ಮೈಸೂರು ಜಿಲ್ಲೆ ಕೃಷಿ ಚಟುವಟಿಕೆ ಕುರಿತು ಒಂದು ವರದಿ
ಮೈಸೂರು, ಜೂ. 10 : ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಎತ್ತುಗಳನ್ನು ಕಟ್ಟಿಕೊಂಡು ಬಿತ್ತನೆಯಲ್ಲಿ ತೊಡಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಆಗಿರುವ ಮಳೆ, ಬೆಳೆಯಲಾಗುತ್ತಿರುವ ಬೆಳೆಗಳ ಬಗ್ಗೆ ಒಂದು ವರದಿ ಇಲ್ಲಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಶೇ 95ರಷ್ಟು ಬಿತ್ತನೆ ಪೂರ್ಣಗೊಂಡಿದ್ದರೆ ನೀರಾವರಿ ಪ್ರದೇಶದಲ್ಲಿ ಶೇ 2ರಷ್ಟು ಬಿತ್ತನೆ ಪೂರ್ಣವಾಗಿರುತ್ತದೆ.
2015-16ರ ಮುಂಗಾರಿಗೆ 3,90,690 ಹೆ. ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯುವ ಗುರಿಯಿದ್ದು ಈವರೆಗೆ 2,63,084 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಮಳೆ ಆಶ್ರಯದಲ್ಲಿ 2,74,090 ಹೆ. ಗುರಿಯಿದ್ದು, ಈ ಪೈಕಿ 2,60,465 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ನೀರಾವರಿಯಲ್ಲಿ 1,16,600 ಹೆ. ಗುರಿಯಿದ್ದು, ಈ ಪೈಕಿ 2619 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. [ಹೊಸ ಯೂರಿಯಾ ನೀತಿ, ರೈತ ಸ್ನೇಹಿ]

ಹುರುಳಿ ಬೆಳೆಯು 6273 ಹೆ.ಪ್ರದೇಶದಲ್ಲಿ ಆವರಿಸಿದ್ದು ಈ ಬೆಳೆಯನ್ನು ಬತ್ತ ಬೆಳೆಯುವ ಪ್ರದೇಶದಲ್ಲಿ ಬಿತ್ತನೆ ಮಾಡಿರುತ್ತಾರೆ. ನೀರಿನ ಲಭ್ಯತೆಯಾದಲ್ಲಿ ಇದನ್ನು ಹಸಿರೆಲೆ ಗೊಬ್ಬರವನ್ನಾಗಿ ಬಳಸುತ್ತಾರೆ. ನೀರಿನ ಲಭ್ಯತೆ ಇಲ್ಲದಿದ್ದಲ್ಲಿ ಪೂರ್ಣಬೆಳೆಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಈಗ ಬಿದ್ದಿರುವ ಅಧಿಕ ಮಳೆಯಿಂದ ಸುಮಾರು 35,000 ಹೆ. ಬತ್ತದ ಪ್ರದೇಶದಲ್ಲಿ ಹಸಿರೆಲೆ ಗೊಬ್ಬರ ಬೆಳೆಗಳಾದ ದಯಂಚ ಮತ್ತು ಸೆಣಬು ಬೆಳೆಯು ಆವರಿಸಿರುತ್ತದೆ.
2015ನೇ ಸಾಲಿನ ವಾರ್ಷಿಕ ವಾಡಿಕೆ ಮಳೆ 801.4 ಮಿ.ಮೀ. ಇದ್ದು ವಾಸ್ತವವಾಗಿ ಜೂನ್ ಮಾಹೆಯ ಈ ವರೆಗೆ (08.06.2015ರವರೆಗೆ) ಸಂಚಿತ ವಾಡಿಕೆ ಮಳೆ 235.4 ಮಿ.ಮೀ. ಇದ್ದು, ವಾಸ್ತವವಾಗಿ 338.9 (144%) ಮಿ.ಮೀ. ಮಳೆಯಾಗಿರುತ್ತದೆ. ಜೂನ್ ತಿಂಗಳ ಈ ವರೆಗಿನ ವಾಡಿಕೆ ಮಳೆ 26.0 ಮಿ.ಮೀ. ಇದ್ದು ವಾಸ್ತವವಾಗಿ 57.3 (220%) ಮಿ.ಮೀ. ಮಳೆಯಾಗಿರುತ್ತದೆ. ಒಟ್ಟಾರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುತ್ತದೆ.
2014-15ರ ಬೇಸಿಗೆ ಬತ್ತದಲ್ಲಿ ಹೊಡೆ ಮತ್ತು ಹಾಲು ತುಂಬುವ ಹಂತ ರಾಗಿ ತೆನೆಹಂತ ಮುಸುಕಿನಜೋಳ ಕಟಾವು ಹಂತ, ಮತ್ತು ದ್ವಿದಳ ಧಾನ್ಯ ಕಾಯಿ ಮತ್ತು ಕಟಾವು ಹಂತದಲ್ಲಿದೆ. 2015-16ರ ಮುಂಗಾರಿನಲ್ಲಿ ಭೂಮಿ ಹೈಬ್ರಿಡ್‌ಜೋಳ, ಮುಸುಕಿನಜೋಳ, ರಾಗಿ, ದ್ವಿದಳ ಧಾನ್ಯಗಳ ಬಿತ್ತನೆಕಾರ್ಯ ಮುಂದುವರೆದಿದೆ. ಕಬ್ಬು ಬೆಳೆ ವಿವಿಧ ಹಂತದಲ್ಲಿದೆ. ಎಳ್ಳು ಮತ್ತು ಹತ್ತಿ ಬೆಳೆಗಳು ಬೆಳವಣಿಗೆ ಹಂತದಲ್ಲಿದೆ. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]
ಬೇಸಿಗೆ ಬತ್ತದಲ್ಲಿ ಅಲ್ಲಲ್ಲಿ ಕುತ್ತಿಗೆ ಬೆಂಕಿ ರೋಗದ ಬಾಧೆ ಕಂಡು ಬಂದಿದ್ದು ಹತೋಟಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಾಲಿ ಇರುವ ದ್ವಿದಳ ದಾನ್ಯಗಳಲ್ಲಿ ಹೇನಿನ ಬಾಧೆ ಮತ್ತು ಅಲ್ಲಲ್ಲಿ ಹಳದಿ ಮೊಜಾಯಿಕ್ ರೋಗದ ಬಾಧೆ ಕಂಡು ಬಂದಿದ್ದು ಹತೋಟಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
2015-16ರ ಮುಂಗಾರು ಹಂಗಾಮಿನಲ್ಲಿ ಹೈಬ್ರಿಡ್‌ಜೋಳ, ಮುಸುಕಿನಜೋಳ ಮತ್ತು ದ್ವಿದಳಧಾನ್ಯ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯಕ್ರಮದಲ್ಲಿ ದೃಢೀಕೃತ/ನಿಜಚೀಟಿ ಬಿತ್ತನೆ ಬೀಜಗಳ ದಾಸ್ತಾನು ಮಾಡಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ.
ರೈತರು ರೈತಸಂಪರ್ಕ ಕೇಂದ್ರ ಅಥವಾ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ವಿವರಿಸಿದ್ದಾರೆ.












Click it and Unblock the Notifications