ರೈತರಿಗೆ ಸಿಹಿಸುದ್ದಿ: ಪ್ರತಿ ಜಿಲ್ಲೆಯಲ್ಲಿ ನಡೆಯಲಿದೆ ಸಿರಿಧಾನ್ಯ ಮೇಳ
ಬೆಂಗಳೂರು, ಜೂನ್ 25: ಕರ್ನಾಟಕ ಸರ್ಕಾರ ಸಿರಿಧಾನ್ಯ ಬಳಕೆ ಉತ್ತೇಜಿಸಲು, ಸಿರಿಧಾನ್ಯ ಬೆಳೆದ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಪ್ರತಿ ಜಿಲ್ಲೆಯಲ್ಲಿ ಸಿರಿಧಾನ್ಯ ಮೇಳವನ್ನು ಆಯೋಜನೆ ಮಾಡಲಿದೆ. ಈಗಾಗಲೇ ರಾಜ್ಯದಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿಕಾಸಸೌಧದ ಕಛೇರಿಯಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಫುಡ್‌ಪಾರ್ಕ್‌ಗಳ ಪುನಶ್ಚೇತನ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆಯಲ್ಲಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಇಲಾಖೆ ಸಹಭಾಗಿತ್ವದಲ್ಲಿ ರೈತರೊಂದಿಗೆ ಸಂಪರ್ಕಿಸುವ ಕುರಿತು ಸಭೆ ನಡೆಸಿದರು.

ಸಚಿವರು ಸಭೆಯಲ್ಲಿ ಕೃಷಿ ನವೋದ್ಯಮಗಳ ಸ್ಥಿತಿಗತಿ, ಅವುಗಳು ಎದುರಿಸುತ್ತಿರುವ ಸವಾಲುಗಳು, ಸಿರಿಧಾನ್ಯ ಆಧಾರಿತ ಉದ್ಯಮಗಳನ್ನು ಬಲಪಡಿಸಲು ಅಗತ್ಯ ಇರುವ ಸರ್ಕಾರದ ನೆರವನ್ನು ನೀಡುವ ಕುರಿತು ಉದ್ಯಮಿಗಳ ಅಭಿಪ್ರಾಯಗಳನ್ನು ಸಂಹಗ್ರಹಿಸಿದರು.
ಸಿರಿಧಾನ್ಯ ಮೇಳ: ಸಭೆಯಲ್ಲಿ ಮಾತನಾಡಿದ ಸಚಿವರು, ಸಿರಿಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆ ಇದೆ. ಹಾಗಾಗಿ ಪ್ರೋತ್ಸಾಹ ಧನ ಯೋಜನೆ ಮುಂದುವರೆಸುವ ಜೊತೆಗೆ ಉತ್ಪಾದನೆಯನ್ನು 30 ಸಾವಿರದಿಂದ 50 ಸಾವಿರ ಹೆಕ್ಟೇರ್‌ಗೆ ಏರಿಕೆ ಮಾಡಲು ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರೊಂದಿಗೆ ಉದ್ದಿಮೆದಾರರು ನೇರ ಖರೀದಿ ವ್ಯವಸ್ಥೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿ. ರಾಜ್ಯಾದ್ಯಂತ ಇರುವ ಎಫ್.ಪಿ.ಓ.ಗಳ ಜೊತೆ ಉದ್ದಿಮೆದಾರರ ಸಂಪರ್ಕ ಕಲ್ಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಪ್ರತಿ ಜಿಲ್ಲೆಯಲ್ಲೂ 2 ದಿನಗಳ ಸಿರಿಧಾನ್ಯ ಮೇಳ ಏರ್ಪಡಿಸುವ ಜೊತೆಗೆ ವಿದೇಶದಲ್ಲಿ ನಡೆಯುವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದಿಂದ ಮಳಿಗೆ ಹಾಕಲು ಸಹ ನೆರವು ಒದಗಿಸಲಾಗುವುದು ಎಂದರು.
ಪ್ರಸಕ್ತ ಮಿಲೆಟ್ ಪೌಡರ್‌ಗಳಿಗೆ ಜಿಎಸ್‌ಟಿಯನ್ನು ಶೇ 18 ರಿಂದ 5ಕ್ಕೆ ಇಳಿಕೆ ಮಾಡಿರುವಂತೆ ಇದನ್ನು ಇತರ ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳಿಗೂ ವಿಸ್ತರಿಸಬೇಕು ಎಂದು ಉದ್ಯಮಿಗಳು ಮನವಿ ಮಾಡಿದ್ದು ಈ ಬಗ್ಗೆ ಕೇಂದ್ರ ಸರ್ಕಾರರಕ್ಕೆ ಪೂರಕ ಪ್ರಸ್ತಾವನೆ ಕಳುಹಿಸುವುದರ ಕುರಿತು ಸಚಿವರು ಮಾತನಾಡಿದರು. ಮಿಲೆಟ್ ಆಹಾರ ಉತ್ಪಾದಕರಿಗೆ ತಂತ್ರಜ್ಞಾನ ವಿಸ್ತರಣೆ ಜೊತೆಗೆ ಧೀರ್ಘಾವದಿಗೆ ಆಹಾರ ಪದಾರ್ಥ ಸಂಸ್ಕರಣೆಗೆ ಸಿಎಫ್‌ಟಿಆರ್‌ಐ ಮೂಲಕ ನೆರವು ಒದಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕೃಷಿ ಇಲಾಖೆ ಮೂಲಕ ಶೀಘ್ರವೇ ಕೃಷಿ ನವೋದ್ಯಮಗಳು ಹಾಗೂ ಉತ್ಪಾದಕರು, ಪೂರೈಕೆದಾರರ ಸಂಪರ್ಕ ಬೆಸೆಯುವ ಕೆಲಸ ಮಾಡಲಾಗುವುದು ಜೊತೆಗೆ ಮಾರುಕಟ್ಟೆ ಉತ್ತೇಜನಕ್ಕೆ ಸರ್ಕಾರದ ನೆರವು ಸದಾ ಸಿಗಲಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಸಿರಿ ಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳಗಳ ಸಮೂಹ. ಇವುಗಳಿಗೆ ಸುಮಾರು 5 ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ. ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗುತ್ತಿವೆ. ಅತೀ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ, ಶುಷ್ಕ, ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯಬಹುದಾಗಿದೆ.
ನಾರು, ಕಬ್ಬಿಣಾಂಶ, ಕಾರ್ಬೊಹೈಡ್ರೆಟ್‍ಗಳು ಮತ್ತು ಕೊಬ್ಬಿನಾಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಇರುತ್ತದೆ. ಆದ್ದರಿಂದ ಇವು ಪೌಷ್ಠಿಕತೆಗಳ ಕಣಜಗಳೇ ಆಗಿವೆ. ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಇವು ಖಾತರಿಪಡಿಸುತ್ತವೆ.
ಪೌಷ್ಟಿಕಾಂಶಗಳ ಸಿರಿಯು ಈ ಧಾನ್ಯಗಳಲ್ಲಿ ಹೆಚ್ಚಾಗಿರುವುದರಿಂದ ಸಿರಿಧಾನ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿವೆ. ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿ ಧಾನ್ಯಗಳನ್ನು ಸ್ವಾಗತಿಸುತ್ತಿದ್ದಾರೆ. ಸಿರಿಧಾನ್ಯಗಳಿಂದ ತಯಾರಿಸಲಾದ ಅಡುಗೆಯ ಜೊತೆಗೆ ಚಕ್ಕುಲಿ, ಹಪ್ಪಳ, ಕೊಡಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ ಹೀಗೆ ಹಲವು ಸಿಹಿ ಮತ್ತು ಕುರುಕಲು ತಿಂಡಿಗಳಿಗೂ ಬೇಡಿಕೆ ಹೆಚ್ಚಿದೆ.












Click it and Unblock the Notifications