ಮುಂಗಾರು ಮಳೆ ಅಬ್ಬರ; ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು
ಬೆಂಗಳೂರು, ಜುಲೈ 27; ಧಾರವಾಡ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆಯು ಅಬ್ಬರಿಸುತ್ತಿದೆ. ಈ ಹಿನ್ನಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ರೈತರು ಬೆಳೆ ನಿರ್ವಹಣೆಗಾಗಿ ಸೂಕ್ತ ಉಪಕ್ರಮ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಒಂದು ಕಡೆ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗೆ ಅನುಕೂಲಾಗಿದೆ. ಮತ್ತೊಂದು ಕಡೆ ರೈತರು ಬಿತ್ತನೆ ಮಾಡಿದ್ದ ಬೆಳೆಗಳ ಹಾನಿಗೆ ಕಾರಣವಾಗಿದೆ. ಹೆಸರು, ಅಲಸಂದಿ, ಸೋಯಾಅವರೆ, ಗೋವಿನ ಜೋಳ, ಶೇಂಗಾ ಮುಂತಾದ ಬೆಳೆಗಳಿಗೆ ಅನುಕೂಲವಾಗಿರುವುದು ಕಂಡುಬಂದಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ಅತಿಯಾದ ತೇವಾಂಶ ಉಂಟಾಗಿ, ಸೂರ್ಯಪ್ರಕಾಶ ಬೆಳೆಗಳಿಗೆ ತಾಗದೇ ಇರುವುದರಿಂದ ಮೊದಲು ಬಿತ್ತನೆಯಾದ ಸೋಯಾಬಿನ್, ಹೆಸರು, ಉದ್ದು ಇತ್ಯಾದಿ ಬೆಳಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ.

ರೈತರಿಗೆ ಸಲಹೆಗಳು; ಹೊಲದ ಒಡ್ಡುಗಳಲ್ಲಿ ನಿಂತಿರುವ ಹೆಚ್ಚುವರಿ ನೀರನ್ನು ಹರಿ ಮಾಡುವುದರ ಮೂಲಕ ಹೊರ ಹಾಕಲು ಪ್ರಯತ್ನ ಮಾಡಬೇಕು. ಈಗಾಗಲೇ ಭೂಮಿಯು ಗರಿಷ್ಟ ಪ್ರಮಾಣದ ತೇವಾಂಶವನ್ನು ಹಿಡಿದಿಟ್ಟುಕೊಂಡಿದ್ದು, ಹೆಚ್ಚುವರಿಯಾಗಿ ಬಿದ್ದ ಮಳೆಯ ನೀರನ್ನು ಹೊಲದಿಂದ ಹೊರಕ್ಕೆ ಕಳಿಸುವುದು ಸೂಕ್ತವಾಗಿದೆ ಎಂದು ರೈತರಿಗೆ ಸಲಹೆ ನೀಡಲಾಗಿದೆ.
ಮಳೆ ಕಡಿಮೆಯಾದ ನಂತರ ಹೆಸರು, ಉದ್ದು, ಅಲಸಂದಿ, ಸೋಯಾಬಿನ್ ಇತ್ಯಾದಿ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿದ್ದಲ್ಲಿ ಎಲೆಗಳ ಮೂಲಕ ಪೋಷಕಾಂಶಗಳನ್ನು ಒದಗಿಸುವುದು ಒಳ್ಳೆಯದು. ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 17:44:00 ಅಥವಾ 0:00:50 ಅಥವಾ 13:00:45 ಅಥವಾ 00:52:34 ಅಥವಾ 18:18:18:61 ಅಥವಾ 19:19:19 ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ. ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು.
ಕನಿಷ್ಟ 200 ಲೀ. ಸಿಂಪರಣಾ ದ್ರಾವಣ ಪ್ರತಿ ಎಕರೆಗೆ ಬೇಕಾಗುತ್ತದೆ. ಗೊಬ್ಬರಗಳನ್ನು ನೇರವಾಗಿ ಸಿಂಪರಣಾ ಯಂತ್ರಕ್ಕೆ ಹಾಕದೇ ಹೊರಗೆ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಹಳದಿ ನಂಜಾಣು ಬಾಧಿತ ಸಸಿಗಳನ್ನು ಕಿತ್ತು ಕೈಯಲ್ಲಿ ಹಿಡಿದುಕೊಂಡು ಹೊಲದಲ್ಲಿ ತಿರುಗಾಡಬಾರದು. ಇದೊಂದು ರಸ ಹೀರುವ ಬಿಳಿ ನೊಣದ ಮೂಲಕ ಹರಡುವ ರೋಗವಾಗಿದ್ದು, ರೋಗವಾಹಕ ಕೀಟಗಳು ಎಲ್ಲೆಡೆ ಪಸರಿಸುವ ಸಾಧ್ಯತೆ ಇರುತ್ತದೆ. ಬಾಧಿತ ಸಸಿಗಳನ್ನು ಕಿತ್ತು ಹೊಲದಿಂದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು. ಇಲ್ಲವೇ ಮಣ್ಣಿನಲ್ಲಿ ಗುಂಡಿ ತೋಡಿ ಹೂಳಬೇಕು. ರಾಸಾಯನಿಕ ಉಪಕ್ರಮವಾಗಿ ಪ್ರತಿ ಲೀ. ನೀರಿಗೆ 0.3 ಗ್ರಾಂ. ಅಸಿಟಾಮಾಪ್ರಿಡ್ ಅಥವಾ 0.5 ಗ್ರಾಂ. ಥಯೋಮೆಥಾಕ್ಸಾಮ್ ಅಥವಾ 2 ಮಿ.ಲೀ ಪ್ರೊರಫೆನಫಾಸ್ ಕೀಟನಾಶಕವನ್ನು ಬೆರೆಸಿ ಸಿಂಪರಣೆ ಕೈಗೊಳ್ಳಬೇಕು.
ಗೋವಿನ ಜೋಳ; ಗೋವಿನ ಜೋಳ ಬೆಳೆಯಲ್ಲಿ ಚುಕ್ಕೆ ಲದ್ದಿ ಹುಳುವಿನ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 1 ಗ್ರಾಂ. ನ್ಯುಮೋರಿಯಾ ರಿಲೈ ಜೈವಿಕ ಪೀಡೆನಾಶಕವನ್ನು ಬೆರೆಸಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕು ಅಥವಾ 0.2 ಗ್ರಾಂ. ಇಮಾಮೆಕ್ಟಿನ್ ಬೆಂಝೋಯೇಟ್ ಅಥವಾ 0.5 ಮಿ.ಲೀ ಸ್ಪೈನೋಟಿರ್ಯಾಮ್ ಅಥವಾ 0.2 ಮಿ.ಲೀ. ಕ್ಲೋಯಾರ್ಂಟ್ರಿನಿಲಿ ಪ್ರೊರೀಲ್ ಕೀಟನಾಶಕವನ್ನು ಸುಳಿಗೆ ಬೀಳುವಂತೆ ಸಿಂಪಡಿಸುವುದು ಸೂಕ್ತ. ಒಂದೊಂದೇ ಸಾಲು ಹಿಡಿದು ಸಿಂಪರಣೆ ಮಾಡಿದಲ್ಲಿ ಕೀಟದ ನಿರ್ವಹಣೆಯು ಹೆಚ್ಚು ಪರಿಣಾಮಕಾರಿ.
ಗೋವಿನಜೋಳದ ಬೆಳೆಯು ಹಳದಿಯಾದಲ್ಲಿ ಪ್ರತಿ ಲೀಟರ್ ನೀರಿಗೆ 4 ಮಿ.ಲೀ. ನೀರಿನಲ್ಲಿ ಕರಗುವ ನ್ಯಾನೋ ಯೂರಿಯಾವನ್ನು ಬೆರೆಸಿ ಸಾರಜನಕ ಪೋಷಕಾಂಶವನ್ನು ಎಲೆಗಳ ಮೂಲಕ ಒದಗಿಸಬಹುದು. ಹದ ಬಂದ ಕೂಡಲೇ ಎಡೆಕುಂಟೆ ಹೊಡೆಯಲು ಪ್ರಥಮ ಆದ್ಯತೆ ನೀಡಬೇಕು. ಕಳೆನಾಶಕ ಬಳಸುವುದಾದಲ್ಲಿ ಸಮೀಪದ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ತಜ್ಞರ ಮಾಹಿತಿ ಪಡೆದು ಕಳೆನಾಶಕ ಬಳಸಬೇಕೆಂದು ಸೂಚನೆ ನೀಡಲಾಗಿದೆ.
ಕಬ್ಬು ಬೆಳೆಗೆ ಸಲಹೆಗಳು; ಕಬ್ಬು ಬೆಳೆಯಲ್ಲಿ ತುಕ್ಕು ರೋಗದ ಬಾಧೆ ಕಂಡು ಬಂದಿದೆ. ಈ ರೋಗವನ್ನು ನಿಯಂತ್ರಿಸಲು ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು. ರಾಸಾಯನಿಕ ಗೊಬ್ಬರಗಳ ಅದರಲ್ಲೂ ಸಾರಜನಕಯುಕ್ತ ರಸಗೊಬ್ಬರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ರಾಸಾಯನಿಕ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಹೆಕ್ಸಾಕೋನಾಝೋಲ್ ಅಥವಾ 1 ಮಿ.ಲೀ. ಪ್ರೊರಪಿಕೋನಾಝೋಲ್ ಅಥವಾ 1 ಮಿ.ಲೀ. ಟೆಬ್ಯುಕೋನಾಝೋಲ್ ಅಥವಾ 0.5 ಗ್ರಾಂ, ಟೆಬ್ಯುಕೋನಾಝೋಲ್ + ಟ್ರಿಫ್ಲಾಕ್ಸಿಸ್ಟ್ರೋಬಿನ್ (ನೇಟಿವೋ) ಇವುಗಳಲ್ಲಿ ಯಾವುದಾದರೂ ಒಂದನ್ನು ಸಂಯುಕ್ತ ಶಿಲೀಂದ್ರನಾಶಕವನ್ನು ಸಿಂಪರಣಿ ಮಾಡಬೇಕು.












Click it and Unblock the Notifications