ರಸಗೊಬ್ಬರಕ್ಕೆ ದರ ನಿಗದಿ; ನಿಯಮ ಮೀರಿದರೆ ಅಂಗಡಿ ಲೈಸೆನ್ಸ್ ರದ್ದು
ಧಾರವಾಡ, ಜೂನ್ 07; "ರೈತರಿಗೆ ರಸಗೊಬ್ಬರ ಮಾರಾಟ ಮಾಡಲು ಸರ್ಕಾರವೇ ರಸಗೊಬ್ಬರದ ದರ ನಿಗದಿಗೊಳಿಸಿ ಆದೇಶಿಸಿದೆ. ಈ ಕುರಿತು ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಮಾಹಿತಿ ನೀಡಿ, ಆದೇಶದಂತೆ ದರ ಪಡೆಯಲು ಸೂಚಿಸಲಾಗಿದೆ" ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಬಾರಿಯ ನೈಋತ್ಯ ಮುಂಗಾರು ವಿಳಂಬವಾಗಿದೆ. ಜೂನ್ ಎರಡನೇ ವಾರದಲ್ಲಿ ನಿರೀಕ್ಷಿತ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ರೈತರ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಬೀಜ, ರಸಗೊಬ್ಬರ, ಕಳೆನಾಶಕ ದಾಸ್ತಾನು ಮಾಡಿಕೊಂಡು, ವ್ಯವಸ್ಥಿತವಾಗಿ ವಿತರಣೆ ಮಾಡಲು ಜಿಲ್ಲಾಡಳಿತ ಕೃಷಿ ಇಲಾಖೆ ಮೂಲಕ ಕ್ರಮಕೈಗೊಂಡಿದೆ ಎಂದು ಡಿಸಿ ಹೇಳಿದ್ದಾರೆ.

ರಿಯಾಯಿತಿ ದರದಲ್ಲಿ ರೈತರಿಗೆ ರಸಗೊಬ್ಬರ ಮಾರಾಟ ಮಾಡಲು ಸರ್ಕಾರವೇ ರಸಗೊಬ್ಬರದ ದರ ನಿಗದಿಗೊಳಿಸಿ, ಆದೇಶಿಸಿದೆ. ಈ ಕುರಿತು ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಮಾಹಿತಿ ನೀಡಿ, ಆದೇಶದಂತೆ ದರ ಪಡೆಯಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯದಷ್ಟು ಎಲ್ಲ ಪ್ರಕಾರದ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ ಎಂದು ರೈತರಿಗೆ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಅಂಗಡಿ ಲೈಸೆನ್ಸ್ ರದ್ದು; ಅಗತ್ಯದಷ್ಟು ದಾಸ್ತಾನು ಇದ್ದರೂ ಸಹ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ನಿಗದಿತ ದರಕ್ಕಿಂತ ಹೆಚ್ವು ದರ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಥವಾ ಈ ರೀತಿಯಾಗಿ ಜಿಲ್ಲೆಯ ಯಾವುದೇ ಊರಿನಲ್ಲಿ ಕಂಡು ಬಂದರೆ ತಕ್ಷಣ ಅಂತಹ ಮಾರಾಟಗಾರ ಅಥವಾ ಅಂಗಡಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ತನಿಖೆಯಲ್ಲಿ ಅಪರಾಧ ಸಾಬೀತಾದರೆ ಅವರ ಅಂಗಡಿ ಲೈಸೆನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಸಗೊಬ್ಬರಗಳ ದರ; ಮುಖ್ಯವಾಗಿ ರೈತರು ಮುಂಗಾರು ಬೆಳೆಗಳಿಗೆ ಯೂರಿಯಾ, ಡಿಎಪಿ, ಪೊಟ್ಯಾಸಿಯಮ್ ರಸಗೊಬ್ಬರ ಬಳಸುತ್ತಾರೆ. ಯೂರಿಯಾ ರಸಗೊಬ್ಬರ ಪ್ರತಿ ಚೀಲಕ್ಕೆ ರೂ. 266, ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಕೆ ರೂ. 1350 ಮತ್ತು ಪೊಟ್ಯಾಸಿಯಮ್ ರಸಗೊಬ್ಬರ ಪ್ರತಿ ಚೀಲಕ್ಕೆ ರೂ. 1700 ಸರ್ಕಾರಿ ದರವಿದೆ. ರೈತರು ಈ ಬೆಲೆ ಕೊಟ್ಟು ರಸಗೊಬ್ಬರ ಖರೀದಿಸಬೇಕು. ಗೊಬ್ಬರ ಖರೀದಿಸುವಾಗ ರೈತರು ತಮ್ಮ ಆಧಾರ್ ಸಂಖ್ಯೆ ಅಥವಾ ತಂಬ್ ನೀಡಿಬೇಕು.
ಒಂದು ವೇಳೆ ಗೊಬ್ಬರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದರೆ ಅಥವಾ ಗೊಬ್ಬರದ ಜೊತೆಗೆ ಬೇರೆ ಕೃಷಿ ಪರಿಕರ ಅಥವಾ ಬೇರೆ ಗೊಬ್ಬರ ಖರೀದಿಸಲು ಒತ್ತಾಯಪಡಿಸಿ, ಕೇಳಿದ ಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ರೈತರು ದೂರು ನೀಡಬಹುದು. ತಕ್ಷಣ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುತ್ತಾರೆ.
ದಳಗಳ ರಚನೆ: ಮುಂಗಾರು ಹಂಗಾಮಿನಲ್ಲಿ ಬೀಜ ಮತ್ತು ರಸಗೊಬ್ಬರಗಳ ಕೃತಕ ಅಭಾವ ಆಗದಂತೆ ಮುಂಜಾಗ್ರತೆ ಮತ್ತು ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಎಚ್ಚರಿಕೆ ವಹಿಸಲು ತಾಲೂಕುವಾರು ಕೃಷಿ ಅಧಿಕಾರಿಗಳ ವಿಚಕ್ಷಣ ಮತ್ತು ಪರಿವೀಕ್ಷಣೆ ದಳಗಳನ್ನು ರಚಿಸಿ, ಪ್ರತಿ ದಳಕ್ಕೆ 8 ರಿಂದ 10 ಅಂಗಡಿಗಳ ಗುರಿ ನೀಡಲಾಗಿದೆ. ಅಲ್ಲಿಗೆ ನಿರಂತರ ಭೇಟಿ ನೀಡಿ, ಬೀಜ, ರಸಗೊಬ್ಬರ ಕೊರತೆ ಆಗದಂತೆ ಮತ್ತು ನಕಲಿ ಬೀಜ, ಗೊಬ್ಬರದ ಬಗ್ಗೆ ಕಟ್ಟೆಚ್ಚರ ವಹಿಸಲು ನಿರ್ದೇಶಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬೇವು ಲೇಪಿತ ಯೂರಿಯಾ ರಸಗೊಬ್ಬರ ಲಭ್ಯವಿದೆ. ಇದರಲ್ಲಿ ಸಣ್ಣಕಾಳು ಮತ್ತು ದಪ್ಪಕಾಳು ಎಂದು ಎರಡು ಮಾದರಿ ಇದೆ. ಎರಡರಲ್ಲೂ ಸಾರಜನಕ ಪೋಷಕಾಂಶಕ ಶೇ.46 ರಷ್ಟಿದೆ. ದಪ್ಪಕಾಳಿನ ಯೂರಿಯಾ ಗೊಬ್ಬರ ನಿಧಾನವಾಗಿ ಭೂಮಿಯಲ್ಲಿ ಕರಗುವದರಿಂದ ಬೆಳೆಗಳಿಗೆ ಉತ್ತಮ ಪೋಷಕಾಂಶ ಸಿಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಡು ರೈತರಿಗೆ ಶಿಪಾರಸ್ಸು ಮಾಡಿದ್ದಾರೆ. ಲಭ್ಯತೆಯ ಆಧಾರದಲ್ಲಿ ದಪ್ಪ ಕಾಳು ಅಥವಾ ಸಣ್ಣ ಕಾಳು ಯೂರಿಯಾವನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಂದೇ ರೀತಿ ಉಪಯೋಗಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ಎಲ್ಲ ಕಂಪನಿಗಳ ಯೂರಿಯಾದಲ್ಲಿ ಸಾರಜನಕ ಪೋಷಕಾಂಶ ಶೇ.46 ರಷ್ಟು ಇರುವುದರಿಂದ ಒಂದೇ ಸಂಸ್ಥೆಯ ಗೊಬ್ಬರಕ್ಕಾಗಿ ರೈತರು ಒತ್ತಾಯಿಸದೇ ಲಭ್ಯವಿರುವ ಸಂಸ್ಥೆಯ ಯೂರಿಯಾ, ಎಇಎಪಿ ಬಳಸಬೇಕು. ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ಪಿ.ಓ.ಎಸ್. ಯಂತ್ರಗಳ ಮೂಲಕವೇ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತದೆ. ರೈತರು ಆಧಾರ್ ವಿವರ ನೀಡಿ, ಗೊಬ್ಬರ ಖರೀದಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಬಿತ್ತನೆಗೆ ಅನುಕೂಲವಾಗುವಷ್ಡು ಮಳೆ ಆದ ತಕ್ಷಣ ರೈತರು ಬೀಜ, ಗೊಬ್ಬರ ಖರೀದಿಸಲು ಒಮ್ಮೆಲೆ ಸೇರುತ್ತಾರೆ ಮತ್ತು ಒಂದೇ ಅಂಗಡಿಗೆ ಬರುತ್ತಾರೆ. ದಯವಿಟ್ಟು ಆ ರೀತಿ ಮಾಡದೇ ರೈತ ಬಾಂಧವರು ತಮಗೆ ಅನಕೂಲವಿದ್ದಲ್ಲಿ ಮುಂಚಿತವಾಗಿ ಖರೀದಿಸಬಹುದು ಅಥವಾ ಬಿತ್ತನೆಗೆ ಅಗತ್ಯವಾದಷ್ಟು ಮಳೆ ಸುರಿದ ತಕ್ಷಣ ತಮ್ಮ ಜಮೀನು ವ್ಯಾಪ್ತಿಯಲ್ಲಿ ಬರುವ ರೈತ ಸಂಪರ್ಕ ಕೇಂದ್ರದಲ್ಲಿ ಮತ್ತು ತಮಗೆ ಸಮೀಪದ ಮಾರಾಟಗಾರರಲ್ಲಿ ರಸಗೊಬ್ಬರ, ಬೀಜ ಖರೀದಿಸಬೇಕು ಎಂದು ಮನವಿ ಮಾಡಲಾಗಿದೆ. ಜಿಲ್ಲೆಯ ಬೀಜಗಳ ಕೊರತೆ ಆಗದಂತೆ ಮತ್ತು ರೈತರಿಗೆ ಎಲ್ಲಡೆ ಲಭ್ಯವಾಗುವಂತೆ 14 ರೈತ ಸಂಪರ್ಕ ಕೇಂದ್ರಗಳಲ್ಲಿ, 17 ಉಪ ಮಾರಾಟ ಕೇಂದ್ರಗಳಲ್ಲಿ, ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೀಜಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications