ಮಡಿಕೇರಿ; ಮೇ 26 ರಿಂದ ಮಾವು, ಹಲಸು ಮೇಳ, ವಿಶೇಷತೆಗಳು
ಮಡಿಕೇರಿ, ಮೇ 24; ಮಡಿಕೇರಿಯಲ್ಲಿ 'ಮಾವು ಮತ್ತು ಹಲಸು ಮೇಳ 2023' ಮೇ 26 ರಿಂದ 28ರ ತನಕ ನಡೆಯಲಿದೆ. ನೈಸರ್ಗಿಕವಾಗಿ ಹಣ್ಣು ಮಾಡಿದ ಹಲಸು ಮತ್ತು ಮಾವನ್ನು ಜನರು ಕೊಳ್ಳಬಹುದಾಗಿದೆ. ಈ ಅವಕಾಶವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಕರೆ ನೀಡಲಾಗಿದೆ.
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಈ ಕುರಿತು ಮಾಹಿತಿ ನೀಡಿದ್ದಾರೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ನಗರದ ಹಾಪ್‍ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಮಾವು ಮತ್ತು ಹಲಸು ಮೇಳಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಹೀಗೆ ವಿವಿಧ ಜಿಲ್ಲೆಗಳಿಂದ ಮಾವು ಬೆಳೆಗಾರರು ಆಗಮಿಸುತ್ತಿದ್ದಾರೆ. ಹಾಪ್‍ಕಾಮ್ಸ್ ಆವರಣದಲ್ಲಿ ಎರಡನೇ ಬಾರಿಗೆ ಮಾವು ಮತ್ತು ಹಲಸು ಮೇಳ ಆಯೋಜನೆ ಮಾಡಲಾಗುತ್ತಿದೆ.
ಕಳೆದ ಬಾರಿ ಮಾವು ಮತ್ತು ಹಲಸು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಪರಿಚಯಿಸುವುದು, ಜೊತೆಗೆ ಉತ್ತಮ ಗುಣಮಟ್ಟದ ಮಾವು ಮತ್ತು ಹಲಸನ್ನು ಗ್ರಾಹಕರಿಗೆ ಕೊಳ್ಳಲು ಅವಕಾಶ ಮಾಡಿಕೊಡುವುದು ಪ್ರಮುಖ ಉದ್ದೇಶವಾಗಿದೆ.

ಮೇಳದ ಆಕರ್ಷಣೆಗಳು; ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಾವು ಮತ್ತು ಹಲಸು ಬೆಳೆಗಾರರಿಗೂ ನಷ್ಟವಾಗದೆ, ಗ್ರಾಹಕರಿಗೂ ಹೊರೆಯಾಗದ ರೀತಿ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಮಾವು ಮೇಳದಲ್ಲಿ 15 ಮಳಿಗೆ ತೆರೆಯಲಾಗಿತ್ತು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ಕೊಡಗು ಜಿಲ್ಲೆಯಲ್ಲಿನ ಮಾವು ಮತ್ತು ಹಲಸು ಇತರೆ ಹಣ್ಣುಗಳನ್ನು ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ. ನೈಸರ್ಗಿಕವಾಗಿ ಹಣ್ಣು ಮಾಡಿದ ಹಲಸು ಮತ್ತು ಮಾವನ್ನು ಕೊಂಡು ಕೊಳ್ಳಬಹುದಾಗಿದೆ. ಗ್ರಾಹಕರು ಮತ್ತು ಬೆಳೆಗಾರರ ನಡುವೆ ಹಾಪ್‍ಕಾಮ್ಸ್ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್. ಆರ್. ನಾಯಕ್ ಮಾತನಾಡಿ, "ಗ್ರಾಹಕರು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ಕೊಳ್ಳಬಹುದಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಹಲಸು ಬೆಳೆಗಾರರು ಆಗಮಿಸಿ ಹಲಸು ಮಾರಾಟ ಮಾಡಲಿದ್ದಾರೆ" ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಗ್ರಾಹಕರಿಗೆ ನೇರವಾಗಿ ಕೋಲಾರ, ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು ಭಾಗಗಳಿಂದ ಮಾವು ಬೆಳೆಗಾರರನ್ನು ಆಹ್ವಾನಿಸಿ ವಿವಿಧ 15 ರಿಂದ 20 ಮಾವಿನ ತಳಿಗಳನ್ನು ಪರಿಚಯಿಸುವ ಹಾಗೂ ಮಾರಾಟ ಮಾಡುವ ಉದ್ದೇಶವಿದೆ. ಮಾವು ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸುವ ಹಣ್ಣಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಈ ಮೇಳವನ್ನು ಹೆಚ್ಚು ಆಕರ್ಷಣೆಗೊಳಿಸಲು ವಿವಿಧ ಹಲಸಿನ ತಳಿಗಳನ್ನು ಸಹ ಪರಿಚಯಿಸುವ ಉದ್ದೇಶವಿದೆ. ಇದರ ಜೊತೆಗೆ ಮಾವು/ ಹಲಸಿನಿಂದ ಸಂಸ್ಕರಿಸಿದ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಗಿಡಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ರಿಂದ 25 ಮಳಿಗೆಗಳನ್ನು ತೆರೆಯಲಾಗುತ್ತಿದೆ.
ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮತ್ತು ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ ಮಾವು ಮತ್ತು ಹಲಸು ಮೇಳ ನಡೆಯುವ ಹಾಪ್‍ಕಾಮ್ಸ್ ಜಾಗವನ್ನು ಪರಿಶೀಲಿಸಿದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಸಹಾಯಕ ನಿರ್ದೇಶಕರಾದ ಬಿ. ಎಸ್. ಮುತ್ತಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications