ಭತ್ತ ಖರೀದಿಗೆ ರೈತರ ನೋಂದಣಿ ಕಡಿಮೆ, ಅಕ್ಕಿ ದರ ಏರಿಕೆ?
ಬೆಂಗಳೂರು, ಜನವರಿ 22: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಸಾಮಾನ್ಯ ಭತ್ತ ಖರೀದಿ ಆರಂಭವಾಗಿದೆ. ಆದರೆ ರಾಜ್ಯಲ್ಲಿ ರೈತರ ನೋಂದಣಿಯಲ್ಲಿ ಕುಸಿತವಾಗಿದೆ. ಬರಗಾಲದ ಪರಿಣಾಮ ಬೆಳೆ ಕೈ ಕೊಟ್ಟಿದ್ದು, ಈ ಬಾರಿ ಅಕ್ಕಿಯ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.
ಎಂಎಸ್‌ಪಿ ಅಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭಗೊಂಡು ಒಂದೂವರೆ ತಿಂಗಳು ಕಳೆದಿದೆ. ಆದರೆ ಇದುವರೆಗೂ ರಾಜ್ಯದಲ್ಲಿ 81 ರೈತರು ಮಾತ್ರ ಭತ್ತ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ನಿಗದಿತ ಗುರಿ ತಲುಪದ ಹಿನ್ನಲೆಯಲ್ಲಿ ನೋಂದಣಿ ದಿನಾಂಕವನ್ನು ಸಹ ವಿಸ್ತರಣೆ ಮಾಡಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ರಾಜ್ಯದಲ್ಲಿ ಭತ್ತ ಖರೀದಿ ನಡೆಯುತ್ತಿದೆ. ಜನವರಿ 19ರ ಮಾಹಿತಿಯಂತೆ ರಾಜ್ಯದ 28 ಜಿಲ್ಲೆಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಶೂನ್ಯವಾಗಿದೆ. ಸರ್ಕಾರ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2,183 ಹಾಗೂ 'ಎ' ಗ್ರೇಡ್ ಭತ್ತಕ್ಕೆ 2,2023 ರೂ. ದರ ನಿಗದಿ ಮಾಡಲಾಗಿದೆ.
ಎಷ್ಟು ಭತ್ತ ಖರೀದಿ?; ರಾಜ್ಯದಲ್ಲಿ ಹಾಸನ, ಕೊಡಗು, ಮಂಡ್ಯ, ಮೈಸೂರು, ಉತ್ತರ ಕನ್ನಡದ ಭತ್ತ ಖರೀದಿ ಕೇಂದ್ರಗಳಲ್ಲಿ 81 ರೈತರು ಮಾತ್ರ ಹೆಸರು ನೋಂದಣಿ ಮಾಡಿಸಿದ್ದಾರೆ. ಹೆಸರು ನೋಂದಾಯಿಸಿಕೊಂಡ ರೈತರಿಂದ ಪ್ರತಿ ಎಕೆರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಭತ್ತ ಖರೀದಿ ಮಾಡಲು ಅವಕಾಶವಿದೆ.
ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯ ಶಿವಕುಮಾರ ಪಾಟೀಲ ಮಾತನಾಡಿ, "ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಹೆಚ್ಚಿನ ದರ ಸಿಗುತ್ತಿದೆ" ಎಂದು ಹೇಳಿದ್ದಾರೆ.
"ಸಮೀಪದ ಅಕ್ಕಿ ಗಿರಣಿಗಳಲ್ಲೇ ಭತ್ತ ಖರೀದಿಗೆ ಅವಕಾಶ ನೀಡಿದಿರುವ ಕಾರಣ, ತಾಲೂಕು ಕೇಂದ್ರಕ್ಕೆ ರೈತರೇ ಭತ್ತ ಸಾಗಣೆಯನ್ನು ತಮ್ಮ ಖರ್ಚಿನಲ್ಲಿ ಮಾಡಬೇಕು ಎಂದಿರುವ ಕಾರಣ ರೈತರು ನೋಂದಣಿಗೆ ನಿರಾಸಕ್ತಿ ವಹಿಸಿದ್ದಾರೆ" ಎಂದು ತಿಳಿಸಿದ್ದಾರೆ.
2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಗೆ 2023ರ ಡಿಸೆಂಬರ್ 31ರ ವರೆಗೆ ಕಾಲವಕಾಶ ನಿಗದಿಪಡಿಸಲಾಗಿತ್ತು. ರಾಜ್ಯದಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಬೇಕಾಗಿರುವುದರಿಂದ ಸರ್ಕಾರವು ಭತ್ತ ನೋಂದಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿ ಆದೇಶಿಸಿದೆ.
ಸರ್ಕಾರವು ರಾಜ್ಯದಲ್ಲಿ 2.5 ಲಕ್ಷ ಮೆ. ಟನ್ ಗುರಿ ತಲುಪುವವರೆಗೆ ನೋಂದಣಿ ಕೈಗೊಳ್ಳಲು ಸೂಚಿಸಿದ್ದರಿಂದ, ರೈತರು ತಕ್ಷಣವೇ ನೋಂದಣಿ ಮತ್ತು ಖರೀದಿಯ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಹ ಮನವಿ ಮಾಡಲಾಗಿದೆ.
ಅಕ್ಕಿಯ ಬೆಲೆ ಏರಿಕೆ?; ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯ ಕಾರಣ ಭತ್ತದ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿದೆ. ಜೂನ್‌ನಲ್ಲಿ ಮಳೆಯಾಗಿಲ್ಲ. ಜುಲೈನಲ್ಲಿ ಮಳೆಯಾದ ಬಳಿಕ ರೈತರು ನಾಟಿ ಮಾಡಿದರು. ಆದರೆ ಆಗಸ್ಟ್‌ನಲ್ಲಿ ಮಳೆ ಮತ್ತೆ ಕೈಕೊಟ್ಟ ಪರಿಣಾಮ ಬೆಳೆ ನೀರಿಲ್ಲದೇ ಒಣಗಿತು. ನವೆಂಬರ್‌ನಲ್ಲಿ ಕೆಲವು ಜಿಲ್ಲೆಗಳಲ್ಲಿ ಸುರಿದ ಮಳೆಯ ಕಾರಣ ಬೆಳೆದಿದ್ದ ಬೆಳೆ ಸಹ ನಷ್ಟವಾಯಿತು.












Click it and Unblock the Notifications