
ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ: ರಾಜ್ಯ ಬಿಜೆಪಿ ನಾಯಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ
ಶಿವಮೊಗ್ಗ, ಅಕ್ಟೋಬರ್, 19: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ತಗುಲಿದ್ದು, ರೈತರು ಕಂಗಾಲಾಗಿ ಹೋಗಿದ್ದಾರೆ. ಆದ್ದರಿಂದ ಎಲೆ ಚುಕ್ಕಿ ರೋಗ ನಿಯಂತ್ರಣದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದ ನಾಯಕರು ಮುಂದಾಗಿದ್ದಾರೆ.
ರೈತ ಸಮುದಾಯದ ಜೀವನಾಡಿಯಾದ ಅಡಿಕೆ ಬೆಳೆ ಎಲೆ ಚಿಕ್ಕಿ ರೋಗಕ್ಕೆ ತುತ್ತಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಅಕ್ಷರಸಃ ನಲುಗಿ ಹೋಗಿದ್ದಾರೆ. ಈ ರೋಗ ನಿಯಂತ್ರಣದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದ ರಾಜಕೀಯ ನಾಯಕರು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೃಷ್ಣ ಭಟ್ ಇಂದು ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು.
ರಾಯಚೂರು; ಭಾರಿ ಮಳೆಯಿಂದ ಹತ್ತಿ ಬೆಳೆ ನಾಶ, ವಿಷದ ಬಾಟಲಿ ಹಿಡಿದ ರೈತ
ಚಿಕ್ಕಮಗಳೂರಿನ ಅಡಿಕೆ ಬೆಳೆಗಾರರು ತತ್ತರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗತಗುಲಿದ್ದು, ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು. ಎಲೆಚುಕ್ಕಿ ರೋಗ ನಿಯಂತ್ರಣ ಆಗಲೆಂದು ಪ್ರಸಿದ್ಧ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪೂಜೆ, ಹೋಮ ನಡೆಸಿ ಎಲೆಚುಕ್ಕಿ ರೋಗ ನಿವಾರಣೆ ಮಾಡುವಂತೆ ಕೃಷಿಕರ ಪರವಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು.
ಈ ಮೂಲಕವಾದರೂ ಎಲೆಚುಕ್ಕಿ ರೋಗದಿಂದ ಪಾರಾಗಲು ದಾರಿ ಸಿಗಬಹುದು ಎಂಬ ನಿರೀಕ್ಷೆ ಅಡಿಕೆ ಕೃಷಿಕರಲ್ಲಿ ಹುಟ್ಟಿಕೊಂಡಿದೆ. ಮಲೆನಾಡಿನ ಮುಖ್ಯ ಬೆಳೆಯಾದ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗವನ್ನು ಹೋಗಲಾಡಿಲು ಈ ಹೋಮ, ಹವನವನ್ನು ನಡೆಸಲಾಗಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದ ಜೋಷಿ
ಕಳಸ ಸೇರಿದಂತೆ ಸುತ್ತಮುತ್ತಲಿನ ಭಾಗದ ಎಲ್ಲಾ ಕೃಷಿಕರು ದೇವಸ್ಥಾನಕ್ಕೆ ಬಂದು ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ತಮ್ಮ ಜಮೀನಿಗೆ ಸಿಂಪಡಿಸಬೇಕು. ಈ ಹಿಂದೆಯೂ ಜಗನ್ಮಾತೆಯ ಭಂಡಾರದ ಪ್ರಸಾದವನ್ನು ಕೃಷಿ ಭೂಮಿಗೆ ಹಾಕಿದ್ದರ ಪರಿಣಾಮ ಅನೇಕ ಸಮಸ್ಯೆಗಳು ಪರಿಹಾರ ಆಗಿರುವ ನಿದರ್ಶನಗಳೂ ಇದೆ. ಅನ್ನಪೂರ್ಣೆಯ ಅನುಗ್ರಹದಿಂದ ಕೃಷಿಕರಿಗೆ ಬಂದಿರುವ ಗಂಡಾಂತರ ಪರಿಹಾರ ಆಗುವ ಎಲ್ಲ ಭರವಸೆ ಇದೆ. ಈ ರೋಗದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕು ಮತ್ತು ನಿವಾರಣೆಯ ಮಾರ್ಗವನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ, ಕೃಷಿ ಸಚಿವ ಮತ್ತು ಶಾಸಕರಲ್ಲಿ ಮನವಿ ಮಾಡಿದ್ದೇವೆ. ಈ ಕುರಿತು ಅಗತ್ಯವಾಗಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ರೈತ ಕಂಗಾಲು
ಕೃಷಿಕರು ದುಡುಕು ನಿರ್ಧಾರ ಕೈಗೊಳ್ಳದೆ ಧೈರ್ಯದಿಂದ ಇರುವಂತೆ ಭೀಮೇಶ್ವರ ಜೋಷಿಗಳು ಮನವಿ ಮಾಡಿದ್ದರು. ಎಲ್ಲ ಕೃಷಿಕರೂ ಧೈರ್ಯದಿಂದ, ಸಾಮೂಹಿಕವಾಗಿ ಈ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೃಷಿಕರು ಆತ್ಮಹತ್ಯೆಯಂತಹ ದುಡುಕಿನ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದರು. ಕಳೆದ ಹಲವು ತಿಂಗಳುಗಳಿಂದ ಮಲೆನಾಡು ಭಾಗದ ರೈತರ ತೋಟಗಳಿಗೆ ಮಾರಕವಾದ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗಗಳು ಬಾಧಿಸುತ್ತಿದ್ದು, ಕೃಷಿಕರು ಆತಂಕಕ್ಕೆ ಸಿಲುಕಿದ್ದರು.

ಆತಂಕ ಬೇಡ: ವಿದೇಶಿ ಹಸಿರು ಅಡಿಕೆಯಿಂದ ಕರ್ನಾಟಕದ ಅಡಿಕೆ ಉತ್ಪನ್ನದಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಮನವರಿಕೆ ಮಾಡಿಕೊಡಲಾಗುವುದು. ಈ ಸಂಬಂಧ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗ ಒಂದನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರ ವಾರ್ಷಿಕವಾಗಿ ಭೂತಾನ್‌ನಿಂದ ಕನಿಷ್ಠ ಆಮದು ಬೆಲೆ (ಎಂಐಪಿ) ಷರತ್ತು ಇಲ್ಲದೆಯೇ 17,000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಅನುಮತಿ ನೀಡಿದೆ. ಇದರ ಬೆನ್ನಲ್ಲೆ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದಿಂದ ನೋಂದಣಿ ಪ್ರಮಾಣ ಪತ್ರ ಪಡೆದವರು ಆಮದು ಮಾಡಿಕೊಳ್ಳಲು ಸಜ್ಜಾಗಲಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅಡಿಕೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕದ ಬೆಳೆಗಾರರು, ಮಾರುಕಟ್ಟೆ ವ್ಯಾಪಾರಿಗಳು ಆತಂಕಗೊಂಡಿದ್ದರು ಎನ್ನಲಾಗಿದೆ.