ಧಾರವಾಡದ ಧೂಪನಟ್ಟಿ, ಕಿವುಡೆಬೈಲ ರೈತರ ಬೇಡಿಕೆಗಳೇನು?
ಧಾರವಾಡ, ನವೆಂಬರ್, 05 : ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಗುರುವಾರ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಅರಣ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ತಮ್ಮ ಬೇಡಿಕೆಗಳನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಪಾಟೀಲ, "ಧಾರವಾಡ ತಾಲೂಕಿನ ಧೂಪನಟ್ಟಿ ಗ್ರಾಮದ 18-20 ಬಡ ರೈತರು ಅನೇಕ ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ರೈತರು ಸರ್ಕಾರಕ್ಕೆ ದಂಡದ ರೂಪದಲ್ಲಿ 15 ರೂ. ಗಳಂತೆ ಹಣ ಕಟ್ಟಿದ್ದಾರೆ. ಸರ್ಕಾರಕ್ಕೆ ಭತ್ತ ಲೇವಿ ಕೊಟ್ಟಿದ್ದಾರೆ. ಸದರೀ ಜಮೀನು ಉಳುಮೆ ಮಾಡುತ್ತಿರುವ ಬಗ್ಗೆ ದಾಖಲೆಯೂ ಇದೆ. ಆದರೂ ರೈತರನ್ನು ಒಕ್ಕಲೆಬ್ಬಿಸಿದ್ದಾರೆ. ಇದೊಂದು ಅತ್ಯಂತ ಅಮಾನವೀಯ ಘಟನೆಯಾಗಿದೆ" ಎಂದರು.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]

ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಬುಡಕಟ್ಟು ಜನಾಂಗದವರು ಅಥವಾ ಸಾಂಪ್ರದಾಯಿಕ ಅರಣ್ಯ ವಾಸಿಗಳನ್ನು ಅವರ ಅರ್ಜಿಗಳು ಇತ್ಯರ್ಥವಾಗುವವರೆಗೂ ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು ಎಂದು ಮಾರ್ಚ್ 2015ರಲ್ಲಿ ಕರ್ನಾಟಕ ಸರ್ಕಾರವು ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಆದರೂ ಅರಣ್ಯ ಅಧಿಕಾರಿಗಳು ಸರ್ಕಾರದ ಆದೇಶ ಧಿಕ್ಕರಿಸಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದೆ ಎಂದು ದೂರಿದರು.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']
ಬೇಡಿಕೆಗಳು:
* ಧೂಪನಟ್ಟಿ ಮತ್ತು ಕಿವುಡೆಬೈಲ ರೈತರಿಗೆ ಅವರು ಈ ಹಿಂದೆ ಸಾಗುವಳಿಮಾಡುತ್ತಿದ್ದ ಭೂಮಿಯನ್ನು ಅವರಿಗೆ ಹಸ್ತಾಂತರಿಸಿ ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು.
* ಧೂಪನಟ್ಟಿ ರೈತರ ಹತ್ತಿ ಮತ್ತು ಭತ್ತದ ಬೆಳೆಗಳನ್ನು ನಾಶಪಡಿಸಿದ್ದಕ್ಕೆ ಸೂಕ್ತ ಪರಿಹಾರ ನೀಡಬೇಕು.
* ನೆಲ್ಲಿಹರವಿ ಗ್ರಾಮ ವ್ಯಾಪ್ತಿಯ 320ರ ಜಮೀನನ್ನು ಕಂದಾಯ ಇಲಾಖೆಗೆ ವರ್ಗಾಯಿಸಬೇಕು ಮತ್ತು ಆ ಜಮೀನನ್ನು ಅಲ್ಲಿ ಉಳಿಮೆ ಮಾಡುತ್ತಿದ್ದ ರೈತರಿಗೆ ಹಂಚಿಕೆ ಮಾಡಬೇಕು.
* ಅರೇಬಸನಕೊಪ್ಪ ಗ್ರಾಮಕ್ಕೆ ಸಂಬಂಧಿಸಿದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಮಡಕಿಹೊನ್ನಳ್ಳಿ ಗ್ರಾಮದ ರೈತರಿಗೆ ಸದರೀ ಅರಣ್ಯ ಜಮೀನಿನಲ್ಲಿ ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು..
* ಅದರಂತೆ ಇತರೆ ಗ್ರಾಮಗಳಲ್ಲಿ ಅರಣ್ಯ ಭೂಮಿ ಸಾಗುವಳಿಮಾಡುತ್ತಿರುವ ರೈತರ ಅರ್ಜಿಗಳ ಇತ್ಯರ್ಥ ಆಗುವವರೆಗೆ ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು.
* ರೈತರು ಹಾಗೂ ರೈತ ಮುಖಂಡರ ಮೇಲೆ ಹಾಕಿದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಬೇಕು.












Click it and Unblock the Notifications