ವಿಜಯಪುರ; ಜ. 21ರಿಂದ ಕೃಷಿ ಮೇಳ, ವಿಶೇಷತೆಗಳು
ವಿಜಯಪುರ, ಜನವರಿ 15: ವಿಜಯಪುರದಲ್ಲಿರುವ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (ಹಿಟ್ಟಿನಹಳ್ಳಿ ಫಾರ್ಮ್) ಇಲ್ಲಿ ಮೂರು ದಿನಗಳ ಕೃಷಿ ಮೇಳ 2024 ಆಯೋಜನೆ ಮಾಡಲಾಗಿದೆ. ರೈತರು, ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಕೃಷಿ ಮೇಳದಲ್ಲಿ ಪಾಲ್ಗೊಳ್ಳಬಹುದು.
ಧಾರವಾಡ ಕೃಷಿ ವಿಶ್ವವಿದ್ಯಾಲಯ, ವಿಜಯಪುರ ಆವರಣ (ಹಿಟ್ಟಿನಹಳ್ಳಿ ಫಾರ್ಮ್), ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಮೇಳ-2024 ಆಯೋಜನೆ ಮಾಡಲಾಗಿದೆ. ಜನವರಿ 21 ರಿಂದ 23ರ ತನಕ ಮೇಳ ನಡೆಯಲಿದೆ.

ಈ ಬಾರಿಯ ಕೃಷಿ ಮೇಳವನ್ನು 'ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ' ಎಂಬ ಘೋಷವಾಕ್ಯದಡಿ ಆಯೋಜನೆ ಮಾಡಲಾಗಿದೆ. ಆಧುನಿಕವಾದ ಕೃಷಿ ತಂತ್ರಜ್ಞಾನದ ಮಾಹಿತಿಯನ್ನು ನೀಡುವ ಜೊತೆಗೆ ವಸ್ತು ಪ್ರದರ್ಶನ, ಮಾರಾಟವನ್ನು ಸಹ ಏರ್ಪಡಿಸಲಾಗಿದೆ.
ಕೃಷಿ ಮೇಳದ ವಿಶೇಷತೆಗಳು; ಈ ಬಾರಿಯ ಕೃಷಿ ಮೇಳ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬರ ನಿರ್ವಹಣೆ ಪದ್ಧತಿಗಳು, ಕೃಷಿ ಯಂತ್ರೋಪಕರಣ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ಕೀಟನಾಶಕ ಸಿಂಪರಣೆಗಾಗಿ ಡ್ರೋನ್ ಬಳಕೆ, ಸೌರ ಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪ್ ಸೆಟ್‌ನಿಂದ ನೀರೆತ್ತುವುದು, ಸ್ವಯಂ ಚಾಲಿತ ನೀರಾವರಿ ಪದ್ಧತಿ, ಕೃಷಿ ಹವಾಮಾನ ಶಾಸ್ತ್ರ ಘಟಕ, ವಿವಿಧ ಬೆಳೆ/ ಅಂತರ ಬೆಳೆ ಪದ್ಧತಿಗಳು, ಸಾವಯವ ಕೃಷಿ/ ನೈಸರ್ಗಿಕ ಕೃಷಿ, ತೊಗರಿ ಆಧಾರಿತ ಬೇಸಾಯ ಪದ್ಧತಿಗಳ ಮಾಹಿತಿಗಳನ್ನು ಮೇಳ ಒಳಗೊಂಡಿರಲಿದೆ.
ಹಿಂಗಾರಿ ಜೋಳದಲ್ಲಿ ವಿವಿಧ ತಳಿಗಳು, ಕೀಟ, ರೋಗ ಮತ್ತು ಬರ ನಿರ್ವಹಣಾ ತಂತ್ರಜ್ಞಾನಗಳು. ಕಡಲೆ ಹೊಸ ತಳಿಗಳು, ಅಜವಾನ ಕೃಷಿ, ಮಳೆಯಾಶ್ರಿತ ಚಿಕ್ಕು ಬೇಸಾಯ, ಅರೆಶುಷ್ಕ ವಲಯಕ್ಕೆ ಸೂಕ್ತವಾದ ಜೈವಿಕ ಇಂಧನ ಮರಗಳು ಹಾಗೂ ಕೃಷಿ ಅರಣ್ಯ ಪದ್ಧತಿಗಳು, ಕೃಷಿ ಹೊಂಡದಿಂದ ಸಂದಿಗ್ಧ ಹಂತದಲ್ಲಿ ನೀರು ನಿರ್ವಹಣೆ, ಫಲ ಪುಷ್ಪ ಪ್ರದರ್ಶನ ಸಹ ಕೃಷಿ ಮೇಳದಲ್ಲಿ ಇರಲಿದೆ.
ಜನವರಿ 21ರಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ ಮೂರು ದಿನಗಳ ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ಕೃಷಿ ವಸ್ತು ಪ್ರದರ್ಶನವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಉದ್ಘಾಟಿಸಲಿದ್ದಾರೆ.
ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವಿಜಯಪುರ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಪ್ರಾಯೋಜಿತ ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲ ಕೇಂದ್ರವನ್ನು 2004ರಲ್ಲಿ ಸ್ಥಾಪನೆ ಮಾಡಲಾಗಿದೆ.
ಈ ಕೇಂದ್ರವು ಸೊಲ್ಲಾಪುರ-ಬೆಂಗಳೂರು ಹೆದ್ದಾರಿಯಲ್ಲಿರುವ ವಿಜಯಪುರದ ಹಿಟ್ಟನಹಳ್ಳಿ ತೋಟದ ಆರ್‌ಎಆರ್‌ಎಸ್‌ನಲ್ಲಿದೆ. ಇದು ವಿಜಯಪುರ ನಗರದಿಂದ ಸುಮಾರು 10 ಕಿ. ಮೀ. ದೂರದಲ್ಲಿದೆ.












Click it and Unblock the Notifications