ಕರ್ನಾಟಕದ ಜೇನುತುಪ್ಪಕ್ಕೆ ಬ್ರಾಂಡ್, ಟ್ಯಾಗ್ ಲೈನ್: ಮಾರಾಟ ಇನ್ನಷ್ಟು ಸುಲಭ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕದ ಜೇನು ಕೃಷಿಕರಿಗೆ ತೋಟಗಾರಿಕೆ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ಇನ್ನು ರಾಜ್ಯದ ಜೇನುತುಪ್ಪವನ್ನು ಬ್ರಾಂಡ್, ಟ್ಯಾಗ್ ಲೈನ್ ಮತ್ತು ಲೋಗೋ ಮೂಲಕ ಮಾರಾಟ ಮಾಡಲು ಅವಕಾಶವನ್ನು ನೀಡಲಾಗಿದೆ. ಇದರಿಂದಾಗಿ ಜೇನುಕೃಷಿ ಮಾಡುವ ರೈತರು ಸುಲಭವಾಗಿ, ಜಾಗತಿಕವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಸಿಕ್ಕಿದಂತಾಗಿದೆ.
ಕರ್ನಾಟಕದ ತೋಟಗಾರಿಕೆ ಇಲಾಖೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪವನ್ನು 'ಝೇಂಕಾರ' ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ಅವಕಾಶ ನೀಡಿದೆ. ಇದಕ್ಕಾಗಿಯೇ 'ಝೇಂಕಾರ' ಬ್ರಾಂಡ್ ಹೆಸರು, ಟ್ಯಾಗ್‍ಲೈನ್ ಮತ್ತು ಲೋಗೋವನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಸಲಾಗಿದೆ.

ರಾಜ್ಯದಲ್ಲಿ ಉತ್ಪಾದನೆಯಾಗುವ ಜೇನುತುಪ್ಪವನ್ನು ಜನಪ್ರಿಯಗೊಳಿಸಲು ಹಾಗೂ ಉತ್ಪಾದನೆ ಹೆಚ್ಚಿಸಿ ಸುಧಾರಿತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಬ್ರಾಂಡಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬ್ರಾಂಡ್ ಮತ್ತು ಟ್ಯಾಗ್‌ಲೈನ್ ಮತ್ತು ಲೋಗೋವನ್ನು ತಯಾರಿಸಲಾಗಿದೆ.
ಝೇಂಕಾರ ಬ್ರಾಂಡ್ ಹೆಸರಿನಲ್ಲಿ ಮಾರಾಟ: ಝೇಂಕಾರ ಬ್ರಾಂಡ್, ಟ್ಯಾಗ್‍ಲೈನ್ ಮತ್ತು ಲೋಗೋ ನೋಂದಣಿಯಾಗಿರುವುದರಿಂದ ಎಲ್ಲಿಯೇ ಹೋದರು ಸಹ ಕರ್ನಾಟಕದಲ್ಲಿ ತಯಾರಾದ ಜೇನುತುಪ್ಪವನ್ನು ಗುರುತಿಸಿ, ಗ್ರಾಹಕರು ಖರೀದಿ ಮಾಡಬಹುದು. ಇದರಿಂದಾಗಿ ಬೇಡಿಕೆಯೂ ಹೆಚ್ಚಲಿದ್ದು, ಜೇನು ಕೃಷಿಕರಿಗೆ ಅನುಕೂಲವಾಗಲಿದೆ.
ಜೇನು ಕೃಷಿಕರು, ಜೇನುತುಪ್ಪ ಉತ್ಪಾದಕರು, ಜೇನು ಕೃಷಿ ಸಹಕಾರ ಸಂಘಗಳು ಪ್ರಸ್ತುತ ಈ 'ಝೇಂಕಾರ' ಬ್ರಾಂಡ್ ಹೆಸರನ್ನು ಉಪಯೋಗಿಸಿಕೊಂಡು ಜೇನುತುಪ್ಪ ಹಾಗೂ ಜೇನಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿವನ್ನು ನೀಡಲಾಗಿದೆ.
ತೋಟಗಾರಿಕಾ ಇಲಾಖೆಯ ಮಾಲೀಕತ್ವದ ಜೇನುತುಪ್ಪದ ಬ್ರಾಂಡ್ ಹೆಸರಾದ 'ಝೇಂಕಾರ' ಬ್ರಾಂಡ್‍ನಲ್ಲಿ ಜೇನುತುಪ್ಪವನ್ನು ಮಾರಾಟ ಮಾಡಲು ಇಚ್ಚಿಸುವ ಜೇನು ತುಪ್ಪದ ಉತ್ಪಾದಕರು/ ಸಂಗ್ರಹಕರು ನಿಗದಿಪಡಿಸಿದ ರೂ. 2500ಗಳ ನೋಂದಣಿ ಶುಲ್ಕವನ್ನು ಪಾವತಿಸಿ, ಪಾವತಿಸಿದ ಚಲನ್ ಅನ್ನು ಸಂಬಂಧಪಟ್ಟ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರಿಗೆ ಸಲ್ಲಿಸಿದ ನಂತರ ಬ್ರಾಂಡ್ ಹೆಸರು ಝೇಂಕಾರ, ಲೋಗೋ ಮತ್ತು ಟ್ಯಾಗ್‍ಲೈನ್ ಅನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗುತ್ತದೆ.
ಜೇನು ಕೃಷಿಕರು, ಸಹಕಾರಿ ಸಂಘಗಳು ಈ ಕುರಿತು ಹೆಚ್ಚಿನ ಮಾಹಿತಿಗೆ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ತೋಟಗಾರಿಕಾ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಹಣ್ಣು ಮಾರಾಟ ಮೇಳವನ್ನು ನಡೆಸುವಾಗ ಜೇನು ತುಪ್ಪ ಮಾರಾಟಕ್ಕೆ, ಜೇನು ಕೃಷಿ ಬಗ್ಗೆ ರೈತರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ಸಂವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.
ರಾಜ್ಯದಲ್ಲಿ ತೋಟಗಾರಿಕಾ ಇಲಾಖೆ ಜೇನು ಕೃಷಿಯನ್ನು ಪ್ರೋತ್ಸಾಹಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯ ಮಟ್ಟದ ಜೇನು ಕೃಷಿ ತರಬೇತಿ ಕೇಂದ್ರವಿದೆ. ಇಲ್ಲಿ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಆಸಕ್ತ ಜೇನು ಕೃಷಿಕರಿಗಾಗಿ ನಡೆಸಲಾಗುತ್ತದೆ.
ಜೇನು ಕೃಷಿಗೆ ಸಂಬಂಧಿಸಿದ ಮ್ಯೂಸಿಯಂ, ಮಧುವನ ಕೇಂದ್ರ, ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆಯನ್ನು ಇಲ್ಲಿ ವೀಕ್ಷಿಸಬಹುದು. ರಾಜ್ಯದಲ್ಲಿ ಅನೇಕ ರೈತರು ಈಗಾಗಲೇ ಜೇನು ಕೃಷಿಯನ್ನು ಒಂದು ಉದ್ಯಮವಾಗಿ ಕೈಗೊಂಡು ಯಶಸ್ವಿಯಾಗಿದ್ದಾರೆ. ಕೃಷಿಯ ಜೊತೆಗೆ ಉಪ ಕಸುಬಾಗಿಯೂ ಜೇನು ಕೃಷಿಯನ್ನು ಕೈಗೊಂಡಿದ್ದಾರೆ.












Click it and Unblock the Notifications