ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ; ವರ್ಚುವಲ್ ಆಗಿ 1 ಕೋಟಿ ರೈತರ ಭಾಗಿ
ನವದೆಹಲಿ, ಅ.17: ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೆಹಲಿಯಲ್ಲಿ ಕಿಸಾನ್ ಸಮ್ಮಾನ್ ಸಮ್ಮೇಳನ 2022 ಅನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿರುವ ಎರಡು ದಿನಗಳ ಈ ಕಾರ್ಯಕ್ರಮ ದೇಶಾದ್ಯಂತ 13,500 ಕ್ಕೂ ಹೆಚ್ಚು ರೈತರು ಮತ್ತು ಸುಮಾರು 1,500 ಅಗ್ರಿ ಸ್ಟಾರ್ಟ್‌ಅಪ್‌ಗಳನ್ನು ಒಟ್ಟುಗೂಡಿಸುತ್ತದೆ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 16,000 ಕೋಟಿ ಮೌಲ್ಯದ ಪಿಎಂ ಕಿಸಾನ್ ನಿಧಿಯ 12 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.
ವಿವಿಧ ಸಂಸ್ಥೆಗಳಿಂದ 1 ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮ್ಮೇಳನವು ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಮಧ್ಯಸ್ಥಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಮನ್ಸುಖ್ ಮಾಂಡವಿಯಾ, ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ರಾಜ್ಯ ಸಚಿವ ಭಗವಂತ ಖೂಬಾ, ಕೇಂದ್ರ ಕೃಷಿ ರಾಜ್ಯ ಸಚಿವರಾದ ಕೈಲಾಶ್ ಚೌಧರಿ ಮತ್ತು ಶೋಭಾ ಕರಂಧಲಾಜೆ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

3.3 ಲಕ್ಷಕ್ಕೂ ಹೆಚ್ಚು ಚಿಲ್ಲರೆ ರಸಗೊಬ್ಬರ ಅಂಗಡಿಗಳ ಪರಿವರ್ತನೆ
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ 600 ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು (ಪಿಎಂಕೆಎಸ್‌ಕೆ) ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿಯಲ್ಲಿ, ರೈತರ ವಿವಿಧ ಅಗತ್ಯಗಳನ್ನು ಪೂರೈಸಲು ದೇಶದ ರಸಗೊಬ್ಬರ ಚಿಲ್ಲರೆ ಅಂಗಡಿಗಳನ್ನು ಹಂತ ಹಂತವಾಗಿ ಪಿಎಂಕೆಎಸ್‌ಕೆ ಆಗಿ ಪರಿವರ್ತಿಸಲಾಗುತ್ತದೆ. 3.3 ಲಕ್ಷಕ್ಕೂ ಹೆಚ್ಚು ಚಿಲ್ಲರೆ ರಸಗೊಬ್ಬರ ಅಂಗಡಿಗಳನ್ನು ಪಿಎಂಕೆಎಸ್‌ಕೆ ಆಗಿ ಪರಿವರ್ತಿಸಲು ಯೋಜಿಸಲಾಗಿದೆ.
ಪ್ರಧಾನಿ ಮೋದಿ, ಪ್ರಧಾನ ಮಂತ್ರಿ ಭಾರತೀಯ ಜನ ಊರ್ವರಕ್ ಪರಿಯೋಜನೆಯಾಗಿರುವ ಒಂದು ರಾಷ್ಟ್ರ ಒಂದು ರಸಗೊಬ್ಬರವನ್ನು 'ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022' ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿಯಲ್ಲಿ, ಭಾರತ್ ಯೂರಿಯಾ ಬ್ಯಾಗ್‌ಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದು ಕಂಪನಿಗಳಿಗೆ "ಭಾರತ್" ಎಂಬ ಏಕ ಬ್ರಾಂಡ್ ಹೆಸರಿನಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆ.

12 ನೇ ಕಂತಿನ ಎರಡು ಸಾವಿರ ರೂಪಾಯಿ ಬಿಡುಗಡೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 16,000 ಕೋಟಿ ರೂಪಾಯಿಗಳ 12 ನೇ ಕಂತಿನ ಮೊತ್ತವನ್ನು ನೇರ ಲಾಭ ವರ್ಗಾವಣೆ ಮೂಲಕ ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಾರೆ.
ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ 6,000 ರೂಪಾಯಿಯನ್ನು ಪ್ರತಿ ವರ್ಷಕ್ಕೆ ನೀಡಲಾಗುತ್ತದೆ. ಇಲ್ಲಿಯವರೆಗೆ, PM-KISAN ಅಡಿಯಲ್ಲಿ ಅರ್ಹ ರೈತ ಕುಟುಂಬಗಳು 2ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಪ್ರಯೋಜನಗಳನ್ನು ಪಡೆದಿವೆ.

ಕೃಷಿ ಸಂಬಂಧಿತ ಇ ಮ್ಯಾಗಜಿನ್ ಪ್ರಾರಂಭ
ಸಮ್ಮೇಶನದಲ್ಲಿ 1,500 ಕೃಷಿ-ಸಂಬಂಧಿತ ಸ್ಟಾರ್ಟ್‌ಅಪ್‌ಗಳನ್ನು ಸಹ ಪ್ರಾರಂಭಿಸಲಾಗುವುದು ಮತ್ತು 'ಇಂಡಿಯನ್ ಎಡ್ಜ್' ಎಂಬ ರಸಗೊಬ್ಬರದ ಕುರಿತು ಇ-ಮ್ಯಾಗಜಿನ್ ಅನ್ನು ಸಹ ಪ್ರಾರಂಭಿಸಲಾಗುವುದು.
'ಇಂಡಿಯನ್ ಎಡ್ಜ್' ಎಂಬ ರಸಗೊಬ್ಬರದ ಇ-ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದು, ಇದು ಇತ್ತೀಚಿನ ಬೆಳವಣಿಗೆಗಳು, ಬೆಲೆ ಪ್ರವೃತ್ತಿಗಳ ವಿಶ್ಲೇಷಣೆ, ಲಭ್ಯತೆ ಮತ್ತು ಬಳಕೆ, ರೈತರ ಯಶಸ್ಸಿನ ಕಥೆಗಳು ಸೇರಿದಂತೆ ದೇಶೀಯ ಮತ್ತು ಅಂತರರಾಷ್ಟ್ರೀಯ ರಸಗೊಬ್ಬರ ಸನ್ನಿವೇಶಗಳ ಮಾಹಿತಿಯನ್ನು ಒದಗಿಸುತ್ತದೆ.
ಸುಮಾರು 300 ಸ್ಟಾರ್ಟ್‌ಅಪ್‌ಗಳು ನಿಖರವಾದ ಕೃಷಿ, ಸುಗ್ಗಿಯ ನಂತರದ ಮತ್ತು ಮೌಲ್ಯವರ್ಧನೆ ಪರಿಹಾರಗಳು, ಸಣ್ಣ ರೈತರಿಗೆ ಯಾಂತ್ರೀಕರಣ, ಪೂರೈಕೆ ಸರಪಳಿ ನಿರ್ವಹಣೆ, ಆರ್ಗಿ-ಲಾಜಿಸ್ಟಿಕ್, ಇತ್ಯಾದಿಗಳಿಗೆ ಸಂಬಂಧಿಸಿದ ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತವೆ.

1 ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಭಾಗಿ
ಕಾರ್ಯಕ್ರಮ ಕುರಿತು ಪ್ರಧಾನು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. "ಅನ್ನದಾತರ ಜೀವನವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲ್ಲಿ, ನಾಳೆ ಬೆಳಿಗ್ಗೆ 11:30 ಕ್ಕೆ ದೆಹಲಿಯಲ್ಲಿ ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಉದ್ಘಾಟಿಸುವುದರ ಜೊತೆಗೆ, ನಾನು ಪಿಎಂ-ಕಿಸಾನ್‌ನ 12 ನೇ ಕಂತನ್ನು ಸಹ ಬಿಡುಗಡೆ ಮಾಡುತ್ತೇನೆ. ಇದೇ ಸಂದರ್ಭದಲ್ಲಿ ಇನ್ನೂ ಹಲವು ಯೋಜನೆಗಳನ್ನು ಆರಂಭಿಸಲಾಗುವುದು" ಎಂದಿದ್ದಾರೆ.
ಇನ್ನು, ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ವಿವಿಧ ಸಂಸ್ಥೆಗಳಿಂದ 1 ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.












Click it and Unblock the Notifications