ಮಳೆ-ಬರ : ತ್ರಿಶಂಕು ಸ್ಥಿತಿಯಲ್ಲಿ ಚನ್ನಪಟ್ಟಣದ ರೈತರು
ಚನ್ನಪಟ್ಟಣ, ಸೆ. 7 : ಅವಾಗಾವಾಗ ಮಳೆಯಾಗುತ್ತಲೇ ಇದೆ, ಆದರೆ ಕೆರೆಗಳಲ್ಲಿ ಮಾತ್ರ ನೀರು ಸಂಗ್ರಹಣೆಯಾಗಿಲ್ಲ. ಮಳೆ ಬೀಳುವುದನ್ನು ನೋಡಿ ರೈತ ಸಮುದಾಯ ಸಂತಸದಿಂದಲೇ ಇದೆ. ಆದರೂ ಭವಿಷ್ಯದ ಬೆಳೆಯ ಬಗ್ಗೆ ಚಿಂತಾಕ್ರಾಂತವಾಗಿದೆ. ಇದು ತಾಲೂಕಿನ ಸಧ್ಯದ ಸ್ಥಿತಿ.
ಕಳೆದ ಐದಾರು ವರ್ಷಗಳಿಂದ ಅತ್ತ ಬರವೂ ಅಲ್ಲದೆ, ಇತ್ತ ಮಳೆಯೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಕಾಲ ದೂಡುತ್ತಿರುವ ತಾಲೂಕಿನ ರೈತರು ಈ ವರ್ಷವೂ ಸಹ ಇಂಥದೇ ಪರಿಸ್ಥಿತಿಯತ್ತ ಸಾಗುತ್ತಿದ್ದಾರೆ. ಕಳೆದ ಕೆಲವಾರು ವರ್ಷಗಳಿಂದ ತಾಲೂಕಿನ ಜೀವನಾಡಿ ಕಣ್ವ ಜಲಾಶಯ ಸೇರಿದಂತೆ ತಾಲೂಕಿನ ಯಾವುದೊಂದು ಕೆರೆಯೂ ಭರ್ತಿಯಾಗದೆ ತಾಲೂಕಿನ ಜನತೆ ಪರಿತಪಿಸುತ್ತಿದ್ದು, ಈ ಬಾರಿಯೂ ಇಂಥದೇ ಪರಿಸ್ಥಿತಿ ಮುಂದುವರೆಯುವುದರಲ್ಲಿ ಅನುಮಾನವಿಲ್ಲ ಎಂಬಂತಾಗಿದೆ.
ಆಗಸ್ಟ್ ಅಂತ್ಯದ ವೇಳೆಗೆ ತಾಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆಯಾದರೂ ಕೆರೆಕಟ್ಟೆಗಳು ಮಾತ್ರ ಖಾಲಿಯಾಗಿಯೇ ಇವೆ. ರೈತ ಸಮುದಾಯ ಮಾತ್ರ ಮುಂದೆಯಾದರೂ ಮಳೆರಾಯ ಕರುಣೆ ತೋರಬಹುದು ಎಂಬ ಆಶಾವಾದದಲ್ಲಿಯೇ ಇದೆ.
ಈಗಾಗಲೇ ತಾಲೂಕಿನಲ್ಲಿ ಶೇ.75ಕ್ಕಿಂತ ಅಧಿಕ ಪ್ರದೇಶದಲ್ಲಿ ರೈತ ಸಮುದಾಯ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದು, ಮಳೆರಾಯನೂ ಸಹ ಅವಾಗಾವಾಗ ಸ್ಪಂದನೆ ನೀಡುತ್ತಿದ್ದಾನೆ. ಅಲ್ಪಸ್ವಲ್ಪ ಅಡೆತಡೆಗಳ ನಡುವೆಯೂ ರೈತ ಸಮುದಾಯ ಬಿತ್ತನೆ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಇನ್ನೇನಿದ್ದರೂ ಬೆಳೆಯ ಬೆಳವಣಿಗೆಯ ಹಂತದಲ್ಲಿ ಮಳೆರಾಯ ಕರುಣೆ ತೋರಬೇಕಿದ್ದು, ರೈತ ಸಮುದಾಯವೂ ಸಹ ವರುಣನ ಕೃಪೆಯನ್ನು ಎದುರುನೋಡುತ್ತಿದೆ.
ಮಳೆಯಾಧಾರಿತ ಬೆಳೆಗಳಿಗೆ ವರುಣರಾಯ ಆವಾಗವಾಗ ಕರುಣೆ ತೋರಿದರೂ, ಆ ಬೆಳೆಗಳ ಬೆಳವಣಿಗೆಗೆ ಪೂರಕ ವಾತಾವರಣ ದೊರೆಯುತ್ತಿದೆಯಾದರೂ ನೀರನ್ನೇ ನಂಬಿ ಬೆಳೆಯುವ ಭತ್ತದ ಬೆಳೆಯ ಬಗ್ಗೆ ರೈತರು ಚಿಂತಾಕ್ರಾಂತರಾಗಿದ್ದಾರೆ. ಸ್ವಂತ ಕೊಳವೆ ಬಾವಿ ಹೊಂದಿರುವ ರೈತರು ಅಲ್ಪಸ್ವಲ್ಪ ನೀರು ಹಾಯಿಸಿ, ಭತ್ತ ಬೆಳೆಯಲು ಪರಿಶ್ರಮ ಪಡಬಹುದಾದರೂ ಕೆರೆಕಟ್ಟೆಗಳಲ್ಲಿ ಸಂಗ್ರಹವಾಗುವ ನೀರನ್ನು ನಂಬಿರುವ ರೈತರು ಸಧ್ಯದ ಪರಿಸ್ಥಿತಿಯಲ್ಲಿ ಪರಿತಾಪ ಎದುರಿಸುವಂತಾಗಿದೆ.
ಇನ್ನು ಕೊಳೆವೆ ಬಾವಿ ನಂಬಿ ವ್ಯವಸಾಯ ಮಾಡುತ್ತಿದ್ದ ರೈತರೂ ಸಹ ಮಳೆಯಿಲ್ಲದೆ ಕೆರೆಕಟ್ಟೆಗಳಿಗೆ ನೀರಿಲ್ಲದೆ ಅಂತರ್ಜಲ ಕುಸಿಯುತ್ತಿರುವ ಕಾರಣ ಅವರೂ ಸಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇದಲ್ಲದೆ ವಿದ್ಯುತ್ತಿನ ಕಣ್ಣಾಮುಚ್ಚಾಲೆ ಸಹ ರೈತರ ನಿದ್ದೆಕೆಡಿಸುತ್ತಿದೆ.
ಕೆರೆ ಕಟ್ಟೆಗಳ ಬಣಗುಡುವಿಕೆಯಿಂದ ಜನಗಳಲ್ಲದೆ ಜಾನುವಾರುಗಳೂ ಸಹ ಸಮಸ್ಯೆ ಎದುರಿಸುವಂತಾಗಿದೆ ಮುಂದಾದರೂ ವರುಣ ಕೃಪೆ ತೋರಿ ಕೆರೆ ಕಟ್ಟೆಗಳಲ್ಲಿ ಎಲ್ಲಿ ನೋಡಿದರಲ್ಲಿ ಕಣಕಣವೂ ನೀರಾಗಲಿ ಎಂಬ ನಿರೀಕ್ಷೆಯೊಂದಿಗೆ ತಾಲೂಕು ಕಾಯುತ್ತಿದ್ದು, ರೈತರ ಆಸೆ ಈಡೇರಲು ಮಳೆರಾಯ ಕರುಣೆ ತೋರುವನೇ ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications