ಸಾಣೇನಹಳ್ಳಿ: ವೃದ್ಧೆಯೊಬ್ಬರು 30 ವರ್ಷಗಳಿಂದ ಮಕ್ಕಳಂತೆ ಪೋಷಿಸಿದ್ದ ತೆಂಗಿನ ಮರಗಳನ್ನು ಮಾರಣಹೋಮ ಮಾಡಿದ ಕಿಡಿಗೇಡಿಗಳು
ಹಾಸನ, ಜೂನ್, 04: ವೃದ್ಧೆಯೊಬ್ಬರು ಮೂವತ್ತು ವರ್ಷಗಳಿಂದ ಬೆಳೆಸಿದ್ದ ಬೃಹತ್ ತೆಂಗಿನ ಮರಗಳನ್ನು ಕಿಡಿಗೇಡಿಗಳು ಕಡಿದುಹಾಕಿದ ಘಟನೆ ಹಾಸನ ಜಿಲ್ಲೆಯ ಸಾಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಣೇನಹಳ್ಳಿ ಗ್ರಾಮದಲ್ಲಿ ನಂಜಮ್ಮ ಎಂಬ ವೃದ್ಧೆ ಮೂವತ್ತು ವರ್ಷಗಳಿಂದ ಮಕ್ಕಳಂತೆ ಪೋಷಣೆ ಮಾಡಿದ್ದ ತೆಂಗಿನ ಮರಗಳನ್ನು ಕಿಡಿಗೇಡಿಳು ಮಾರಣಹೋಮ ಮಾಡಿದ್ದಾರೆ. ಇನ್ನು ತೆಂಗಿನ ಮರಗಳನ್ನು ಕಳೆದುಕೊಂಡ ವೃದ್ಧೆ ನಂಜಮ್ಮ ಕಣ್ಣೀರಿಟ್ಟಿದ್ದಾರೆ. ರಾಮಯ್ಯ ಹಾಗೂ ಮಂಜುನಾಥ್ ಎಂಬುವವರು ಈ ನೀಚ ಕೃತ್ಯವನ್ನು ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ತಮಗೆ ಸೇರಿರುವ ಮೂರು ಹೆಕ್ಟೇರ್ 36 ಗುಂಟೆ ಜಮೀನಿಲ್ಲಿ ಕಳೆದ 60 ವರ್ಷಗಳಿಂದ ನಂಜಮ್ಮ ಅವರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ನಂಜಮ್ಮ ಜಮೀನಿನ ಪಕ್ಕದಲ್ಲಿಯೇ ರಾಮಯ್ಯ, ಮಂಜುನಾಥ್ ಅವರ ಜಮೀನುಗಳು ಇವೆ. ಆದ್ದರಿಂದ ಈ ಜಾಗವನ್ನು ಒತ್ತುವರಿ ಮಾಡಿದ್ದು, ಈ ಬದು ತಮಗೆ ಸೇರಬೇಕು ಎಂದು ರಾಮಯ್ಯ ಮತ್ತು ಮಂಜುನಾಥ್ ತಕರಾರು ತೆಗೆದಿದ್ದರು. ಆಗ ಈ ಸಂಬಂಧ ನಂಜಮ್ಮ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಂತರ ಪೊಲೀಸರು ಸ್ಪಂದಿಸದಿದ್ದಾಗ ನಂಜಮ್ಮ ಎಸ್‌ಪಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ ಕಿಡಿಗೇಡಿಗಳು ಏಕಾಏಕಿ ಜೆಸಿಬಿ ಹಾಗೂ ಇತರೆ ಯಂತ್ರಗಳನ್ನು ಬಳಸಿ 30 ವರ್ಷದ 15 ತೆಂಗನ ಮರಗಳನ್ನು ಕಡಿದ ಹಾಕಿದ್ದಾರೆ. ಹೀಗೆ ಜೀವನಕ್ಕೆ ಆಧಾರವಾಗಿದ್ದ ತೆಂಗಿನ ಮರಗಳನ್ನು ಕಳೆದುಕೊಂಡು ವಯೋವೃದ್ದೆ ನಂಜಮ್ಮ ಕಣ್ಣೀರಿಡುತ್ತಿದ್ದಾರೆ.
ಸದ್ಯ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ರೈತನ ಬುದುಕನ್ನೇ ಕಿತ್ತುಕೊಂಡ ಬಿರುಗಾಳಿ
ಹಾಗೆಯೆ ಮುಂಗಾರು ಪೂರ್ವ ಮಳೆಯಿಂದ ಈಗಾಗಲೇ ರಾಜ್ಯದ ಹಲವೆಡೆ ಸಾಕಷ್ಟು ಅನಾಹುತಗಳೇ ಸಂಭವಿಸಿವೆ. ಅದೇ ರೀತಿ ಹುಬ್ಬಳ್ಳಿ ಜಿಲ್ಲೆಯ ಹಲವೆಡೆ ಭಾರೀ ಬಿರುಗಾಳಿ ಬೀಸಿದ್ದು, ಇದರಿಂದ ಮನೆ ಮೆಲ್ಛಾವಣಿಗಳು ಸೇರಿದಂತೆ ಕೃಷಿ ಬೆಳೆಗಳು ನಾಶವಾಗಿವೆ. ಹೀಗೆ ಬೆಳೆಗಳನ್ನು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ವರ್ಷವಿಡಿ ಬೆಳೆದ ಬಾಳಿ ಗಿಡಗಳು ಬಿರುಗಾಳಿ ರಬಸಕ್ಕೆ ನೆಲಸಮವಾದ ಘಟನೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ರೈತ ಅಪ್ಪಯ್ಯ ವಸ್ತ್ರದ ಎಂಬುವವರ ಹೊಲದಲ್ಲಿ ಸಂಜೆ ಹೊತ್ತಿಗೆ ಬೀಸಿದ ಬಿರುಗಾಳಿ ಹೊಡೆತಕ್ಕೆ ಬಾಳೆಗಿಡಗಳು ಸಂಪೂರ್ಣವಾಗಿ ನೆಲಸಮವಾಗಿ ಬಿಟ್ಟಿವೆ.
ಈ ಬಿರುಗಾರಿಯ ಹೊಡೆತಕ್ಕೆ ಸುಮಾರು ಒಂದೂವರೆ ಹೆಕ್ಟೇರ್ ಬಾಳೆ ಬೆಳೆ ನೆಲಕಚ್ಚಿಕೊಂಡುಬಿಟ್ಟಿದೆ. ವರ್ಷವಿಡೀ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬಾಳೆ ಬೆಳೆಯೂ ಇನ್ನೇನು ವಾರ ಕಳೆಯುವಷ್ಟರಲ್ಲಿಯೇ ಕಟಾವ್ ಮಾಡಬೇಕಿತ್ತು. ಅಲ್ಲದೆ ಇದರಿಂದ ಸಾಲ ಹರಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬದುಕಿಗೆ ಕೊಳ್ಳಿ ಇಟ್ಟಿದೆ. ಹೀಗೆ ಒಂದೇ ದಿನದಲ್ಲಿ ಭೂತದಂತೆ ಮುಳ್ಳಾಗಿ ಬಂದ ಬಿರುಗಾಳಿ ರೈತನ ಬದುಕನ್ನೇ ಕಿತ್ತುಕೊಂಡಿದೆ.
ಬಿರುಗಾಳಿ ಹೊಡೆತಕ್ಕೆ ಒಂದೂವರೆ ಹೆಕ್ಟೇರ್‌ನಲ್ಲಿ ಬೆಳೆದಿದ್ದ 500 ಬಾಳೆ ಗಿಡಗಳು ನೆಲಕಚ್ಚಿದ್ದು, ಅಂದಾಜು 5 ಲಕ್ಷ ರೂಪಾಯಿನಷ್ಟು ಹಾನಿ ಆಗಿದೆ. ಇದರಿಂದ ನೊಂದ ರೈತ ಕಣ್ಣೀರಿನಲ್ಲು ಕೈತೊಳೆಯುವಂತಾಗಿದೆ. ಆದ್ದರಿಂದ ತಾಲೂಕಿನ ದಂಡಾಧಿಕಾರಿಗಳು ಈ ರೈತನ ಗೋಳು ಆಲಿಸಿ ನೆರವಿಗೆ ಬರಬೇಕು ಎಂಬುದೇ ಜಿಲ್ಲೆಯ ಜನರ ಆಶಯವಾಗಿದೆ.












Click it and Unblock the Notifications