ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವುದು ಅಗತ್ಯ
ಮಡಿಕೇರಿ, ನವೆಂಬರ್ 26; ಕೃಷಿಕರು ಸರ್ಕಾರದ ಸೌಲಭ್ಯವನ್ನು ಪಡೆಯಲು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಬೇಕು ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಆಧಾರ್ ಕಾರ್ಡ್ ಜೊತೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಆ ನಿಟ್ಟಿನಲ್ಲಿ ರೈತರು ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದರು.

ಜಿಲ್ಲೆಯಲ್ಲಿ 3,26,776 ಕೃಷಿಕರಲ್ಲಿ 1,47,621 ಮಂದಿ ಫ್ರೂಟ್ಸ್ ತಂತ್ರಂಶದಲ್ಲಿ ಹೆಸರು ನೋಂದಾಯಿಸಿದ್ದಾರೆ. ಉಳಿದಂತೆ 1,29, 976 ಮಂದಿ ಫ್ರೂಟ್ಸ್ ತಂತ್ರಾಂಶದಡಿ ಹೆಸರು ನೋಂದಾಯಿಸಬೇಕಿದೆ ಎಂದು ಮಾಹಿತಿ ನೀಡಿದರು.
ಸುಲಭವಾಗಿ ನೋಂದಾಯಿಸಿ; Farmer Registration and Unified Beneficiary Information System (FRUITS) ತಂತ್ರಾಶವನ್ನು ಸರ್ಕಾರದ ವತಿಯಿಂದ ಅಭಿವೃದ್ದಿಗೊಳಿಸಲಾಗಿದ್ದು, ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಬಯಸುವ ಎಲ್ಲಾ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಅವಶ್ಯವಾಗಿದೆ.
ರೈತರು ಜಮೀನಿಗೆ ಸಂಬಂಧಿಸಿದ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಗುರುತಿನ ಸಂಖ್ಯೆ (ಎಫ್‍ಐಡಿ) ಪಡೆಯಬಹುದು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಇಲಾಖೆ ಮತ್ತು ಇತರೆ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸಹಾಯಧನ ಸೌಲಭ್ಯ ಪಡೆಯಲು ಮತ್ತು ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಹಾನಿ ಪರಿಹಾರ, ಬ್ಯಾಂಕ್ ಸಾಲ ಪಡೆಯಲು ಹಾಗೂ ಇತರೆ ಯೋಜನೆಗಳಿಗೆ ಫ್ರೂಟ್ಸ್ ತಂತ್ರಾಂಶದಲ್ಲಿರುವ ವಿವರಗಳನ್ನು ಬಳಸಲಾಗುತ್ತದೆ.
ಕೊಡಗು ಜಿಲ್ಲೆಯಲ್ಲಿ ಭೂಮಿ ತಂತ್ರಾಂಶದಲ್ಲಿ ಒಟ್ಟು ಸೇರ್ಪಡೆಯಾಗಿರುವ ತಾಕು ಸಂಖ್ಯೆ 3,26,776. ಸರ್ಕಾರದ ಅಧೀನದಲ್ಲಿರುವ ಹಾಗೂ ಕೃಷಿಯೇತರ ಭೂಮಿಗಳು (ಎನ್.ಎ) ಹಾಗೂ ಇತರೆ ತಾಕುಗಳನ್ನು ಹೊರತುಪಡಿಸಿ ಫ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆಗೊಳಿಸಬೇಕಾಗಿರುವ ತಾಕುಗಳ ಒಟ್ಟು ಸಂಖ್ಯೆ 2,69,901. ಈಗಾಗಲೇ 1,47,621 ತಾಕುಗಳು ಸೇರ್ಪಡೆಗೊಂಡಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿ 1,29,976 ಸರ್ವೇ ನಂಬರ್‌ಗಳು ಸೇರ್ಪಡೆಯಾಗಲು ಬಾಕಿ ಇದೆ.
ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಎಲ್ಲಾ ಜಮೀನುಗಳ ವಿವರಗಳನ್ನು ತಮ್ಮ ಎಫ್‍ಐಡಿಗೆ ಸೇರಿಸಲು ಮತ್ತು ಯಾವ ರೈತರು ಇಲ್ಲಿಯವರೆಗೆ ಎಫ್‍ಐಡಿಯನ್ನು ಮಾಡಿಸಿಕೊಂಡಿಲ್ಲವೋ ಅವರು ತಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆಗಳನ್ನು ಸಂಪರ್ಕಿಸಬಹುದಾಗಿದೆ.
ಎಫ್‍ಐಡಿಯನ್ನು ಮಾಡಿಸಲು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ ಪಹಣಿ ಪ್ರತಿಗಳು, ರೈತರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಪ್ರತಿ (ಪರಿಶಿಷ್ಟ ವರ್ಗದ ರೈತರಿಗೆ ಕಡ್ಡಾಯ) ಪಾಸ್‍ಪೋರ್ಟ್ ಅಳತೆಯ ಒಂದು ಭಾವಚಿತ್ರ. ದಾಖಲಾತಿಗಳು ಅವಶ್ಯವಾಗಿದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಡಗು ಜಿಲ್ಲೆಯ ಎಲ್ಲಾ 5 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಯಾದ ಸಂದರ್ಭದಲ್ಲಿ ರೈತರಿಗೆ ಅವರ ಫ್ರೂಟ್ಸ್-ಐಡಿ ಗೆ ಸೇರಿಸಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಪರಿಹಾರ ಧನವನ್ನು ನೇರವಾಗಿ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ.
ರೈತರ ಅನುಕೂಲಕ್ಕಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
ನವೆಂಬರ್ 29ರಂದು ನೆಲಜಿ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಾಗೂ ನ.29 ರಂದು ಮೇಕೇರಿ, ಗಾಳಿಬೀಡು ಗ್ರಾಮ ಪಂಚಾಯತ್‍ನಲ್ಲಿ ಹಾಗೂ ಡಿಸೆಂಬರ್ 1ರಂದು ಕೆ.ನಿಡುಗಣೆ, ಎಮ್ಮೆಮಾಡು ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯತ್‍ಗಳಲ್ಲಿ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಹಾಜರಿರುತ್ತಾರೆ. ಅಂದು ರೈತರು ನೋಂದಣಿ ಮಾಡಿಸಿಕೊಳ್ಳಬಹುದು.












Click it and Unblock the Notifications