ಭಾರತದಲ್ಲಿ ಡಿ.1ರ ವೇಳೆಗೆ 190.27 ಲಕ್ಷ ಟನ್ ಗೋಧಿ ಸಂಗ್ರಹ
ಬೆಂಗಳೂರು, ಡಿಸೆಂಬರ್ 16: ಭಾರತವು ಡಿಸೆಂಬರ್ 1ರ ವೇಳೆಗೆ 190.27 ಲಕ್ಷ ಟನ್‌ಗಳಷ್ಟು ಗೋಧಿ ಸಂಗ್ರಹಿಸಿದೆ. ಇದು ಕಳೆದ ತಿಂಗಳ ಗೋಧಿ ಸಂಗ್ರಹಣೆಗಿಂತ ಕಡಿಮೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯುಷ್ ಗೋಯಲ್ ತಿಳಿಸಿದರು.
ಶುಕ್ರವಾರ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಅವರು, ಅಕ್ಟೋಬರ್ 1ರಂದು ಗೋಧಿ ಸಂಗ್ರಹವು ಅಗತ್ಯಕ್ಕಿಂತ ಅಧಿಕವಾಗಿ ಸಂಗ್ರಹಿಸಲಾಗಿತ್ತು. ಅಕ್ಟೋಬರ್ 1ರವರೆಗೆ ಅಗತ್ಯವಿದ್ದ 205.20ಲಕ್ಷ ಟನ್‌ಗಿಂತಲೂ ಅಧಿಕವಾಗಿ ಅಂದರೆ 227.46 ಲಕ್ಷ ಟನ್‌ನಷ್ಟು ಗೋಧಿ ಸಂಗ್ರಹವಾಗಿತ್ತು.
ಆದರೆ ಡಿಸೆಂಬರ್‌ನಲ್ಲಿ ಅಗತ್ಯಕ್ಕಿಂತ ಕಡಿಮೆ ಅಂದರೆ 190.27 ಲಕ್ಷ ಟನ್‌ನಷ್ಟು ಗೋಧಿ ಸಂಗ್ರಹಿಸಲಾಗಿದೆ. ಆಯಾ ಸಂದರ್ಭಗಳಲ್ಲಿ ಧಾನ್ಯಗಳ ಅಗತ್ಯತೆ ಒಂದೇ ರೀತಿಯಾಗಿರುವುದಿಲ್ಲ. ಹೀಗಾಗಿ ಡಿಸೆಂಬರ್ ಸಂಗ್ರಹಣೆ ಭಾರಿ ಪ್ರಮಾಣದ ಇಳಿಕೆ ಎಂದು ಹೇಳಲಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

2023ರ ಜನವರಿ 1ರಂದು ಗೋಧಿಯ ಸಂಗ್ರಹದ ಅವಶ್ಯಕತೆ 138 ಲಕ್ಷ ಟನ್ ಎಂದು ಹೇಳಲಾಗುತ್ತಿದ್ದು, ಅಂದು 159 ಲಕ್ಷ ಟನ್‌ನಷ್ಟು ಅಧಿಕ ಗೋಧಿ ಸಂಗ್ರಹವಾಗಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಮತ್ತು ಅದರ ಇತರ ಕಲ್ಯಾಣ ಯೋಜನೆಗಳು ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ಹೆಚ್ಚುವರಿ ಹಂಚಿಕೆಗಾಗಿ ಭಾರತ ಸರ್ಕಾರವು ಸಾಕಷ್ಟು ಆಹಾರ ಧಾನ್ಯ ದಾಸ್ತಾನುಗಳನ್ನು ಹೊಂದಿದೆ ಎಂದು ಆಹಾರ ಸಚಿವಾಲಯ ಮಾಹಿತಿ ನೀಡಿದೆ.
ಗೋಧಿ ರಫ್ತು ನಿಷೇಧ ನಂತರ ಚಿಲ್ಲರೆ ಬೆಲೆ ಏರಿಕೆ
ದೇಶದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಗೋಧಿಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆ.ಜಿಗೆ 31.38 ರೂ. ನಷ್ಟಿತ್ತು. ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದಾಗ ಮೇ ತಿಂಗಳಿನಿಂದ ಚಿಲ್ಲರೆ ದರ ಕ್ರಮೇಣ ಏರಿಕೆ ಆಯಿತು. 2022-23ರ ರಾಬಿ ಮಾರುಕಟ್ಟೆ ಋತುವಿನಲ್ಲಿ (ಏಪ್ರಿಲ್-ಜೂನ್) ಗೋಧಿ ಸಂಗ್ರಹಣೆಯು ಹಿಂದಿನ ವರ್ಷಕ್ಕಿಂತ 187.92 ಲಕ್ಷ ಟನ್‌ಗಳಿಗೆ ಇಳಿದಿದೆ. ಇದೇ ಸಂಗ್ರಹಣೆಯು ಕಳೆದ 2021-22ರ ವರ್ಷದಲ್ಲಿ 433.44 ಲಕ್ಷ ಟನ್‌ಗಳಷ್ಟಿತ್ತು.
ಭಾರತದ ಗೋಧಿ ಉತ್ಪಾದನೆಯು 2021-22ರ ಋತುವಿನಲ್ಲಿ ಹಿಂದಿನ ವರ್ಷದ (109.6 ಮಿ.ಟ) ಉತ್ಪಾದನೆಗಿಂತ ಇಳಿಕೆ (106.84 ಮಿ.ಟ.) ಇಳಿಕೆ ಆಗಿತ್ತು. ಕಾರಣ ಪಂಜಾಬ್ ಮತ್ತು ಹರಿಯಾಣದಂತಹ ಗೋಧಿ ಉತ್ಪಾದನೆಯ ರಾಜ್ಯಗಳಲ್ಲಿ ಅತೀ ಶಾಖದ ವಾತಾವರಣ ಏರ್ಪಟ್ಟಿತ್ತು. ಹೀಗಾಗಿ ಉತ್ಪಾದಣೆ ಇಳಿಕೆ ಕಂಡಿತ್ತು ಎಂದು ತಿಳಿದು ಬಂದಿದೆ.












Click it and Unblock the Notifications