ರಾಯಚೂರು: ಜೋಳ ಮಾರಿ 2 ತಿಂಗಳಾದರೂ ರೈತರ ಖಾತೆಗೆ ಜಮೆ ಆಗದ ಹಣ, ಆತಂಕ
ರಾಯಚೂರು, ಜೂನ್, 14: ಜಿಲ್ಲೆಯ ರೈತರು ಕಷ್ಟಪಟ್ಟು ಜೋಳ ಬೆಳೆದು ಸರ್ಕಾರದ ಖರೀದಿ ಕೇಂದ್ರಗಳಿಗೆ ಮಾರಿ ಎರಡು ತಿಂಗಳು ಕಳೆದರೂ ಇನ್ನೂ ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಹೀಗಾಗಿ ರೈತರು ನಿತ್ಯವೂ ಖರೀದಿ ಕೇಂದ್ರಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ತಿಂಗಳ ಹಿಂದೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಖರೀದಿಸಲಾಗಿತ್ತು. ಆದರೆ ಇದರುವರೆಗೂ ಹಣ ಸಂದಾಯವಾಗದೇ ರೈತರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿರುವುದು ಕಂಡುಬಂದಿದೆ. ರೈತರಿಗೆ ಜೋಳ ಬೆಳೆಯಲು ಉತ್ತೇಜಿಸಿ ಬೆಂಬಲ ಬೆಲೆ ಯೋಜನೆಡಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಸರ್ಕಾರ ಪ್ರತೀ ವರ್ಷ ಜೋಳ ಖರೀದಿ ಮಾಡುತ್ತಿದೆ.

ಆದರೆ ಈ ಬಾರಿ ಜೋಳ ಖರೀದಿ ಹಣವನ್ನು ರೈತರ ಖಾತೆಗೆ ಜಮೆ ಮಾಡದೇ ಇರುವುದರಿಂದ ರೈತರ ಬದುಕು ಇಕ್ಕಟ್ಟಿಗೆ ಸಿಲುಕಿದೆ. ಜಿಲ್ಲೆಯ ಮೂರು ತಾಲೂಕಿನಲ್ಲಿ ಈ ಬಾರಿ ಸುಮಾರು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಜೋಳ ಬೆಳೆದಿದ್ದು, ಸರ್ಕಾರ ರೈತರ ನೆರವಿಗೆ ಬರಲು ಕ್ವಿಂಟಾಲ್‌ಗೆ 2,930 ರೂಪಾಯಿ ದರ ನಿಗದಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಜೋಳ ಖರೀದಿಸುವ ವ್ಯವಸ್ಥೆ ಮಾಡಿದೆ.
ಇದರಂತೆಯೇ ಜಿಲ್ಲೆಯ ಸಿಂಧನೂರು ತಾಲೂಕಿನ 17, ಮಾನ್ವಿ ತಾಲ್ಲೂಕಿನಲ್ಲಿ 8, ಲಿಂಗಸೂಗೂರು ತಾಲೂಕಿನಲ್ಲಿ 1 ಸೇರಿ ಒಟ್ಟು 26 ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಿದ್ದು, ಇಲ್ಲಿ ಜೋಳ ಖರೀದಿಸಲಾಗಿದೆ. ಜಿಲ್ಲೆಯಾದ್ಯಂತ ಸುಮಾರು 5.69 ಲಕ್ಷ ಕ್ವಿಂಟಾಲ್ ಬಿಳಿ ಜೋಳವನ್ನು ಸರ್ಕಾರ ಖರೀದಿ ಮಾಡಿದ್ದು, ಇದರಲ್ಲಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ 94 ಕೋಟಿ ಹಣ, ಚುನಾವಣೆ ನಂತರ 50 ಕೋಟಿ ಸೇರಿ ಒಟ್ಟು 144 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಆದರೆ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದೆ ಇರುವುದರಿಂದ ಜಿಲ್ಲೆಗೆ ಇನ್ನೂ 26 ಕೋಟಿ ರೂಪಾಯಿಗೂ ಹೆಚ್ಚು ಹಣ ಬಿಡುಗಡೆ ಬಾಕಿ ಇದೆ. 2023ರ ಮಾರ್ಚ್ 15ರವರೆಗೆ ಆನ್‌ಲೈನ್ ನೋಂದಣಿ ಮಾಡಿಸಿ ಜೋಳ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಿದೆ. ನಂತರ ಮಾರಾಟ ಮಾಡಿದ ರೈತರಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಜಿಲ್ಲೆಯ ರೈತರ ಬದುಕು ಅಡಕತ್ತರಿಗೆ ಸಿಲುಕಿದೆ.
ಮಧ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸುವ ಸಲುವಾಗಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಆದರೆ ಇದೀಗ ಜೋಳ ಮಾರಾಟ ಮಾಡಿ ಎರಡು ತಿಂಗಳು ಕಳೆದರೂ ಕೈಗೆ ಹಣ ಸಿಗದಿರುವುದರಿಂದ ರೈತರು ಕಂಗಲಾಗಿದ್ದಾರೆ. ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ರೈತರಿಗೆ ಹಣ ಸಂದಾಯವಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾರ್ಚ್ 15ರ ನಂತರ ಜೋಳ ಮಾರಿದ ರೈತರಿಗೆ ಹಣ ಸಂದಾಯವಾಗಿಲ್ಲ. ಬಹುತೇಕ ರೈತರು ಹಣಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಇವರೆಲ್ಲರೂ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಸರ್ಕಾರ ಇವರ ನೆರವಿಗೆ ಬರಬೇಕು. ಪ್ರಸ್ತುತ ಪೂರ್ವ ಮುಂಗಾರು ಆರಂಭಗೊಂಡಿದೆ. ಮುಂಗಾರು ಬೆಳೆಗಳಿಗೆ ಬೇಕಾದ ಬಿತ್ತನೆ ಬೀಜ ಖರೀದಿ ಉಳುಮೆ ಸೇರಿ ಇತರ ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯವಿದ್ದು, ಈ ಹಿನ್ನೆಲೆ ಸರ್ಕಾರ ಇತ್ತ ಗಮನಹರಿಸಬೇಕಿದೆ.
ಖರೀದಿ ಕೇಂದ್ರದಲ್ಲಿ ಜೋಳ ಮಾರಿದ ರೈತರಿಗೆ ಹಣ ಜಮೆಯಾಗಿದ್ದು, ಏಪ್ರಿಲ್ ತಿಂಗಳ ಅಂತ್ಯದಲ್ಲಿ ಜೋಳ ಮಾರಿದ ರೈತರಿಗೆ ಹಣ ಜಮೆಯಾಗಲು ತಡವಾಗಿದೆ. ಮತ್ತೊಂದೆಡೆ ಇನ್ನೆರಡು ವಾರದಲ್ಲಿ ಜೋಳ ಮಾರಿದ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ರಾಯಚೂರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಭಾರಿ ಉಪ ನಿರ್ದಶಕ ಕೃಷ್ಣಶಾವಂತಗೇರ ತಿಳಿಸಿದ್ದಾರೆ.
"ಸರ್ಕಾರದ ಜೋಳ ಖರೀದಿ ಕೇಂದ್ರದಲ್ಲಿ ಜೋಳ ಮಾರಿ ಎರಡು ತಿಂಗಳಿಗೂ ಹೆಚ್ಚು ದಿನಗಳಾಗಿದ್ದು, ಇನ್ನೂ ನನ್ನ ಖಾತೆಗೆ ಹಣ ಬಂದಿಲ್ಲ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಸರ್ಕಾರ ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು," ಎಂದು ರೈತ ಲಕ್ಷ್ಮಣ ಕಡಗಂದೊಡ್ಡಿ ಅವರು ಒತ್ತಾಯಿಸಿದರು.












Click it and Unblock the Notifications