ಎಫ್ ಡಿಐ ಬಂದ್ರೆ ಇಲ್ಲ ತೊಂದ್ರೆ : ರಾಹುಲ್ ಗಾಂಧಿ

ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ದೇಶದಲ್ಲಿ ಕೋಲ್ಡ್ ಸ್ಟೋರೇಜ್ ಗಳು ಹೆಚ್ಚಳವಾಗಲಿದೆ. ರೈತರು ತಮ್ಮ ಬೆಳೆಗಳನ್ನು ದೀರ್ಘಕಾಲದವರೆಗೂ ಸಂರಕ್ಷಿಸಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಲಿದೆ. ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು, ಆಹಾರ ನಿಯಂತ್ರಣ ಘಟಕಗಳು ಸ್ಥಾಪನೆಗೊಳ್ಳಲಿದೆ. ರೈತರಿಗೆ ಪೂರಕವಾಗಿ ಎಫ್ ಡಿಐ ಕಾರ್ಯ ನಿರ್ವಹಿಸಲಿದೆ ಎಂದು ರಾಹುಲ್ ಸಮರ್ಥಿಸಿಕೊಂಡರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿದೇಶದಿಂದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ವಿಫಲವಾಗಿತ್ತು. ಈಗ ಯುಪಿಎ ಸರ್ಕಾರದ ಮೇಲೆ ಗೂಬೆ ಕೂರಿಸಲು ನೋಡುತ್ತಿದೆ.
ಆರ್ಥಿಕ ಸುಧಾರಣೆ ಹಾಗೂ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ ಸಾಧ್ಯವಾದರೆ ಮಾತ್ರ ಜನ ಸಮಾನ್ಯರ ಜೀವನ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದು ರಾಹುಲ್ ಹೇಳಿದರು.
ಭ್ರಷ್ಟಾಚಾರ ವಿರೋಧಿ ಎಂದು ಹೇಳಿಕೊಂಡು ತಿರುಗುವ ಬಿಜೆಪಿ ನಾಯಕರು, ಮೊದಲಿಗೆ ಯುಪಿಎ ಸರ್ಕಾರ ಕೈಗೊಂಡಿರುವ ಭ್ರಷ್ಟಾಚಾರ ವಿರೋಧಿ ನೀತಿಯನ್ನು ಅಧ್ಯಯನ ಮಾಡಲಿ, ಸುಮಾರು 8 ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದು ಯುಪಿಎ ಸರ್ಕಾರ ಎಂಬುದು ನೆನಪಿರಲಿ,
ಜನ ಸಾಮಾನ್ಯರಿಗೂ ಸರ್ಕಾರದ ಕಾರ್ಯ ಚಟುವಟಿಕೆ ಮಾಹಿತಿ ಲಭ್ಯವಾಗಬೇಕು ಎಂಬ ಉದ್ದೇಶ ನಮ್ಮ ಸರ್ಕಾರಕ್ಕಿದೆ. ಶ್ರೀಸಾಮಾನ್ಯನ ಏಳಿಗೆಯಾಗದ ಹೊರತೂ ದೇಶ ಉದ್ಧಾರವಾಗುವುದಿಲ್ಲ ಎಂದು ರಾಹುಲ್ ಘೋಷಿಸಿದರು.
ಲೋಕಪಾಲ ಮಸೂದೆ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ. ಯುಪಿಎ ಸರ್ಕಾರ ಮಸೂದೆ ಜಾರಿಗೊಳಿಸಲು ಯತ್ನಿಸಿದಾಗ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು ಹಾಗೂ ಸಂಸತ್ತಿನ ಹೊರಗೆ ಕೂಡಾ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲಾಯಿತು. ಅದರೆ, ಮುಂದಿನ ದಿನಗಳಲ್ಲಿ ಲೋಕಪಾಲ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಲಾಗುವುದು ಎಂದು ರಾಹುಲ್ ಭರವಸೆ ನೀಡಿದರು.
ಪರಮೇಶ್ವರ್ ಮಿಂಚಿಂಗ್: ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ರಾಹುಲ್, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರ ಭಾಷಣದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೂ ಭಾಷಣ ಮಾಡುವ ಅದೃಷ್ಟ ಒದಗಿ ಬಂದಿತು.
ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಕೇವಲ 10 ಜನರಿಗೆ ಮಾತ್ರ ಮಾತನಾಡಲು ಅವಕಾಶವಿತ್ತು. ಅದರಲ್ಲಿ ಜಿ ಪರಮೇಶ್ವರ್ ಅವರು ಒಬ್ಬರಾಗಿದ್ದು ವಿಶೇಷ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ ಪರಮೇಶ್ವರ್ ಅವರು 127 ವರ್ಷ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷದ ಪುನರ್ ಪರಿಚಯ ಮಾಡಿಕೊಟ್ಟರು.
ನೆಹರು ಮನೆತನದ ತ್ಯಾಗ ಬಲಿದಾನ, ಕಾಂಗ್ರೆಸ್ ಸರ್ಕಾರ ದೇಶಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಹಾಡಿಹೊಗಳಿದರು, ಗರೀಬಿ ಹಠಾವೋ, ಬ್ಯಾಂಕ್ ರಾಷ್ಟ್ರೀಕರಣ, ಬಡವರಿಗೆ ಸೂರು, ಇಂದಿರಾಗಾಂಧಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಿದ್ಯುದೀಕರಣ, ಗ್ರಾಮ ನೈರ್ಮಲ್ಯ, ಉದ್ಯೋಗ ಖಾತ್ರಿ ಯೋಜನೆ ಮುಂತಾದ ಯೋಜನೆಗಳಿಂದ ಕಾಂಗ್ರೆಸ್ ವರ್ಚಸ್ಸು ವೃದ್ಧಿಸಿದೆ ಎಂದರು,
ದೇಶದ ಎಲ್ಲಾ ರಾಜ್ಯಗಳ ಪ್ರಮುಖ ನಾಯಕರು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ರಾಜ್ಯದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್ ಪಾಟೀಲ್ ಸೇರಿದಂತೆ ಸಂಸದರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸಿದ್ದರು.


Click it and Unblock the Notifications
