248 ಮಿ. ಮೀ. ಮಳೆಯಾಗಿರುವುದು ವಿಶೇಷವಾಗಿದೆ. ಅದರಲ್ಲೂ ಮೇ ತಿಂಗಳಲ್ಲಿ ಪೂರ್ವ ಮುಂಗಾರು, ವಾಯುಭಾರ ಕುಸಿತದಿಂದಾಗಿ ಹೆಚ್ಚಿನ ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ 32,500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಗುರಿ ಇದ್ದು, ಇದರಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. 3,500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಹಾಗೆಯೇ 70 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ತಿಳಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿರುವುದರಿಂದ ಈಗಾಗಲೇ ಮುಂಗಾರಿಗೆ ಅವಶ್ಯವಿರುವ ಸುಮಾರು 1871 ಕ್ವಿಂಟಾಲ್‍ನಷ್ಟು ಭತ್ತದ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಹಾಗೆಯೇ 41 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಬಿತ್ತನೆ ಬೀಜ ಪೂರೈಕೆ ಕುರಿತು ಆತಂಕ ಪಡುವ ಅಗತ್ಯವಿಲ್ಲ.
ಮುಂಗಾರಿಗೆ ಸುಮಾರು 80,946 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಈಗಾಗಲೇ 35,774 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಕೃಷಿಕರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಿದೆ. ಡ್ಯಾಂನ ಗರಿಷ್ಠ ಮಟ್ಟ 2,859 ಅಡಿಗಳು. ಪ್ರಸ್ತುತ ನೀರಿನ ಮಟ್ಟ 2823.21 ಅಡಿಗಳು. ಕಳೆದ ವರ್ಷ ಇದೇ ದಿನ 2819.75 ಅಡಿಗಳ ನೀರಿನ ಸಂಗ್ರಹವಿತ್ತು.
ಹಾರಂಗಿಯಲ್ಲಿ 31.40 ಮಿ.ಮೀ. ಮಳೆ ಬುಧವಾರ ಬೆಳಗ್ಗೆ ವೇಳೆಗೆ ಸುರಿದಿದೆ. ಒಳಹರಿವು 356 ಕ್ಯುಸೆಕ್, ಕಳೆದ ವರ್ಷ ಇದೇ ದಿನ 68 ಕ್ಯುಸೆಕ್ ಒಳಹರಿವು ಇತ್ತು. ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್, ನಾಲೆಗೆ 40 ಕ್ಯುಸೆಕ್ ಆಗಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮುಂಗಾರು ಮಳೆಯ ಪೂರ್ವ ಸಿದ್ಧತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ. "ಇದೇ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ" ಎಂದು ಹೇಳಿದ್ದಾರೆ.
"ಹೆಚ್ಚಿನ ಮಳೆಯಾದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಹವಾಮಾನ ಇಲಾಖೆಯಿಂದ ಕಾಲ ಕಾಲಕ್ಕೆ ಮಳೆ, ಮುನ್ಸೂಚನೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗುತ್ತದೆ. ಈ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮಾಹಿತಿ ನೀಡುವಂತಾಗಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಸಂಬಂಧಿಸಿದಂತೆ ಜಿಲ್ಲೆಗೆ ಬೇಕಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಕೃಷಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ವೆಂಕಟ್ ರಾಜಾ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದಾರೆ.












Click it and Unblock the Notifications