ಪಿಎಂ ಕಿಸಾನ್ ಯೋಜನೆ; ರೈತರಿಗೆ ಮಹತ್ವದ ಮಾಹಿತಿ
ಧಾರವಾಡ, ಅಕ್ಟೋಬರ್ 30: ರೈತ ಬಾಂಧವರಿಗೆ ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಪ್ರಮುಖ ಮಾಹಿತಿ ನೀಡಲಾಗಿದೆ. ಯೋಜನೆಯಡಿ ಹೆಸರು ನೋಂದಾಯಿಸಿದ ಫಲಾನುಭವಿಗಳು ಇ-ಕೆವೈಸಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಮುಂದಿನ ಕಂತಿನ ಹಣ ವರ್ಗಾವಣೆ ಆಗುವುದಿಲ್ಲ ಎಂದು ತಿಳಿಸಲಾಗಿದೆ.
ರೈತರು ಸುಲಭವಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವ ಮೊಬೈಲ್ ಅಪ್ಲಿಕೇಶನ್ ಮುಖಾಂತರ ತಾವೇ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಇ-ಕೆವೈಸಿ ಮಾಡಿಕೊಂಡ ಫಲಾನುಭವಿಗಳಿಗೆ ಮಾತ್ರ ಮುಂದಿನ ಕಂತಿನ ಹಣ ಜಮೆಯಾಗಲಿದ್ದು, ಅರ್ಹ ಫಲಾನುಭವಿಗಳು ಕೂಡಲೇ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಯೋಜನೆಯಡಿ ಹೆಸರು ನೋಂದಾಯಿಸಿದ ಎಲ್ಲ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು https://pmkisan.gov.in ವೆಬ್‍ಸೈಟ್‌ಗೆ ಭೇಟಿ ನೀಡಬಹುದು ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮುಖಾಂತರ ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.
ಇ-ಕೆವೈಸಿ ಮಾಡುವುದು ಹೇಗೆ?; ಫಲಾನುಭವಿ ರೈತರು ಪ್ಲೇ ಸ್ಟೋರ್ ನಲ್ಲಿ ಪಿ.ಎಂ.ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳವುದರ ಮುಖಾಂತರ ಇ-ಕೆವೈಸಿ ಓಟಿಪಿ ಮುಖಾಂತರ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆಯಾದ ಫಲಾನುಭವಿಗಳು https://pmkisan.gov.in ವೆಬ್‍ಸೈಟ್ ನಲ್ಲಿ ಇ-ಕೆವೈಸಿ ಲಿಂಕ್ ಮೇಲೆ ಕ್ಲಿಕ್ಕಿಸಿ ಆಧಾರ್ ನಂಬರ್ ಹಾಗೂ ಕ್ಯಾಪ್‍ಚಾ ನಮೂದಿಸಿ ತದನಂತರ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ದಾಖಲಿಸಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.
ಇ-ಕೆವೈಸಿ ಬಯೋಮೆಟ್ರಿಕ್ ಮುಖಾಂತರ ಆಧಾರ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಓಟಿಪಿ ಸೃಜನೆಯಾಗದ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ) ಕ್ಕೆ ಭೇಟಿ ನೀಡಿ ಆಧಾರ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ನಮೂದಿಸಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳು ನಮೂದಿಸಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಗಾಗಿ ಸಿಎಸ್‍ಸಿ ಕೇಂದ್ರದವರು ಎಲ್ಲ ಟ್ಯಾಕ್ಸ್ ಒಳಗೊಂಡಂತೆ, ರೂ.15 ಗಳನ್ನು ಮಾತ್ರ ಪ್ರತಿ ಫಲಾನುಭವಿಯಿಂದ ಪಡೆಯಬಹುದಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಿಎಸ್‍ಸಿ ಸೆಂಟರ್, ಗ್ರಾಮ ಒನ್, ಕೃಷಿ ಹಾಗೂ ಪಶು ಸಖಿ, ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು. ಫಲಾನುಭವಿಗಳು ಇ-ಕೆವೈಸಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಯೋಜನೆ ಕುರಿತು ಮಾಹಿತಿ; ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೆಲವು ಮಾನದಂಡಗಳಿಗೆ ಒಳಪಟ್ಟು ದೇಶಾದ್ಯಂತ ಎಲ್ಲಾ ಕೃಷಿಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಯೋಜನೆ ಹೊಂದಿದೆ.
ಯೋಜನೆಯಡಿ ರೂ. 6000 ಅನ್ನು ವಾರ್ಷಿಕವಾಗಿ ಮೂರು ಸಮಾನ ಕಂತುಗಳಲ್ಲಿ ರೂ. 2000 ದಂತೆ ನೇರವಾಗಿ ರೈತರ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ರೈತರು ಇ-ಕೆವೈಸಿ ಮಾಡಿಸಿರುವುದು ಕಡ್ಡಾಯವಾಗಿದೆ.
ಯಾವುದೇ ಮಧ್ಯವರ್ತಿಗಳ ಒಳಗೊಳ್ಳುವಿಕೆ ಇಲ್ಲದೆ ದೇಶದಾದ್ಯಂತ ಎಲ್ಲಾ ರೈತರಿಗೆ ಯೋಜನೆಯ ಪ್ರಯೋಜನಗಳನ್ನು ತಲುಪುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಫಲಾನುಭವಿಗಳ ನೋಂದಾಣಿ ಮತ್ತು ಪರಿಶೀಲನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಲಾಗುತ್ತದೆ.
ಈ ಯೋಜನೆಯನ್ನು ಫೆಬ್ರವರಿ 2019ರಲ್ಲಿ ಪ್ರಾರಂಭಿಸಲಾಯಿತು. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2022-23 ರಲ್ಲಿ ಒಟ್ಟು ರೂ. 58,201.85 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಯೋಜನೆಯಡಿ ಕರ್ನಾಟಕದಲ್ಲಿರುವ ರೈತ ಫಲಾನುಭವಿಗಳ ಸಂಖ್ಯೆ 49,34,483.












Click it and Unblock the Notifications