ಇದ್ಯಾವ ನ್ಯಾಯ ಸ್ವಾಮೀ? ಲಾಕ್‌ಡೌನ್ ಇದ್ದರೂ ಸಾಲ ವಸೂಲಿಗೆ ನಿಂತ ಸರ್ಕಾರ!
ಬೆಂಗಳೂರು, ಮೇ 18: ಲಾಕ್‌ಡೌನ್ ಸಂದರ್ಭದಲ್ಲಿಯೂ ರೈತರು, ಕೂಲಿ ಕಾರ್ಮಿಕರಿಗೆ ಒಂದರ ಮೇಲೊಂದರಂತೆ ಸರ್ಕಾರದ ಏಟುಗಳು ಬೀಳುತ್ತಲೆ ಇವೆ. ಎಪಿಎಂಸಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದ್ದಾಯ್ತು, ಕಾರ್ಮಿಕರ ಕಾಯಿದೆ ಅಮಾನ್ಯ ಮಾಡುವ ಸಂಚು ನಡೆಸಿದ್ದಾಯ್ತು, ಇದೀಗ ಸಣ್ಣ ಹಿಡುವಳಿ ರೈತರಿಗೆ ಕಳೆದ ವರ್ಷ ಶೂನ್ಯ ಬಡ್ಡಿದರದಲ್ಲಿ ಕೊಟ್ಟಿದ್ದ ಸಾಲ ವಸೂಲಿಗೆ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಸಹಕಾರಿ ಇಲಾಖೆ ಹೊರಡಿಸಿರುವ ಸುತ್ತೋಲೆ ಮೊದಲೇ ಸಂಕಷ್ಟದಲ್ಲಿದ್ದ ರೈತರು ಮತ್ತಷ್ಟು ಕಂಗೆಡುವಂತೆ ಮಾಡಿದೆ. ಚೀನಾ ವೈರಸ್ ನೆಪದಲ್ಲಿ ರೈತರ ಮಾರಣಹೋಮಕ್ಕೆ ಸರ್ಕಾರ ಸಿದ್ಧವಾದಂತಿದೆ ಎಂದು ರೈತರು ಆರೋಪಿಸಿದ್ದಾರೆ.
ಕಳೆದ ವರ್ಷ ಸಾಲ ಕೊಟ್ಟಿದ್ದ ಸಾಲಕ್ಕೆ, ಈಗ ರೈತ ಕುಟುಂಬಗಳನ್ನು ಒಡೆಯುವಂತಹ ಸುತ್ತೋಲೆಯನ್ನು ಸರ್ಕಾರದ ಸಹಕಾರ ಇಲಾಖೆ ಹೊರಡಿಸಿದೆ. ಸಹಕಾರ ಇಲಾಖೆ ಗ್ರಾಮೀಣ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಕಳಿಸಿರುವ ಸುತ್ತೋಲೆ 'ಒನ್‌ಇಂಡಿಯಾ'ಕ್ಕೆ ಲಭ್ಯವಾಗಿದೆ!

ಶೂನ್ಯ ಬಡ್ಡಿ ಸಾಲಕ್ಕೆ ಹೊಸ ಹೊರೆ
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯವನ್ನು ಸರ್ಕಾರ ಸಹಕಾರ ಇಲಾಖೆ ಮೂಲಕ ಕೊಡುತ್ತಿದೆ. ಆದರೆ ಸಾಲ ಕೊಡುವ ಸಂದರ್ಭದಲ್ಲಿ ಇಲ್ಲದ ನಿಬಂಧನೆಗಳನ್ನು ಇದೀಗ ಸಾಲ ವಸೂಲಿ ಸಂದರ್ಭದಲ್ಲಿ ಸಹಕಾರಿ ಇಲಾಖೆ ಸೇರಿಸಿದೆ. ಸಾಲ ವಸೂಲಿಗೆ ಸಂಬಂಧಿಸಿದಂತೆ ಇಡೀ ದೇಶಾದ್ಯಂತ ಲಾಕ್‌ಡೌನ್ ಇದ್ದಾಗ ಸಹಕಾರ ಇಲಾಖೆ ರೈತರಿಗೆ ಕಳೆದ ಮಾರ್ಚ್ 31ರಂದು ಸುತ್ತೋಲೆ ಮೂಲಕ ಸಾಲ ವಸೂಲಿಗೆ ನಿಯಮ ಹಾಕಿದೆ.

ಪಡಿತರ ಚೀಟಿ ತಂದಿಟ್ಟ ಸಮಸ್ಯೆ
ಹೌದು, ಪಡಿತರ ಚೀಟಿಗೂ ರೈತರ ಸಾಲಕ್ಕೂ ಏನು ಸಂಬಂಧ ಅನ್ನಿಸಬಹುದು. ಈ ಹಿಂದೆ ಪಹಣಿ ಪತ್ರ ಆಧರಿಸಿ ಕೊಟ್ಟಿದ್ದ ಅಲ್ಪಾವಧಿ ಸಾಲಕ್ಕೆ ಇದೀಗ ಸಾಲ ಮರು ಪಾವತಿ ಸಂದರ್ಭದಲ್ಲಿ ಪಡಿತರ ಚೀಟಿ ಆಧರಿಸಿ ಬಡ್ಡಿ ಮನ್ನಾಕ್ಕೆ ಆದೇಶ ಮಾಡಲಾಗಿದೆ. ಇದು ಸಾಲ ಪಡೆದಿದ್ದ ರೈತ ಕುಟುಂಬಗಳಲ್ಲಿ ಕಲಹಕ್ಕೆ ಕಾರಣವಾಗಿದೆ. ಶೂನ್ಯ ಬಡ್ಡಿ ದರದ ಸಾಲ ಕೊಡುವ ವೇಳೆಯಲ್ಲಿ ಪಡಿತರ ಚೀಟಿಯನ್ನು ಒಂದು ದಾಖಲೆಯಾಗಿ ಪರಿಗಣಿಸಿರಲಿಲ್ಲ. ಅದನ್ನು ವಿಳಾಸದ ದಾಖಲೆಯಾಗಿಯೂ ಸಹಕಾರಿ ಇಲಾಖೆ ಪಡೆದಿರಲಿಲ್ಲ.
ರೈತ ಕುಟುಂಬಗಳು ಜಮೀನು ಭಾಗಮಾಡಿಕೊಂಡಿದ್ದರೂ ಒಂದೇ ಪಡಿತರ ಚೀಟಿಯನ್ನು ಪಡಿತರ ಪಡೆದುಕೊಳ್ಳುತ್ತಿದ್ದವು. ಆದರೆ ಇದೀಗ ಸರ್ಕಾರ ಒಂದು ಪಡಿತರ ಚೀಟಿಗೆ ಒಬ್ಬ ರೈತನಿಗೆ ಮಾತ್ರ ಬಡ್ಡಿ ಮನ್ನಾ ಎಂದು ನಿಯಮ ಮಾಡಿದೆ. ಅದರಲ್ಲೂ ಕಡಿಮೆ ಸಾಲ ಪಡೆದಿದ್ದ ರೈತನ ಸಾಲದ ಮೇಲಿನ ಬಡ್ಡಿ ಮಾತ್ರ ಮನ್ನಾ ಮಾಡಲು ರಾಜ್ಯ ಸಹಕಾರ ಸಂಘಗಳ ನಿಬಂಧಕರು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.

ಸಾಲ ಕೊಟ್ಟು ಜಗಳ ಹಚ್ಚಿದ ಸರ್ಕಾರ
ಸರ್ಕಾರದ ನೂತನ ನಿಯಮದಿಂದಾಗಿ ಸಾಲ ಪಡೆದಿದ್ದ ರೈತ ಕುಟುಂಬಗಳಲ್ಲಿ ಕೋಲಾಹಲವೇ ಶುರುವಾಗಿದೆ. ಸಾಲ ಪಡೆದಿರುವ ಕುಟುಂಬಗಳಲ್ಲಿ ಪೂರ್ಣ ಬಡ್ಡಿ ತುಂಬುವಂತೆ ಸೂಚಿಸಿರುವುದು ಸಂಬಂಧಗಳನ್ನೇ ಹಾಳು ಮಾಡುತ್ತಿದೆ. ಪ್ರತ್ಯೇಕವಾಗಿ ಸಾಲ ಪಡೆದಿದ್ದ ಅಣ್ಣ-ತಮ್ಮಂದಿರ ಮಧ್ಯೆ ವೈಷಮ್ಯದ ಬೆಂಕಿ ಎದ್ದಿದೆ.
ಒಂದೇ ಮನೆಯಲ್ಲಿ ಭಾಗಮಾಡಿಕೊಂಡು ಇರುವುದು ಹಾಗೂ ಪಡಿತರ ಚೀಟಿಯನ್ನು ಪ್ರತ್ಯೇಕವಾಗಿ ಮಾಡಿಕೊಳ್ಳದೆ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಪಡಿತರ ಚೀಟಿ ಬೇರೆ ಮಾಡಿಕೊಳ್ಳುವುದು ಈ ಲಾಕ್‌ಡೌನ್ ಸಂದರ್ಭದಲ್ಲಿ ರೈತ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಜಾರಿಯಲ್ಲಿದ್ದರೂ ಮೇ 31ರೊಳಗೆ ಸಾಲ ಮರು ಪಾವತಿ ಮಾಡುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಸಂಕಷ್ಟದಲ್ಲಿಯೆ ಸಾಲವನ್ನು ಮರು ಪಾವತಿ ಮಾಡಬೇಕಾದ ಅನಿವಾರ್ಯತೆ ರೈತ ಕುಟುಂಬಗಳಿಗೆ ಎದುರಾಗಿದೆ. ವಿಧವಾ ರೈತ ಮಹಿಳೆಯರ ಸ್ಥಿತಿಯಂತೂ ಮತ್ತಷ್ಟು ಸಂಕಷ್ಟಕ್ಕೀಡಾಗಲಿದೆ

ಸಹಕಾರಿ ಸಂಘಗಳ ವ್ಯಾಪ್ತಿ ಸಮಸ್ಯೆ
ಪಡಿತರ ಚೀಟಿಯೊಂದಿಗೆ ಈ ಸಂಕಷ್ಟದ ಸಮಯದಲ್ಲಿಯೇ ಮತ್ತೊಂದು ನಿಬಂಧನೆಯನ್ನು ರೈತರಿಗೆ ಸರ್ಕಾರ ಹಾಕಿದೆ. ಶೂನ್ಯ ಬಡ್ಡಿದರದ ಅಲ್ಪಾವಧಿ ಸಾಲ ಮರು ಪಾವತಿ ಸಮಯದಲ್ಲಿ (ಮಾರ್ಚ್ 31) ಜಾರಿಯಾದ ಆದೇಶದ ಪ್ರಕಾರ ರೈತರು ಎರಡು ಸಹಕಾರಿ ಸಂಘಗಳ ವ್ಯಾಪ್ತಿಯಲ್ಲಿ ಬೇರೆ ಬೇರೆ ಕೃಷಿ ಭೂಮಿ ಹೊಂದಿದ್ದರೆ ಅಥವಾ ವಾಸಸ್ಥಳ ಬೇರೆ ಬೇರೆ ಸಂಘಗಳ ವ್ಯಾಪ್ತಿಯಲ್ಲಿದ್ದರೆ, ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಾಗಿರುತ್ತಾರೊ ಆ ಸಂಘದ ವ್ಯಾಪ್ತಿಯಲ್ಲಿ ಪಡೆಯಲಾದ ಸಾಲಕ್ಕೆ ಮಾತ್ರ ಬಡ್ಡಿ ಸಹಾಯಧನ ಅನ್ವಯಿಸುತ್ತದೆ.
ಇದರಿಂದ ಸಂಘಗಳ ಗಡಿ ಭಾಗದ ರೈತರು ಒಂದು ಸಂಘದ ವ್ಯಾಪ್ತಿಯಲ್ಲಿ ಮನೆ ಮತ್ತೊಂದು ಸಂಘದ ವ್ಯಾಪ್ತಿಯಲ್ಲಿ ಕೃಷಿ ಜಮೀನು ಹೊಂದಿರುವ ರೈತರು ತೀವ್ರ ವಂಚನಗೆ ಒಳಗಾಗುತ್ತಾರೆ

ಕೇಂದ್ರ ಸರ್ಕಾರದ ನಿಯಮದಲ್ಲಿಲ್ಲ ಬದಲಾವಣೆ
ರಾಜ್ಯ ಸರ್ಕಾರದ ಆದೇಶದ ಸುತ್ತೋಲೆಯಿಂದ ಮಾತ್ರ ಈ ಎಲ್ಲ ಗೊಂದಲಗಳು ತಲೆದೋರಿವೆ. ಕೇಂದ್ರ ಸರ್ಕಾರ ಮಾತ್ರ ಯಾವುದೇ ಹೊಸ ನಿಯಮ, ನಿಬಂಧನೆಗಳನ್ನು ಸಾಲಮರುಪಾವತಿ ಸಂದರ್ಭದಲ್ಲಿ ತೂರಿಸಿಲ್ಲ. ಇದೆಲ್ಲದರ ಮಧ್ಯೆ ಸಾಲ ಮರುಪಾವತಿ ಸಮಯಾವಕಾಶವನ್ನು ಹೆಚ್ಚಿಸಬೇಕೆಂದು ರೈತರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಸಾಲದ ಬಾಂಡ್‌ನಲ್ಲಿ ಈ ಹೊಸ ನಿಯಮಗಳಿಲ್ಲ!
ವಿಪರ್ಯಾಸ ಎಂದರೆ ಸಾಲ ಪಡೆಯುವ ಸಂದರ್ಭದಲ್ಲಿ ರೈತರು ಕೊಟ್ಟಿರುವ ಬಾಂಡ್‌ನಲ್ಲಿ ಈ ಯಾವುದೇ ನಿಯಮ, ನಿಬಂಧನೆಗಳಿಲ್ಲ. ಕಳೆದ ವರ್ಷ ಸಾಲ ನೀಡುವಾಗ ರೈತರಿಂದ ನಿಯಮ, ನಿಬಂಧನೆಗಳೊಂದಿಗೆ ಅಧಿಕೃತ ಬಾಂಡ್‌ಗಳಿಗೆ ಸಹಿ ಪಡೆದು ಸಾಲ ವಿತರಣೆ ಮಾಡಲಾಗಿದೆ. ಆದರೆ ಈ ಬಾಂಡ್‌ನಲ್ಲಿ ಹಳೆಯ ನಿಯಮಗಳನ್ನು ಮಾತ್ರ ಬರೆಯಲಾಗಿದೆ. ಹೊಸ ನಿಯಮಗಳನ್ನು ಈಗ ಸಾಲ ಮರುಪಾವತಿ ಸಂದರ್ಭದಲ್ಲಿ ಆತುರಾತರವಾಗಿ ಸೇರಿಸಲಾಗಿದೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಲ ತುಂಬಲು ಸಮಯಾವಕಾಶ ಕೊಡಿ
ಕೇಂದ್ರ ಸರ್ಕಾರದ ಸೂಚನೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸಾಲ ಮರುಪಾವತಿ, ಕಂತುಗಳ ಪಾವತಿಗೆ ಕಾಲಾವಕಾಶ ಕೊಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ. ಆದರೆ ಸರ್ಕಾರದ ಭಾಗವಾಗಿರುವ ಸಹಕಾರ ಇಲಾಖೆ ಮಾತ್ರ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವುದಕ್ಕೆ ಮುಂದಾದಂತೆ ಕಾಣುತ್ತಿದೆ.
ಈಗ ಸರ್ಕಾರ ಹೊರಡಿಸಿರುವ ಹೊಸ ಸುತ್ತೋಲೆ ಹಿಂದಕ್ಕೆ ಪಡೆಯಬೇಕು. ಸಾಲ ಮರುಪಾವತಿ ಮಾಡಲು ರೈತರಿಗೆ ಇನ್ನೂ 3 ತಿಂಗಳ ಕಾಲಾವಕಾಶ ಕೊಡಬೇಕು. ಬಡ್ಡಿ ವಸೂಲಿಗಾರರಂತೆ ಈ ಲಾಕ್‌ಡೌನ್ ಸಂಕಷ್ಟದ ಸಂದರ್ಭದಲ್ಲಿ ಸಾಲ ವಸೂಲಿಗೆ ಸರ್ಕಾರವೇ ಮುಂದಾದರೆ ಖಾಸಗಿ ಬ್ಯಾಂಕ್‌ಗಳು, ಬಡ್ಡಿ ವ್ಯವಹಾರಸ್ಥರಿಗೆ ಏನೆಂದು ಆದೇಶ ಕೊಡುತ್ತದೆ? ಹೀಗಾಗಿ ಕಾಲಾವಕಾಶ ಕೊಡಿ ಎಂದು ನ್ಯಾಯಸಮ್ಮತ ಬೇಡಿಕೆಯನ್ನು ರೈತರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಸರ್ಕಾರ ಇತ್ತ ಗಮನಹರಿಸುವುದೇ?












Click it and Unblock the Notifications