ಈರುಳ್ಳಿ: ರಫ್ತು ಮಾಡುತ್ತಿದ್ದ ಭಾರತಕ್ಕೆ ಆಮದು ಮಾಡಿಕೊಳ್ಳುವ ಸ್ಥಿತಿ
ದೇಶದಲ್ಲಿ ಈರುಳ್ಳಿ ಉತ್ಪಾದನೆ ಕುಸಿದ ಪರಿಣಾಮ ಬೆಲೆ ತೀವ್ರ ಹೆಚ್ಚಳವಾಗಿದೆ. ಪೂರೈಕೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶದ ಜನತೆಗೆ ಅಗತ್ಯ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ವಿಧಿಸಿದೆ. ಈ ವರ್ಷದ ಡಿಸೆಂಬರ್ ವರೆಗೂ ಇದು ಮುಂದುವರಿಯುವ ಸಾಧ್ಯತೆ ಇದೆ. ಈರುಳ್ಳಿ ಉತ್ಪಾದನೆಯನ್ನು ಚೇತರಿಕೆ ಕಂಡುಬರದೆ ಹೋದಲ್ಲಿ ರಫ್ತು ನಿಷೇಧ ಮುಂದುವರಿಯಬಹುದು.
ಸಸ್ಯಹಾರ ಮತ್ತು ಮಾಂಸಾಹಾರ ಎರಡರಲ್ಲಿಯೂ ಈರುಳ್ಳಿ ತೀರಾ ಸಾಮಾನ್ಯವಾಗಿ ಬಳಕೆಯಾಗುವ ತರಕಾರಿ. ಹೀಗಾಗಿ ಇದಕ್ಕೆ ಬೇಡಿಕೆ ಹೆಚ್ಚು. ಏಷ್ಯಾದ ರಾಷ್ಟ್ರಗಳಲ್ಲಿ ಮುಖ್ಯವಾಗಿ ಭಾರತದ ಈರುಳ್ಳಿಗೆ ಹೆಚ್ಚು ಬೇಡಿಕೆ. ಈಗ ಭಾರತದ ರಫ್ತು ನಿಷೇಧದ ಪರಿಣಾಮ ಬಹುತೇಕ ರಾಷ್ಟ್ರಗಳಿಗೆ ತಟ್ಟಿದೆ. ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಿಗೆ ಭಾರತದಿಂದ ಅಪಾರ ಪ್ರಮಾಣದ ಈರುಳ್ಳಿ ರಫ್ತಾಗುತ್ತಿತ್ತು. ಭಾರತದಿಂದ ಆಮದು ಮಾಡಿಕೊಳ್ಳುವ ಸಾಗಣೆ ಪ್ರಕ್ರಿಯೆ ಸುಲಭವಾಗಿರುವುದು ಕೂಡ ಅಧಿಕ ಬೇಡಿಕೆಗೆ ಕಾರಣ.
ಕಡು ಕೆಂಪು, ತೆಳುಗೆಂಪು, ಬಿಳಿ, ಗುಲಾಬಿ, ಅಗ್ರಿಫೌಂಡ್ ರೆಡ್, ಪುಸಾ ರಟ್ನಾರ್, ಪುಸಾ ರೆಡ್, ಎನ್‌ಎಚ್‌ಆರ್‌ಡಿ ರೆಡ್, ಪುಸಾ ವೈಟ್ ರೌಂಡ್ ಅಲ್ಲದೆ ಹಳದಿ ಈರುಳ್ಳಿಯ ತಳಿಗಳೂ ಭಾರತದಲ್ಲಿವೆ.

ಶೇ 26ರಷ್ಟು ಉತ್ಪಾದನೆ ಕುಸಿತ
ಖಾರಿಫ್ ಮತ್ತು ತಡ ಖಾರಿಫ್ ಬೆಳೆ ಶೇ 26ರಷ್ಟು, ಅಂದರೆ 5.2 ಮಿಲಿಯನ್ ಟನ್ ಇಳಿಯುವ ಸಾಧ್ಯತೆ ಇದೆ ಎಂದು ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಇದರಿಂದ ಮುಂದೆಯೂ ಉತ್ಪಾದನೆ ಕುಸಿಯಲಿದ್ದು, ದರ ಏರಿಕೆಯ ಬಿಸಿ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.
ಭಾರತ ರಫ್ತು ನಿಷೇಧ ಸ್ಥಗಿತಗೊಳಿಸಿರುವುದರಿಂದ ನೆರೆಯ ದೇಶಗಳು ಭಾರತದ ಪ್ರತಿಸ್ಪರ್ಧಿ ಈರುಳ್ಳಿ ಪೂರೈಕೆದಾರರಾದ ಚೀನಾ, ಈಜಿಪ್ಟ್, ಟರ್ಕಿ ಮತ್ತು ಮಯನ್ಮಾರ್ ದೇಶಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಅಧಿಕ ಬೆಲೆ ತೆತ್ತು ಈರುಳ್ಳಿ ಖರೀದಿ ಮಾಡುವ ಅನಿವಾರ್ಯ ಪರಿಸ್ಥಿತಿಗೆ ಈ ದೇಶಗಳು ಸಿಲುಕಿವೆ.

ಏಷ್ಯಾದ ದೇಶಗಳಿಗೆ ಹೆಚ್ಚು ರಫ್ತು
2018-19ರ ಹಣಕಾಸು ವರ್ಷದಲ್ಲಿ ಭಾರತವು 2.2 ಮಿಲಿಯನ್ ಟನ್ ತಾಜಾ ಈರುಳ್ಳಿಯನ್ನು ರಫ್ತು ಮಾಡಿತ್ತು. ಈ ಈರುಳ್ಳಿ ಮೌಲ್ಯ 3,467.06 ಕೋಟಿ ರೂ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಈರುಳ್ಳಿ ಏಷ್ಯಾದ ದೇಶಗಳಿಗೇ ಹೋಗಿತ್ತು. ಈಗ ಭಾರತದ ಈರುಳ್ಳಿ ಸಿಗದ ಕಾರಣ ಪೂರೈಕೆ ಕಡಿಮೆಯಾಗಿದೆ. ಈಜಿಪ್ಟ್ ಮತ್ತು ಚೀನಾದಿಂದ ಈರುಳ್ಳಿ ತರಿಸಿಕೊಳ್ಳಲು ಶ್ರೀಲಂಕಾ ವ್ಯವಸ್ಥೆ ಮಾಡಿಕೊಂಡಿದೆ. ಒಂದು ವಾರದಲ್ಲಿಯೇ ಲಂಕಾದಲ್ಲಿ ಶೇ 50ರಷ್ಟು ಬೆಲೆ ಏರಿಕೆಯಾಗಿತ್ತು. ಒಂದು ಕೆ.ಜಿ. ಈರುಳ್ಳಿಗೆ 280-300 ಶ್ರೀಲಂಕಾ ರೂಪಾಯಿ ತಲುಪಿತ್ತು. ಈಗ ಅದಕ್ಕೂ ತುಟ್ಟಿಯಾಗಿದೆ.

ಬಾಂಗ್ಲಾದೇಶಕ್ಕೆ ಸಂಕಟ
ಬಾಂಗ್ಲಾದೇಶದಲ್ಲಿ ಒಂದು ಕೆ.ಜಿ. ಈರುಳ್ಳಿ ಬೆಲೆ 260 ಟಕಾ ($2.37) ಆಗಿದೆ. ಒಂದು ತಿಂಗಳ ಹಿಂದೆ ಇದು ಅರ್ಧದಷ್ಟು ಕಡಿಮೆ ಇತ್ತು. ಸಾಮಾನ್ಯವಾಗಿ ಇಲ್ಲಿ ಒಂದು ಕೆ.ಜಿ ಈರುಳ್ಳಿಗೆ 30 ಟಕಾ ಇರುತ್ತದೆ. ಈಜಿಪ್ಟ್‌ನಿಂದ ಈರುಳ್ಳಿ ಆಮದಿಗೆ ಒಂದು ತಿಂಗಳು ಬೇಕಾದರೆ, ಚೀನಾದಿಂದ ತರಿಸಿಕೊಳ್ಳಲು 25 ದಿನ ಬೇಕಾಗುತ್ತದೆ. ಆದರೆ ಭಾರತದಿಂದ ಕೆಲವೇ ದಿನಗಳ ಸಾಕು ಎನ್ನುತ್ತಾರೆ ಬಾಂಗ್ಲಾದೇಶದ ಸರ್ಕಾರಿ ಸ್ವಾಮ್ಯದ ವ್ಯಾಪಾರ ನಿಗಮದ ವಕ್ತಾರ ಹುಮಾಯೂನ್ ಕಬೀರ್.

ಆಮದು ಮೊರೆ ಹೋದ ಭಾರತ
ಜಗತ್ತಿನ ಎರಡನೆಯ ಅತಿ ಹೆಚ್ಚು ಈರುಳ್ಳಿ ಉತ್ಪಾದಕ ದೇಶವಾದ ಭಾರತ ಈಗ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ತಲುಪಿದೆ. ಹವಾಮಾನ ವೈಪರಿತ್ಯದಿಂದ ಮತ್ತೆ ಬೆಳೆ ಹಾನಿಯಾಗುವ ಅಪಾಯವಿರುವುದರಿಂದ ಮುನ್ನೆಚ್ಚರಿಕೆ ದೃಷ್ಟಿಯಿಂದ ಭಾರತ ಸಾಕಷ್ಟು ಪ್ರಮಾಣದ ಈರುಳ್ಳಿ ದಾಸ್ತಾನು ಇರಿಸಿಕೊಳ್ಳಬೇಕಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಆಮದು ಅನಿವಾರ್ಯ.

1.2 ಲಕ್ಷ ಟನ್ ಈರುಳ್ಳಿ ಆಮದು
ಹೆಚ್ಚುತ್ತಿರುವ ಈರುಳ್ಳಿ ದರವನ್ನು ನಿಯಂತ್ರಿಸುವ ಸಲುವಾಗಿ ಮಾರುಕಟ್ಟೆಗೆ ಅಧಿಕ ಈರುಳ್ಳಿಯನ್ನು ಪೂರೈಸಲು ಕೂಡಲೇ ರಫ್ತಿಗೆ ಅವಕಾಶ ನೀಡುವಂತೆ ಕೆಲವು ಗುಣಮಟ್ಟ ನಿಯಮಗಳ ಮೇಲೆ ನಿರ್ಬಂಧ ಸಡಿಲಿಸಲು ಭಾರತ ನಿರ್ಧರಿಸಿದೆ.
ಈಜಿಪ್ಟ್, ಟರ್ಕಿ ಮತ್ತು ಇರಾನ್‌ನಿಂದ ಈರುಳ್ಳಿ ಖರೀದಿಸಲು ತೀರ್ಮಾನಿಸಲಾಗಿತ್ತು. ಸಾರ್ವಜನಿಕ ವಲಯದ ವ್ಯಾಪಾರ ಸಂಸ್ಥೆ ಎಂಎಂಟಿಸಿ ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸಿ ಬೆಲೆ ತಗ್ಗಿಸುವ ಸಲುವಾಗಿ 6,090 ಟನ್ ಈರುಳ್ಳಿ ಆಮದಿಗೆ ಒಪ್ಪಂದ ಮಾಡಿಕೊಂಡಿದೆ.
ಕಳೆದ ವಾರ ಸಂಪುಟ ಸಭೆಯಲ್ಲಿ 1.2 ಲಕ್ಷ ಟನ್ ಈರುಳ್ಳಿ ಆಮದಿಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈಜಿಪ್ಟಿನಿಂದ 6,090 ಟನ್ ಈರುಳ್ಳಿ ಮುಂಬೈ ಬಂದರಿಗೆ ಶೀಘ್ರದಲ್ಲಿಯೇ ತಲುಪಲಿದೆ.












Click it and Unblock the Notifications