ಬಮ್ಮಿಗಟ್ಟಿ ಗ್ರಾಮದಲ್ಲಿ ಬಿರುಗಾಳಿ ಹೊಡೆತಕ್ಕೆ ನೆಲಸಮವಾದ್ವು 500ಕ್ಕೂ ಹೆಚ್ಚು ಬಾಳೆ ಗಿಡಗಳು, ಕಂಗಾಲಾದ ಅನ್ನದಾತ
ಹುಬ್ಬಳ್ಳಿ, ಜೂನ್, 02: ಮುಂಗಾರು ಪೂರ್ವ ಮಳೆಯಿಂದ ಈಗಾಗಲೇ ರಾಜ್ಯದ ಹಲವೆಡೆ ಸಾಕಷ್ಟು ಅನಾಹುತಗಳೇ ಸಂಭವಿಸಿವೆ. ಅದೇ ರೀತಿ ಹುಬ್ಬಳ್ಳಿ ಜಿಲ್ಲೆಯ ಹಲವೆಡೆ ಭಾರೀ ಬಿರುಗಾಳಿ ಬೀಸಿದ್ದು, ಇದರಿಂದ ಮನೆ ಮೆಲ್ಛಾವಣಿಗಳು ಸೇರಿದಂತೆ ಕೃಷಿ ಬೆಳೆಗಳು ನಾಶವಾಗಿವೆ. ಹೀಗೆ ಬೆಳೆಗಳನ್ನು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ವರ್ಷವಿಡಿ ಬೆಳೆದ ಬಾಳಿ ಗಿಡಗಳು ಬಿರುಗಾಳಿ ರಬಸಕ್ಕೆ ನೆಲಸಮವಾದ ಘಟನೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ಅಪ್ಪಯ್ಯ ವಸ್ತ್ರದ ಎಂಬುವವರ ಹೊಲದಲ್ಲಿ ಸಂಜೆ ಹೊತ್ತಿಗೆ ಬೀಸಿದ ಬಿರುಗಾಳಿ ಹೊಡೆತಕ್ಕೆ ಬಾಳೆಗಿಡಗಳು ಸಂಪೂರ್ಣವಾಗಿ ನೆಲಸಮವಾಗಿ ಬಿಟ್ಟಿವೆ.

ಈ ಬಿರುಗಾರಿಯ ಹೊಡೆತಕ್ಕೆ ಸುಮಾರು ಒಂದೂವರೆ ಹೆಕ್ಟೇರ್ ಬಾಳೆ ಬೆಳೆ ನೆಲಕಚ್ಚಿಕೊಂಡುಬಿಟ್ಟಿದೆ. ವರ್ಷವಿಡೀ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬಾಳೆ ಬೆಳೆಯೂ ಇನ್ನೇನು ವಾರ ಕಳೆಯುವಷ್ಟರಲ್ಲಿಯೇ ಕಟಾವ್ ಮಾಡಬೇಕಿತ್ತು. ಅಲ್ಲದೆ ಇದರಿಂದ ಸಾಲ ಹರಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬದುಕಿಗೆ ಕೊಳ್ಳಿ ಇಟ್ಟಿದೆ. ಹೀಗೆ ಒಂದೇ ದಿನದಲ್ಲಿ ಭೂತದಂತೆ ಮುಳ್ಳಾಗಿ ಬಂದ ಬಿರುಗಾಳಿ ರೈತನ ಬದುಕನ್ನೇ ಕಿತ್ತುಕೊಂಡಿದೆ.
ಬಿರುಗಾಳಿ ಹೊಡೆತಕ್ಕೆ ಒಂದೂವರೆ ಹೆಕ್ಟೇರ್‌ನಲ್ಲಿ ಬೆಳೆದಿದ್ದ 500 ಬಾಳೆ ಗಿಡಗಳು ನೆಲಕಚ್ಚಿದ್ದು, ಅಂದಾಜು 5 ಲಕ್ಷ ರೂಪಾಯಿನಷ್ಟು ಹಾನಿ ಆಗಿದೆ. ಇದರಿಂದ ನೊಂದ ರೈತ ಕಣ್ಣೀರಿನಲ್ಲು ಕೈತೊಳೆಯುವಂತಾಗಿದೆ. ಆದ್ದರಿಂದ ತಾಲೂಕಿನ ದಂಡಾಧಿಕಾರಿಗಳು ಈ ರೈತನ ಗೋಳು ಆಲಿಸಿ ನೆರವಿಗೆ ಬರಬೇಕು ಎಂಬುದೇ ಜಿಲ್ಲೆಯ ಜನರ ಆಶಯವಾಗಿದೆ.
ಬಾಳೆ, ಭತ್ತ ಬೆಳೆ ನಾಶ
ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ದೊಡ್ಡ ದೊಡ್ಡ ಅನಾಹುತಗಳನ್ನೇ ಸೃಷ್ಟಿಸಿದೆ. ಇನ್ನು ಕೃಷಿ ಬೆಳೆಗಳನ್ನ ಕಳೆದುಕೊಂಡ ರೈತರ ಪಾಡಂತೂ ಹೇಳತೀರದಾಗಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟದಿಂದ ಭತ್ತ ಬೆಳೆ ನಾಶವಾಗಿದ್ದು, ಇದರಿಂದ ರೈತರು ಕಂಗಾಗಲಾಗಿದ್ದಾರೆ.
ಪಾಂಡವಪುರ ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮನೆಯ ಮೇಲ್ಛಾವಣಿ ಹಾರಿದ್ದು, ಮತ್ತೊಂದೆಡೆ ಬಾಳೆ, ಭತ್ತ ಸೇರಿದಂತೆ ಅಪಾರ ಬೆಳೆ ಹಾನಿಯಾಗಿದೆ. ತಾಲೂಕಿನ ಚಿಕ್ಕಯಾರಹಳ್ಳಿ, ಕಟ್ಟೇರಿ, ಭಾಗದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಈ ಮೂಲಕ ಇಷ್ಟು ದಿನ ಬಿಸಿಲಿನ ಬೇಗೆಗೆ ಬೆಂದಿದ್ದ ಇಲ್ಲಿನ ವಾತವರಣವನ್ನು ತಣ್ಣಗಾಗಿಸಿದೆ.
ಮತ್ತೊಂದೆಡೆ ಸುರಿದ ಆಲಿಕಲ್ಲು ಸಹಿತ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಗ್ರಾಮದ ಶಂಭೂಲಿಂಗಯ್ಯ, ಪುಟ್ಟಸಿದ್ದಮ್ಮ, ವೀರೂಪಾಕ್ಷ, ಶಿವು, ಜವರಾಯಿ, ಶ್ರೀಮಂತಿ , ಚಂದ್ರಶೇಖರ್, ನಾಗಮ್ಮ, ಚಂದ್ರಶೇಖರ್ ನಿಂಗಪ್ಪ ಪ್ರಭುದೇವಯ್ಯ, ಲಿಂಗರಾಜಮ್ಮ, ಸಣ್ಣತಾಯಮ್ಮ ಸೇರಿದಂತೆ ಅನೇಕರ ಮನೆಯ ಮೇಲ್ಛಾವಣಿಗಳು ಗಾಳಿಯ ರಭಸಕ್ಕೆ ಹಾರಿಹೋಗಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಇನ್ನು ರೈತ ಸೋಮಶೇಖರ್ ಅವರ ಜಮೀನಿನಲ್ಲಿ ಬೆಳೆದಿದ್ದ 35 ತೆಂಗಿನ ಮರ ಧರೆಗುರುಳಿವೆ. ಹಾಗೆಯೆ ಸಿ.ಎಸ್.ಲಿಂಗಪ್ಪ, ದಯಾನಂದ, ಷಡಕ್ಷರಿ, ಶಂಭೂಲಿಂಗಯ್ಯ, ನಾಗಾರಾಜು, ರಮೇಶ್ ವಿಷಕಂಠೇಗೌಡ ಅವರಿಗೆ ಸೇರಿದ ನೂರಾರು ಹೆಕ್ಟೇರ್‌ಗೂ ಹೆಚ್ಚು ಭತ್ತ ಬೆಳೆ ನಾಶವಾಗಿದೆ. ಜೊತೆಗೆ ರಾಜಯ್ಯ ಬಸಪ್ಪ ಅವರ ಒಂದು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾಹಿತಿ ತಿಳಿದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ರೈತರು, ಜನರಿಗೆ ಧೈರ್ಯ ತುಂಬಿದರು. ಇನ್ನು ತಹಶೀಲ್ದಾರ್ ಕೆ.ಸಿ.ಸೌಮ್ಯ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.












Click it and Unblock the Notifications