ರೈತ ಆತ್ಮಹತ್ಯೆ : ಸರ್ಕಾರಕ್ಕೆ ಪ್ರತಿಪಕ್ಷಗಳ ಗುದ್ದು
ಬೆಳಗಾವಿ, ನ. 27 : ಕಬ್ಬಿನ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪತ್ರಿಭಟನೆ ನಡೆಸುತ್ತಿದ್ದ ರೈತ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಇಂತಹ ಘಟನೆ ನಡೆದಿದೆ ಸಿಎಂ ಸಿದ್ದರಾಮಯ್ಯ ಅವರೇ ಘಟನೆಗೆ ಜವಾಬ್ದಾರರು ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.
ಸುವರ್ಣ ವಿಧಾನಸೌಧದ ಮುಂದೆ ಧರಣಿ ನಡೆಸುತ್ತಿದ್ದ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದ ರೈತ ವಿಠಲ್ ಅರಭಾವಿ ಬುಧವಾರ ಮಧ್ಯಾಹ್ನ ಹತ್ತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಅಸ್ವಸ್ಥ ರೈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಠಲ್ ಅರಭಾವಿ ಸಾವನ್ನಪ್ಪಿದ್ದಾರೆ. (ಕೀಟನಾಶಕ ಸೇವಿಸಿ ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ)
ಸಿಎಂ ಸಿದ್ದರಾಮಯ್ಯ ಸರ್ಕಾರದ ರೈತ ವಿರೋಧಿ ಧೋರಣೆಯೇ ರೈತನ ಆತ್ಮಹತ್ಯೆಗೆ ಕಾರಣ ಎಂದು ಪ್ರತಿಪ್ಷಕಗಳು ಆರೋಪಿಸಿವೆ. ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ, ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಮತ್ತು ಸಚಿವರ ತುರ್ತುಸಭೆಯನ್ನು ಸಂಜೆ ನಡೆಸಲಿದ್ದು, ನಂತರ ಬೆಂಬಲ ಬೆಲೆ ನೀಡುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಆತ್ಮಕ್ಕೆ ಶಾಂತಿ ಸಿಗಲಿ
ಕೆಎಲ್ ಇ ಆಸ್ಪತ್ರೆಗೆ ಭೇಟಿ ನೀಡಿ ಮೃತ ರೈತನ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂತಹ ಘಟನೆ ನಡೆಯಬಾರದಿತ್ತು, ರೈತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಬೆಂಬಲ ಬೆಲೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಬುಧವಾರ ಸಂಜೆಯೊಳಗೆ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ, ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಘಟನೆಯ ನೈತಿಕ ಹೊಣೆ ಹೊತ್ತು ಸಕ್ಕರೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಹೊಣೆ
ವಿಧಾನಸೌಧದ ಮುಂದೆ ಪತ್ರಿಕಾಗೋಷ್ಠಿ ನಡೆಸಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ, ರೈತನ ಸಾವಿಗೆ ಸಿಎಂ ಸಿದ್ದರಾಮಯ್ಯ ಹೊಣೆ.
ತಕ್ಷಣ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಸಿಎಂ ಸಿದ್ದರಾಮಯ್ಯ ಅವರ ಉಡಾಫೆಯೇ ಇಂತಹ ಘಟನೆಗೆ ಕಾರಣ. ರೈತರ ಸಮಸ್ಯೆ ಬಗೆಹರಿಸಿ ಎಂದರೆ, ನಿಮ್ಮ ಸರ್ಕಾರ ಏನು ಮಾಡಿದೆ? ಎಂದು ಸಿಎಂ ನಮ್ಮನ್ನು ಪ್ರಶ್ನಿಸುತ್ತಾರೆ. ಇಂತಹ ಉಡಾಫೆಯನ್ನು ಸಿಎಂ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.

ಸಿಎಂ ರಾಜೀನಾಮೆ ನೀಡಲಿ
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಸಿದ್ದರಾಮಯ್ಯಗೆ ಅಧಿಕಾರ ಮದ ನೆತ್ತಿಗೇರಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಸರ್ಕಾರ ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ರೈತನ ಆತ್ಮಹತ್ಯೆಗೆ ಕಾರಣವಾದ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

ಕಾರ್ಖನೆ ಮಾಲೀಕರ ಪರವಾಗಿ ಕೆಲಸ
ಬಿಜೆಪಿ ಶಾಸಕ ಸಿ.ಟಿ.ರವಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದು,ಕಾಂಗ್ರೆಸ್ ಸರ್ಕಾರ ಕಾರ್ಖಾನೆ ಮಾಲೀಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದ್ದಾರೆ. ಸರ್ಕಾರ, ಕಾರ್ಖಾನೆ ಮಾಲೀಕರನ್ನೇ ನೀಯಂತ್ರಿಸಲು ಸಾಧ್ಯವಾಗದ ಮೇಲೆ ರಾಜ್ಯವನ್ನು ಹೇಗೆ ನೀಯಂತ್ರಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ. ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಣ ಪಾವತಿ ಮಾಡಿದ್ದೇವೆ
ಮೃತ ರೈತ ವಿಠಲ ಅರಭಾವಿ ಅರ್ಧದಷ್ಟು ಮಾತ್ರ ಕಬ್ಬು ಬೆಳೆಯನ್ನು ಕಾರ್ಖಾನೆಗೆ ಒದಗಿಸಿದ್ದರು ಆದ್ದರಿಂದ ಅರ್ಧದಷ್ಟು ಮಾತ್ರ ಹಣವನ್ನು ಅವರಿಗೆ ನೀಡಲಾಗಿದೆ. ಖಾಸಗಿ ಕಂಪನಿಗಳು ನೀಡುವ ದರದಂತೆ ರೈತರಿಗೆ ಹಣವನ್ನು ನೀಡಲಾಗುತ್ತಿದೆ. ರೈತ ವಿಠಲ ಅರಭಾವಿಗೆ ಹಣ ನೀಡಿದ್ದಕ್ಕೆ ನಮ್ಮಲ್ಲಿ ದಾಖಲೆಗಳಿವೆ ಎಂದು ರೈತ ಕಬ್ಬು ನೀಡಿದ ಕಾರ್ಖನೆ ಮಾಲೀಕ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಎಲ್ಲರೂ ತಲೆತಗ್ಗಿಸಬೇಕಾದ ದುರಂತ
ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ರಾಜ್ಯ ಜನತೆ ತಲೆತಗ್ಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು. ಇದೊಂದು ದೊಡ್ಡ ದುರಂತವೇ ಸರಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ರೈತರ ಮನಸನ್ನು ನೋಯಿಸುವ ಯಾವುದೇ ಸರ್ಕಾರ ಹೆಚ್ಚುಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.












Click it and Unblock the Notifications