ಮುಂಗಾರು ಚುರುಕು: ಭತ್ತ ನಾಟಿ ಕಾರ್ಯದಲ್ಲಿ ತೊಡಗಿದ ಮಲೆನಾಡಿಗರು, ಇನ್ನೂ ರೈತ ಮಹಿಳೆಯರ ಬಾಯಲ್ಲಿ ಜಾನಪದ ಗೀತೆಗಳು ಶುರು
ಚಿಕ್ಕಮಗಳೂರು, ಜುಲೈ, 17: ಉತ್ತಮ ಮಳೆಯಾದ ಹಿನ್ನೆಲೆ ಚಿಕ್ಕಮಗಳೂರು ರೈತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.
ಮಲೆನಾಡಿನಲ್ಲಿ ಉತ್ತಮವಾಗಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಹೊಲ ಗೆದ್ದಗಳತ್ತ ಮುಖ ಮಾಡಿದ್ದು, ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತಿದೆ. ಸಾಂಪ್ರದಾಯಿಕ ಬೇಸಾಯ ಪದ್ದತಿಗೆ ಗುಡ್ ಬೈ ಹೇಳಿ ಆಧುನಿಕ ಉಪಕರಣಗಳನ್ನು ಬಳಸಿ ಗೆದ್ದಯನ್ನು ಹದಗೊಳಿಸಿದ್ದಾರೆ. ನಂತರ ಮಹಿಳೆಯರು ಜನಪದ ಗೀತೆಗಳನ್ನು ಹೇಳಿಕೊಂಡು ಭತ್ತದ ಸಸಿಗಳನ್ನು ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈಗಾಲೇ ಚಿಕ್ಕಮಗಳೂರು ಜಿಲ್ಲೆಯ ಅಲ್ಲದೆ ಬೇರೆ ಹಲವೆಡೆ ಬಿತ್ತನೆ ಕಾರ್ಯಗಳು ಶುರುವಾಗಿದೆ. ಇನ್ನು ಕೆಲವೆಡೆ ಮಳೆಯೇ ಇಲ್ಲದಂತಾಗಿದ್ದು, ರೈತರು ತಂದಂತಹ ಬೀಜ, ಗೊಬ್ಬರಗಳನ್ನು ತಂದು ಮನೆಯಲ್ಲೇ ಇಟ್ಟುಕೊಂಡು ಚಿಂತೆ ಮಾಡುತ್ತಿದ್ದಾರೆ. ಬಿತ್ತನೆಗೆ ಮಳೆ ಯಾವಾಗ ಬರುತ್ತದೆಯೋ ಎಂದು ಮೋಡದತ್ತ ಮುಖ ಮಾಡಿ ಕುಳಿತಿದ್ದಾರೆ.
ಟೊಮೆಟೋಗೆ ಭಾರೀ ಬೇಡಿಕೆ
ಅದರಲ್ಲೂ ಈ ಬಾರಿ ಟೊಮೆಟೋ ಬೆಳೆಗೆ ಭಾರೀ ಬೆಲೆ ಬಂದಿದೆ. ದಿನದಿಂದ ದಿನಕ್ಕೆ ಟೊಮೆಟೋ ದರ ಏರಿಕೆಯಗುತ್ತಿದ್ದು, ಈ ಬೆಳೆಯನ್ನು ಬೆಳಗಾರರ ಮುಖದಲ್ಲಿ ಮಂದಹಾಸ ತುಂಬಿ ತುಳಿಕಾಡುತ್ತಿದೆ. ಮತ್ತೊಂದೆಡೆ ಈ ಬೆಳೆಯನ್ನು ಕಳ್ಳರ ಕಾಟದಿಂದ ರಕ್ಷಿಸಿಕೊಳ್ಳಯವುದೇ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಟೊಮೆಟೋಗೆ ಈ ಬಾರಿ ಚಿನ್ನದ ಬೆಲೆ ಬಂದಂತಾಗಿದೆ. ದರ ಗಗನಕ್ಕೇರಿರುವುದರಿಂದ ಬೆಳೆ ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಕಳ್ಳರ ಕಾಟದಿಂದ ಹಗಲು ರಾತ್ರಿ ಟೊಮೆಟೋ ಬೆಳೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೋಲಾರದಷ್ಟೇ ದಾವಣಗೆರೆ ಜಿಲ್ಲೆಯ ಟೊಮೆಟೋ ನೇಪಾಳದವರೆಗೂ ರಫ್ತಾಗುತ್ತಿದ್ದು, ಬೇಡಿಕೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ರೈತರ ಮೊಗದಲ್ಲಿ ಲಾಭದ ಖುಷಿ ಇದ್ದರೆ, ಬೆಳೆ ಉಳಿಸಿಕೊಳ್ಳುವ ಸವಾಲು ಮತ್ತೊಂದೆಡೆ ಕಾಡತೊಡಗಿದೆ.
ಹೀಗೆ ಜಿಲ್ಲೆಯ ಟೊಮೆಟೋಗೆ ಭಾರೀ ಬೇಡಿಕೆ ಬಂದಿದ್ದು, ರೈತರಿಗೆ ಬೆಳೆಯ ರಕ್ಷಣೆ ಮಾಡುವುದೇ ಇದೀಗ ದೊಡ್ಡ ತಲೆನೋವಾಗಿದೆ. ಹಾಗಾದರೆ ಜಮೀನುಗಳ ಬಳಿ ಕಾವಾಲು ಹೇಗಿದೆ ಎನ್ನುವುದನ್ನು ಇಲ್ಲಿ ಗಮನಿಸಿ. ದಿನ ಕಳೆದಂತೆ ಟೊಮೊಟೋ ದರ ಹೆಚ್ಚಾಗುತ್ತಲೇ ಇದೆ. ಯಾವಾಗ ಒಂದು ಕೆ.ಜಿ.ಗೆ ನೂರು ರೂಪಾಯಿ ದಾಟಿತೋ ಆಗಿನಿಂದಲೇ ಬೆಳೆದ ಬೆಳೆ ರಕ್ಷಣೆ ಮಾಡೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಜಮೀನಿನಲ್ಲಿ ದೊಣ್ಣೆ ಹಿಡಿದುಕೊಂಡು ರೈತರು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕಳ್ಳರಿಂದ ಟೊಮಾಟೋ ರಕ್ಷಣೆಗೆ ರೈತರು ಹೊಸ ಯೋಜನೆ ರೂಪಿಸಿಕೊಂಡಿದ್ದಾರೆ. ರಾತ್ರಿ ಹಗಲು ಟೊಮೆಟೋ ಬೆಳೆಯ ಹೊಲ ಕಾಯುತ್ತಿರುವ ರೈತರು ಕಳ್ಳರ ಹಾವಳಿ ತಡೆಗೆ ಹರಸಾಹಸಪಡುವಂತಾಗಿದೆ.
ಟೊಮೆಟೋಗೆ ಬಂಪರ್ ದರ ಸಿಕ್ಕಿರುವುದರಿಂದ ಹೊಲಗಳಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈತರು ದೊಣ್ಣೆ, ಕೋಲುಗಳನ್ನು ಹಿಡಿದು ಜಮೀನು ಸುತ್ತು ಹಾಕುತ್ತಿದ್ದಾರೆ. ಅಪರಿಚಿತರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಲು ಪ್ರಾರಂಭಿಸಿದ್ದಾರೆ.
ಇಪ್ಪತ್ತನ್ನಾಲ್ಕು ಗಂಟೆಗಳ ಕಾಲ ಕಣ್ಗಾವಲು ಇದ್ದರೂ ಕೂಡ ಕೆಲ ಖತರ್ನಾಕ್ ಖದೀಮರು ಟೊಮೆಟೋ ಕದ್ದೊಯ್ಯುತ್ತಿದ್ದಾರೆ. ನಾವು ಎಷ್ಟೇ ಜಾಗೃತಿ ವಹಿಸಿದರೂ ಹೇಗೋ ಕದ್ದು ಪರಾರಿಯಾಗುತ್ತಿದ್ದಾರೆ ಎನ್ನುತ್ತಾರೆ ರೈತರು. ದಾವಣಗೆರೆ ತಾಲೂಕಿನಲ್ಲಿ ಟೊಮೆಟೋ ಬೆಳೆದ ರೈತರಿಗೆ ಪ್ರತಿದಿನ ಜಾಗರಣೆ ಮಾಡುವಂತಾಗಿದೆ. ಕೆಲವರಂತೂ ಹೊಲದಲ್ಲಿ ಟೆಂಟ್ ಹಾಕಿಕೊಂಡು ಕಾವಲಿಗೆ ನಾಯಿಗಳನ್ನು ಬಳಕೆ ಮಾಡುತ್ತಿದ್ದಾರೆ.
ಪ್ರತಿ ಬಾಕ್ಸ್ ಟೊಮೆಟೋಗೆ 1800ರಿಂದ 2000 ರೂಪಾಯಿ ದರ ಸಿಕ್ಕಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದಂತಾಗಿದೆ. ದಾವಣಗೆರೆಯಿಂದ ನೇಪಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ತಮಿಳುನಾಡಿಗೆ ಟೊಮೆಟೋ ಕಳುಹಿಸಿಕೊಡಲಾಗುತ್ತದೆ. ಅಲ್ಲಿಯೂ ಭಾರೀ ಬೇಡಿಕೆ ಇದೆ. ದರವೂ ಹೆಚ್ಚಾಗಿದೆ. ಕಳೆದ ಎರಡರಿಂದ ಮೂರು ವರ್ಷ ಬೆಳೆಗೆ ದರವೇ ಸಿಕ್ಕಿರಲಿಲ್ಲ. ತುಂಬಾ ನಷ್ಟ ಅನುಭವಿಸಿದ್ದೆವು. ಈ ಬಾರಿ ಉತ್ತಮ ಧಾರಣೆ ಇರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಇಲ್ಲಿನ ಬೆಳೆಗಾರರು.












Click it and Unblock the Notifications